ಸಾರಾಂಶ
ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ತ್ರೋಬಾಲ್ ಕ್ರೀಡಾಕೂಟವನ್ನು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಡಾ. ಶೇಷಪ್ಪ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಬಗ್ಗೆ ಉತ್ಸಾಹ ಹೆಚ್ಚಾದಾಗ ಅವರು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿರುತ್ತಾರೆ. ಬೆಳ್ತಂಗಡಿ ಕಾಲೇಜು ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡುವಂತಾಗಲಿ ಎಂದು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಡಾ. ಶೇಷಪ್ಪ ಹಾರೈಸಿದರು.ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ತ್ರೋಬಾಲ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಉಜಿರೆಯ ಉದ್ಯಮಿ ಲಕ್ಷ್ಮಿ ಮೋಹನ್ ಕ್ರೀಡಾಂಗಣ ಉದ್ಘಾಟಿಸಿ, ಕಾಲೇಜಿನ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್, ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರತಿಭೆಗಳನ್ನು ಬೆಳೆಸಲು ಹಿರಿಯ ವಿದ್ಯಾರ್ಥಿ ಸಂಘ ಕಾಲೇಜಿನೊಂದಿಗೆ ಸಕ್ರಿಯವಾಗಿರುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಸುರೇಶ್ ವಿ., ಕಾಲೇಜಿನಲ್ಲಿ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಲು ಹೆಚ್ಚಿನ ಪರಿಶ್ರಮ ಹಾಕಲಾಗುತ್ತಿದ್ದು, ಮಕ್ಕಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ ಎಚ್.ಬಿ. ಇವರು ಕ್ರೀಡಾಕೂಟದ ಬಗ್ಗೆ ತಿಳಿಸಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೈಲೆಟ್ ಮೊರಾಸ್, ಉಪಾಧ್ಯಕ್ಷ ಉಸ್ಮಾನ್, ಸ್ನಾತ್ತಕೋತ್ತರ ವಿಭಾಗದ ಸಂಚಾಲಕ ಡಾ. ರವಿ ಎಂ.ಎನ್., ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸವಿತಾ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರರಾಜ , ಕ್ರೀಡಾ ಕಾರ್ಯದರ್ಶಿ ರೂಪೇಶ್ ಹಾಗೂ ಗುರುಪ್ರಸಾದ್ ಇದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ಪದ್ಮನಾಭ ಕೆ ಸ್ವಾಗತಿಸಿ, ಐಕ್ಯೂಎಸಿ ಸಂಚಾಲಕರಾದ ಡಾಕ್ಟರ್ ಕುಶಲಪ್ಪ ಎಸ್ ವಂದಿಸಿದರು.