ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆಯಲಿರುವ ಯಕ್ಷಗಾನ ವಿಶೇಷ ಪರೀಕ್ಷೆಗೆ ಪೂರ್ವಭಾವಿಯಾಗಿ ಯಕ್ಷಗಾನ ಕ್ಷೇತ್ರದ ತಜ್ಞರ ಸಭೆಯು ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯಕ್ಷಗಾನ ವಿಶೇಷ ಪರೀಕ್ಷೆಯ ಸ್ವರೂಪ, ಮಾರ್ಗಸೂಚಿಯ ಬಗ್ಗೆ ಚರ್ಚಿಸಲಾಯಿತು. ಈ ವಿಶೇಷ ಪರೀಕ್ಷೆಯನ್ನು ವಿಶ್ವವಿದ್ಯಾನಿಲಯದ ನಿಯಮಾನುಸಾರವಾಗಿ ಪ್ರಾಥಮಿಕ, ಮಾಧ್ಯಮಿಕ, ವಿದ್ವತ್ ಪೂರ್ವ ಹಾಗೂ ವಿದ್ವತ್ ಎಂಬ ಹಂತಗಳಲ್ಲಿ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಈ ಶೈಕ್ಷಣಿಕ ಆಯಾಮವು ಯಕ್ಷಗಾನದ ಶಿಕ್ಷಣ ಕೇಂದ್ರಗಳು ಮತ್ತು ಗುರುಮುಖೇನ ಯಕ್ಷಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ನೇರವಾಗಿ ಪರೀಕ್ಷೆ ಬರೆಯುವ ಅವಕಾಶವನ್ನು ಕಲ್ಪಿಸಲಾಗುವುದು. ಪಠ್ಯಕ್ರಮವು ಪ್ರಾಥಮಿಕ, ಮಾಧ್ಯಮಿಕ ಹಂತದಲ್ಲಿ ತೆಂಕುತಿಟ್ಟು, ಬಡಗುತಿಟ್ಟು ಯಕ್ಷಗಾನದ ಹಿಮ್ಮೇಳ ಮುಮ್ಮೇಳದ ಸಮಗ್ರ ತಿಳುವಳಿಕೆಯನ್ನು ನೀಡಲಿದ್ದು, ವಿದ್ವತ್ ಪೂರ್ವ ಹಾಗೂ ವಿದ್ವತ್ ನೆಲೆಯಲ್ಲಿ ಯಕ್ಷಗಾನದ ಸೂಕ್ಷ್ಮ ಅಧ್ಯಯನ, ಸಂಶೋಧನೆಗಳನ್ನು ಒಳಗೊಳ್ಳಲಿದೆ ಎಂಬ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಯಕ್ಷಗಾನ ಕೇಂದ್ರದ ಯಕ್ಷಗಾನ ಗುರುಗಳಾದ ದೀವಿತ್ ಕೋಟ್ಯಾನ್ ಅವರು ಯಕ್ಷಗಾನ ಪರೀಕ್ಷೆ, ಪಠ್ಯಕ್ರಮಗಳ ಸ್ವರೂಪವನ್ನು ಕುರಿತ ಕರಡು ಪ್ರತಿಯನ್ನು ಸಭೆಗೆ ಮಂಡಿಸಿದರು. ಯಕ್ಷಗಾನ ಕೇಂದ್ರದ ನಿರ್ದೇಶಕರಾದ ಡಾ.ಧನಂಜಯ ಕುಂಬ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಯಕ್ಷಗಾನ ವಿಶೇಷ ಪರೀಕ್ಷೆಯ ರೂಪುರೇಷೆಗಳನ್ನು ವಿವರಿಸಿದರುಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಗಂಗಾಧರ್, ಸಿಂಡಿಕೇಟ್ ಸದಸ್ಯರಾದ ಮಹಾದೇಶ್ ಮಂಗಳೂರು ವಿವಿ ಕುಲಸಚಿವರಾದ ಪ್ರೊ.ಗಣೇಶ್ ಸಂಜೀವ್, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ನಾಗಪ್ಪ ಗೌಡ, ಯಕ್ಷಗಾನ ಕ್ಷೇತ್ರದ ಹಿರಿಯ ವಿದ್ವಾಂಸರಾದ ಡಾ.ಎಂ. ಪ್ರಭಾಕರ ಜೋಶಿ, ಪ್ರೊ.ಎಂ.ಎಲ್. ಸಾಮಗ, ಡಾ.ಪಾದೇಕಲ್ಲು ವಿಷ್ಣು ಭಟ್, ಡಾ.ಕೆ.ರಾಘವ ನಂಬಿಯಾರ್, ಪ್ರೊ.ಶೀಪತಿ ಕಲ್ಲೂರಾಯ, ಪಟ್ಲ ಸತೀಶ್ ಶೆಟ್ಟಿ, ಡಾ.ಗಣರಾಜ ಕುಂಬ್ಳೆ, ಡಾ.ಚಂದ್ರಶೇಖರ ದಾಮ್ಲೆ, ಮುರಳಿ ಕಡೆಕಾರ್, ಪ್ರಕಾಶ್ ಮೂಡಿತ್ತಾಯ, ಡಾ.ನಾಗವೇಣಿ ಮಂಚಿ, ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ರಾಧಾಕೃಷ್ಣ ಕಲ್ಚಾರ್, ಸುಜಯೀಂದ್ರ ಹಂಧೆ, ಪ್ರಥ್ವಿರಾಜ್ ಕವತ್ತಾರು, ಭಾಸ್ಕರ ರೈ ಕುಕ್ಕುವಳ್ಳಿ, ಪಣಂಬೂರು ವಾಸುದೇವ ಐತಾಳ್, ಕೃಷ್ಣ ಪ್ರಕಾಶ್ ಉಳಿತ್ತಾಯ, ಡಾ.ಆರತಿ ಪಟ್ರಮೆ, ರಾಜಾರಾಂ ಹೊಳ್ಳ ಕೈರಂಗಳ ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ಕುಲಸಚಿವ ಸುಚೇತ, ಕಚೇರಿ ಅಧೀಕ್ಷಕರಾದ ಸಂಧ್ಯಾ, ಯಕ್ಷಗಾನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ಸತೀಶ್ ಕೊಣಾಜೆ, ಸಿಬ್ಬಂದಿಗಳಾದ ಸ್ವಾತಿರಾವ್, ಸರಿತಾ ಮೊದಲಾದವರು ಸಹಕರಿಸಿದರು.ಯಕ್ಷಗಾನಕ್ಕೆ ಶೈಕ್ಷಣಿಕ ಆಯಾಮ: ಯಕ್ಷಗಾನವು ನಮ್ಮನಾಡಿನ ಹೆಮ್ಮೆಯ ಕಲೆ ಮತ್ತು ಸಂಸ್ಕೃತಿಯ ಪ್ರತೀಕವೂ ಹೌದು. ಈ ಶ್ರೇಷ್ಠ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮಗೆಲ್ಲರಿಗೂ ಇದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಮಹತ್ವದ ಹೆಜ್ಜೆಯನ್ನಿಡುತ್ತಿದ್ದು ಯಕ್ಷಗಾನಕ್ಕೆ ಶೈಕ್ಷಣಿಕ ಆಯಾಮ ನೀಡುವ ಉದ್ದೇಶದೊಂದಿಗೆ ಯಕ್ಷಗಾನ ವಿಶೇಷ ಪರೀಕ್ಷೆ''ಯನ್ನು ನಡೆಸಲು ಯೋಜನೆ ರೂಪಿಸಿಕೊಂಡಿದೆ. ಇದರಿಂದ ಯಕ್ಷಗಾನಕ್ಕೊಂದು ಶೈಕ್ಷಣಿಕ ಸ್ಪರ್ಶ ಒದಗಿಬರಲಿದ್ದು, ಪರೀಕ್ಷೆಯ ಸ್ವರೂಪ ಹಾಗೂ ಪಠ್ಯಕ್ರಮದ ಬಗ್ಗೆ ಚರ್ಚಿಸಲು ನಡೆದ ಸಭೆಯಲ್ಲಿ ಹಿರಿಯ ತಜ್ಞರು ಸಲಹೆ ಮಾರ್ಗದರ್ಶನದೊಂದಿಗೆ ಪ್ರೋತ್ಸಾಹ ನೀಡಿದ್ದಾರೆ.
ಪ್ರೊ.ಪಿ.ಎಲ್.ಧರ್ಮ ಕುಲಪತಿಗಳು ಮಂಗಳೂರು ವಿವಿಮಂಗಳೂರು ವಿ.ವಿ.: ಯಕ್ಷಗಾನಕ್ಕೆ ಶೈಕ್ಷಣಿಕ ಸ್ಪರ್ಶ
ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆಯಲಿರುವ ಯಕ್ಷಗಾನ ವಿಶೇಷ ಪರೀಕ್ಷೆಗೆ ಪೂರ್ವಭಾವಿಯಾಗಿ ಯಕ್ಷಗಾನ ಕ್ಷೇತ್ರದ ತಜ್ಞರ ಸಭೆಯು ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.