ಕನ್ನಡಪ್ರಭ ವಾರ್ತೆ ಟೇಕಲ್

ಮುಸುಕುಧಾರಿ ಪುಡಿ ರೌಡಿಗಳು ಬಾರ್‌ಗಳಿಗೆ ನುಗ್ಗಿ ದಾಂದಲೆ ನಡೆಸಿರುವ ಘಟನೆ ಮಾಲೂರು ತಾಲೂಕಿನ ತೊರಲಕ್ಕಿ ಮತ್ತು ಮಾಸ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ರಾತ್ರಿ ಸುಮಾರು ೯.೪೫ಕ್ಕೆ ಘಟನೆ ನಡೆದಿದ್ದು, ಸುಮಾರು ಆರು ಜನಕ್ಕಿಂತ ಹೆಚ್ಚು ಮಂದಿ ಈ ದಾಂದಲೆ ನಡೆಸಿದ್ದಾರೆ. ತೊರಲಕ್ಕಿ ಎಚ್.ಕೆ. ಬಾರ್‌ನಲ್ಲಿ ಮ್ಯಾನೇಜರ್ ಅರುಣ್ ಮೇಲೆ ಹಲ್ಲೆ ಮಾಡಿದ್ದು, ಹಲವಾರು ಬಿಯರ್ ಬಾಟಲ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಅಲ್ಲದೆ ಹೊಡೆದು ಹಾಕಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದ ಡಾಬದಲ್ಲಿದ್ದ ವ್ಯಕ್ತಿಯೊಬ್ಬ ರೌಡಿಗಳು ಬಾರಿಗೆ ಹೋಗಿದ್ದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದುದನ್ನು ತಿಳಿದು ಆರೋಪಿಗಳು ಅವರ ಬಳಿ ಇದ್ದ ಮೊಬೈಲ್‌ನನ್ನು ಕಸಿದುಕೊಂಡಿದ್ದಾರೆ, ಅದೇ ರೀತಿ ಮಾಲೂರು ಮಾಸ್ತಿ ಮಧ್ಯೆ ರಸ್ತೆಯ ಬಾರ್‌ನಲ್ಲಿ ಹಾಗೂ ಗಂಗಸಂದ್ರದ ಬಾರ್‌ನಲ್ಲಿಯೂ ದಾಂದಲೆ ನಡೆಸಿದ್ದಾರೆ.ದೆಸಿಸಿ ಕ್ಯಾಮೆರಾದಲ್ಲಿ ದಾಂದಲೆ ಕೃತ್ಯ ಸೆರೆಯಾಗಿದ್ದು, ರೌಡಿಗಳಾದ ಪ್ರತಾಪ್ ಮತ್ತು ಮುರುಗೇಶ್‌ ಗ್ಯಾಂಗ್‌ನಿಂದಲೇ ದಾಂದಲೆಯಾಗಿದೆ. ಮೈಸೂರು ಜಿಲ್ಲೆಗೆ ಗಡಿಪಾರಾಗಿದ್ದ ರೌಡಿಶೀಟರ್ ಪ್ರತಾಪ್ ಮಾಲೂರು ತಾಲೂಕಿಗೆ ವಾಪಸಾಗಿದ್ದು, ಇನ್ನು ಮುರುಗೇಶ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪ ಪಟ್ಟಿಯಲ್ಲಿದ್ದ. ಇನ್ನು ಕೆಲವರು ಇವರ ಜೊತೆಯಲ್ಲಿ ಇದ್ದಾರೆಂದು ತಿಳಿದು ಬಂದಿದೆ.ಸ್ಥಳಕ್ಕೆ ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್, ಅಡಿಷನಲ್ ಎಸ್ಪಿ ಜಗದೀಶ್, ರವಿಶಂಕರ್, ಡಿವೈಎಸ್ಪಿ ಕೃಷ್ಣಪ್ಪ ಭೇಟಿ ನೀಡಿದ್ದು ಮಾಸ್ತಿ ಠಾಣೆಯಲ್ಲಿ ಪ್ರತ್ಯೇಕ ನಾಲ್ಕು ದೂರಗಳು ದಾಖಲಾಗಿದ್ದು, ಆರೋಪಿಗಳನ್ನು ಸೆರೆ ಹಿಡಿಯಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಎರಡು ತಂಡಗಳನ್ನು ರಚಿಸಿದ್ದು ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.