ಬೊಳುವಾರು ಮಹಮ್ಮದ್ ಅವರ ಕಾದಂಬರಿ ಆಧಾರಿತ ಸ್ವಾತಂತ್ರ್ಯದ ಓಟ ನಾಟಕವನ್ನು ಪ್ರದರ್ಶಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ 1 ಕೋಟಿ ರುಪಾಯಿ ಹಣ ನೀಡಿದ್ದರು ಎಂದು ಶಿವಮೊಗ್ಗದ ರಂಗಾಯಣ ನಿರ್ದೇಶಕ ಪ್ರಸನ್ನ ಡಿ. ಸಾಗರ ತಿಳಿಸಿದರು.
ಕನ್ನಡಪ್ರಭ ವಾರ್ತೆ, ತುಮಕೂರುಬೊಳುವಾರು ಮಹಮ್ಮದ್ ಅವರ ಕಾದಂಬರಿ ಆಧಾರಿತ ಸ್ವಾತಂತ್ರ್ಯದ ಓಟ ನಾಟಕವನ್ನು ಪ್ರದರ್ಶಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ 1 ಕೋಟಿ ರುಪಾಯಿ ಹಣ ನೀಡಿದ್ದರು ಎಂದು ಶಿವಮೊಗ್ಗದ ರಂಗಾಯಣ ನಿರ್ದೇಶಕ ಪ್ರಸನ್ನ ಡಿ. ಸಾಗರ ತಿಳಿಸಿದರು.ಅವರು ತುಮಕೂರಿನ ಝೆನ್ ಟೀಮ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಶಿವಮೊಗ್ಗ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯದ ಓಟ ನಾಟಕ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಕೃತಿಯನ್ನು ಪ್ರೇಕ್ಷಕರೆದುರು ತರಬೇಕೆಂದು ಯೋಚಿಸಿ ಬೊಳುವಾರು ಅವರಲ್ಲಿ ಪ್ರಸ್ತಾಪವಿಟ್ಟಾಗ ಅವರು ಹೇಗೆ ಮಾಡುತ್ತೀರಿ ಅಂತ ಅನುಮಾನದಿಂದಲೇ ಒಪ್ಪಿಗೆ ಕೊಟ್ಟರು. ಮುಂದೆ ರಂಗಾಯಣ, ಶಿವಮೊಗ್ಗದಿಂದ ಆಯವ್ಯಯದ ಸಂದರ್ಭದಲ್ಲಿ ಸರ್ಕಾರಕ್ಕೆ ಈ ಪ್ರಸ್ತಾಪವನೆಯನ್ನು ಸಲ್ಲಿಸಿದೆವು. ಈ ಪ್ರಸ್ತಾವನೆಯನ್ನು ಅಂಗೀಕರಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯದಲ್ಲಿ ಆರ್ಥಿಕ ಅನುದಾನ ಘೋಷಿಸಿ ರಂಗರೂಪ ಮಾಡುವ ಕಾರ್ಯಕ್ಕೆ ಸಹಕರಿಸಿದರು ಎಂದರು.ಸಿದ್ದರಾಮಯ್ಯನವರಿಗೂ, ಅಂದಿನ ಉಪಮುಖ್ಯಮಂತ್ರಿ ಹಾಗೂ ಈಗ ಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ಅವರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಅವರು ರಾಜ್ಯದಲ್ಲಿರುವ ರಂಗಾಯಣಗಳು ಹಲವಾರು ವರ್ಷಗಳಿಂದ ಹೊಸತನದ ನಾಟಕಗಳನ್ನು ಜನಕ್ಕೆ ತೋರಿಸುತ್ತಾ ಬಂದಿದೆ. ಈಗ ಶಿವಮೊಗ್ಗ ರಂಗಾಯಣದವರು ಕೂಡ ಸ್ವಾತಂತ್ರ್ಯದ ಓಟ ನಾಟಕದ ಮೂಲಕ ಪ್ರಸ್ತತ ಸಮಾಜದ ಬಗ್ಗೆ ವಿಶ್ಲೇಷಣಾತ್ಮಕವಾಗಿ ನಾಟಕ ಮಾಡಿರುವುದು ಖುಷಿಯ ಸಂಗತಿ ಎಂದರು. ನಾಟಕ ರೂಪಾಂತರ ಮಾಡಿರುವ ಗೋಮಾರದಹಳ್ಳಿ ಮಂಜುನಾಥ್ ಹಾಗೂ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಅವರು ಇದೇ ಜಿಲ್ಲೆಯವರು ಎಂಬುದು ನಮ್ಮ ಹೆಗ್ಗಳಿಕೆ ಎಂದ ಅವರು 1100 ಪುಟದ ಈ ಕಾದಂಬರಿಯನ್ನು ೩ ಗಂಟೆಗೆ ರಂಗ ಪ್ರಯೋಗಕ್ಕೆ ಒಳಪಡಿಸುವುದು ಅತ್ಯಂತ ಸವಾಲಿನ ಕೆಲಸ. ಆ ಕೆಲಸವನ್ನು ನಿರ್ದೇಶಕರು ಮಾಡಿದ್ದಾರೆ. ನಿಜಕ್ಕೂ ಇದು ಅಭಿನಂದನೀಯ ಎಂದರು. ಸಮಾಜ ಸೇವಕ ಬೆಳಗುಂಬ ವೆಂಕಟೇಶ್ ಮಾತನಾಡಿ ನಾಟಕಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಒಂದು ಪ್ರಭಲ ಮಾದ್ಯಮ. ರಂಗಾಯಣ ಶಿವಮೊಗ್ಗದವರು ವಿಭಿನ್ನ ನಾಟಕವನ್ನು ರಾಜ್ಯದ ಜನರಿಗೆ ತೋರಿಸುತ್ತಿರುವುದು ಅಭಿನಂದನೀಯ ಎಂದರು. ಪತ್ರಕರ್ತ ಎಸ್. ನಾಗಣ್ಣ ಅವರು ನಾಟಕಕ್ಕೆ ಶುಭ ಕೋರಿದರು. ವೇದಿಕೆಯಲ್ಲಿ ಝೆನ್ ಟೀಮ್ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಗೋಮಾರದಹಳ್ಳಿ ಮಂಜುನಾಥ್ ಮತ್ತಿತರರು ಇದ್ದರು.