ಗದಗ: ಕಾಂಗ್ರೆಸ್‌ನ ಹಿರಿಯ ಮುಖಂಡ, ಗದಗ ಶಾಸಕ ಎಚ್.ಕೆ. ಪಾಟೀಲ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿರುವುದಕ್ಕೆ ಜಿಲ್ಲೆಯಲ್ಲಿ ರಾಜಕೀಯ ಸಂಚಲನ ಸೃಷ್ಟಿಯಾಗಿದ್ದು, ಬೆಂಬಲಿಗರು ಮತ್ತು ಕಾಂಗ್ರೆಸ್ ಜನಪ್ರತಿನಿಧಿಗಳ ಆಕ್ರೋಶದ ಕಟ್ಟೆಯೊಡೆದಿದೆ. ಶುಕ್ರವಾರ ನಗರಸಭೆಯ ಸದಸ್ಯರು ತಮ್ಮ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ರಾಜ್ಯ ನಾಯಕತ್ವಕ್ಕೆ ಗಂಭೀರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ನಗರಸಭೆಯ 17 ಚುನಾಯಿತ ಹಾಗೂ 5 ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಒಟ್ಟು 22 ಜನಪ್ರತಿನಿಧಿಗಳು, ಆಡಳಿತ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ತಮ್ಮ ಅಧಿಕೃತ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ನೂರಾರು ಬೆಂಬಲಿಗರು ಕಾಂಗ್ರೆಸ್ ಸರ್ಕಾರದ ನಿರ್ಧಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಂಗವಿಕಲ ಸಂಪುಟ: ರಾಜೀನಾಮೆ ಸಲ್ಲಿಕೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಗರಸಭೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು, ರಾಜ್ಯ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಎಚ್.ಕೆ. ಪಾಟೀಲರು ಇಲ್ಲದ ರಾಜ್ಯ ಸಚಿವ ಸಂಪುಟವು ಅಂಗವಿಕಲ ಸಂಪುಟವಿದ್ದಂತೆ ಎಂದು ಲೇವಡಿ ಮಾಡಿದ ನಾಯಕರು, ಪಕ್ಷಕ್ಕಾಗಿ ದಶಕಗಳ ಕಾಲ ಪ್ರಾಮಾಣಿಕವಾಗಿ ದುಡಿದ ಹಿರಿಯ ನಾಯಕರನ್ನು ಪಕ್ಕಕ್ಕೆ ಸರಿಸಿ, ಬರೀ ಚಮಚಾಗಳಿಗೆ ಮಾತ್ರ ಸಚಿವ ಸ್ಥಾನ ಹಂಚಲಾಗುತ್ತಿದೆ ಎಂದು ನೇರವಾಗಿಯೇ ವಾಗ್ದಾಳಿ ನಡೆಸಿದರು.

ರಾಜ್ಯದ ನೆಲ, ಜಲ, ಗಡಿ ಹಾಗೂ ಕಾನೂನು ಸಂಕಷ್ಟಗಳು ಎದುರಾದಾಗ ಮತ್ತು ಪ್ರಮುಖ ಕಾನೂನು ಸಲಹೆಗಳ ಅಗತ್ಯವಿದ್ದಾಗ ಸರ್ಕಾರಕ್ಕೆ ಎಚ್.ಕೆ. ಪಾಟೀಲರ ಅನುಭವ ಬೇಕಾಗುತ್ತದೆ. ಅಲ್ಲದೆ, ಪ್ರಸ್ತುತ ಮೂಡಾ ಪ್ರಕರಣದಂತಹ ಕಠಿಣ ಸನ್ನಿವೇಶಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾನೂನಾತ್ಮಕವಾಗಿ ರಕ್ಷಿಸಲು ಹಾಗೂ ಬಚಾವ್ ಮಾಡಲು ಪಾಟೀಲರ ಪ್ರಭಾವಶಾಲಿ ಜ್ಞಾನ ಮತ್ತು ಮುಖಂಡತ್ವವೇ ಆಸರೆಯಾಗಿದೆ. ಆದರೆ ಅಧಿಕಾರ ಹಾಗೂ ಸಚಿವ ಸ್ಥಾನ ಹಂಚಿಕೆ ವಿಷಯ ಬಂದಾಗ ಅವರನ್ನು ವ್ಯವಸ್ಥಿತವಾಗಿ ಕಡೆಗಣಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.

ಉಕ ಪ್ರತ್ಯೇಕ ಹೋರಾಟ: ಈ ವೇಳೆ ಕೆಲ ಕಾಂಗ್ರೆಸ್ ನಾಯಕರು, ಉತ್ತರ ಕರ್ನಾಟಕ ಭಾಗಕ್ಕೆ ಸರ್ಕಾರದ ಹೊಸ ಆಡಳಿತದಲ್ಲಿ ಸಾಲು ಸಾಲು ಅನ್ಯಾಯಗಳಾಗುತ್ತಿವೆ. ಎಚ್.ಕೆ. ಪಾಟೀಲರಿಗೆ ತಕ್ಷಣವೇ ಸಚಿವ ಸ್ಥಾನ ನೀಡದಿದ್ದರೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆ ಹಾಗೂ ಇಡೀ ಉತ್ತರ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಹೊಡೆತ ಬೀಳಲಿದೆ. ಪ್ರಾದೇಶಿಕ ಅಸಮಾನತೆ ಹೀಗೆಯೇ ಮುಂದುವರಿದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದರು. ಎಚ್.ಕೆ. ಪಾಟೀಲರು ಸಚಿವರಾಗುವವರೆಗೂ ಶರ್ಟ್ ಹಾಕಲ್ಲ: ಅಭಿಮಾನಿಯ ಹೈಡ್ರಾಮಾ


ಗದಗ: ಜಿಲ್ಲಾಧಿಕಾರಿ ಕಚೇರಿ ಎದುರು ಎಚ್.ಕೆ. ಪಾಟೀಲ್ ಅವರ ಕಟ್ಟಾ ಅಭಿಮಾನಿ ಹಾಗೂ ಕಾಂಗ್ರೆಸ್ ಸೇವಾದಳದ ಹಿರಿಯ ಸದಸ್ಯ ರಾಚಪ್ಪ ಗಡಾದ್ ನಡೆಸಿದ ಶರ್ಟ್ ಲೆಸ್ ಪ್ರತಿಭಟನೆ ಸಾರ್ವಜನಿಕರ ಗಮನ ಸೆಳೆಯಿತು.

ಎಚ್.ಕೆ. ಪಾಟೀಲರಿಗೆ ಸಚಿವಸ್ಥಾನ ಕೈ ತಪ್ಪಿರುವುದಕ್ಕೆ ತೀವ್ರ ಭಾವುಕರಾದ ರಾಚಪ್ಪ, ಮೇಲಂಗಿ ಕಳಚಿ ಹಾಕಿ ಕಚೇರಿ ಆವರಣದಲ್ಲೇ ಕುಳಿತು ತಮ್ಮ ವಿಶಿಷ್ಟ ವಿರೋಧ ದಾಖಲಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಚಪ್ಪ ಗಡಾದ್, ನಾನು ಕಳೆದ 40 ವರ್ಷಗಳಿಂದ ರಾಜಕೀಯವನ್ನು ಹತ್ತಿರದಿಂದ ನೋಡುತ್ತಿದ್ದೇನೆ. ಆಧುನಿಕ ರಾಜಕಾರಣದಲ್ಲಿ ಬಸವಣ್ಣನವರಂತೆಯೇ ನೇರ, ನಿಷ್ಠುರ ಹಾಗೂ ಕಳಂಕ ರಹಿತ ನಡೆ- ನುಡಿಯುಳ್ಳ ಎಚ್.ಕೆ. ಪಾಟೀಲರಿಗೆ ನೋವು ಕೊಡುವ ಕೆಲಸವನ್ನು ಪಕ್ಷದ ನಾಯಕರು ಮಾಡಬಾರದು ಎಂದು ಕಣ್ಣೀರಿಟ್ಟರು.

ತಾವು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದ ಅವರು, ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ಸಿಗುವ ವರೆಗೂ ತಾವು ಯಾವುದೇ ಕಾರಣಕ್ಕೂ ಶರ್ಟ್(ಅಂಗಿ) ಧರಿಸುವುದಿಲ್ಲ ಎಂದು ಸ್ಥಳದಲ್ಲೇ ಶಪಥ ಮಾಡಿದರು.