ಹಾವೇರಿ: ತಾಲೂಕಿನ ದೇವಗಿರಿ ಗ್ರಾಮದ ಮಾರ್ಗವಾಗಿ ಜಿಲ್ಲಾಡಳಿತ ಭವನ ಸಂಪರ್ಕಿಸುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟು ಗುಂಡಿಗಳಿಂದ ಕೂಡಿರುವ ಹಿನ್ನೆಲೆ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿ ಮಾಡದ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ರಸ್ತೆ ಮಧ್ಯೆ ಗುಂಡಿಗಳಲ್ಲೇ ಹೂವಿನ ಗಿಡ ಹಾಗೂ ಪಪ್ಪಾಯ ಸಸಿಗಳನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಗಿರಿ ಮಾರ್ಗವು ಹಾವೇರಿ ನಗರದಿಂದ ಸವಣೂರು ಹಾಗೂ ಲಕ್ಷ್ಮೇಶ್ವರ ಕಡೆಗೆ ಸಂಚರಿಸುವ ಸಾವಿರಾರು ವಾಹನಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಅಲ್ಲದೆ ಜಿಲ್ಲಾಡಳಿತ ಭವನಕ್ಕೆ ವಿವಿಧ ಕೆಲಸಗಳ ನಿಮಿತ್ತ ಆಗಮಿಸುವ ಸಾರ್ವಜನಿಕರು, ಸರ್ಕಾರಿ ನೌಕರರು ಹಾಗೂ ಪ್ರತಿನಿತ್ಯ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ರಸ್ತೆಯಲ್ಲಿರುವ ದೊಡ್ಡ ದೊಡ್ಡ ಗುಂಡಿಗಳಿಂದ ವಾಹನ ಸಂಚಾರ ದುಸ್ತರವಾಗಿದ್ದು, ಬೈಕ್ ಸವಾರರು ಅಪಘಾತಕ್ಕೀಡಾಗುವ ಭೀತಿ ಎದುರಿಸುತ್ತಿದ್ದಾರೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ನಿಂತು ರಸ್ತೆಯ ಸ್ಥಿತಿ ಇನ್ನಷ್ಟು ಹದಗೆಡುತ್ತಿದ್ದು, ಗುಂಡಿಗಳ ಆಳ ಅರಿಯದೆ ವಾಹನಗಳು ಸಿಲುಕುವ ಘಟನೆಗಳು ಸಾಮಾನ್ಯವಾಗಿವೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ದೇವಗಿರಿ ರಸ್ತೆಯಲ್ಲಿ ಪ್ರತಿದಿನ ಸಂಚರಿಸುವುದು ಜೀವ ಕೈಯಲ್ಲಿ ಹಿಡಿದು ಹೋಗುವಂತಾಗಿದೆ. ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯೇ ಈ ದುಸ್ಥಿತಿಯಲ್ಲಿರುವುದು ವಿಪರ್ಯಾಸ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಸ್ಥಳೀಯ ನಿವಾಸಿ ಶಿವಾನಂದ ಜೆ.ಎಸ್. ಹೇಳಿದರು.