ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿ ಅವರ ಮುಂದೆ ಇದೀಗ ಅಭಿವೃದ್ಧಿಯ ದೊಡ್ಡ ಸವಾಲು ನಿಂತಿದೆ. ಮುಂಬರುವ ಸುಮಾರು ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಜಿಲ್ಲೆಯ ಬಹುಕಾಲದ ಸಮಸ್ಯೆಗಳನ್ನು ಪರಿಹರಿಸಿ ಜನರ ನಿರೀಕ್ಷೆಗಳನ್ನು ಈಡೇರಿಸಬೇಕಾದ ಹೊಣೆಗಾರಿಕೆ ಅವರ ಮೇಲಿದೆ.
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ, ಹಾವೇರಿರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿ ಅವರ ಮುಂದೆ ಇದೀಗ ಅಭಿವೃದ್ಧಿಯ ದೊಡ್ಡ ಸವಾಲು ನಿಂತಿದೆ. ಮುಂಬರುವ ಸುಮಾರು ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಜಿಲ್ಲೆಯ ಬಹುಕಾಲದ ಸಮಸ್ಯೆಗಳನ್ನು ಪರಿಹರಿಸಿ ಜನರ ನಿರೀಕ್ಷೆಗಳನ್ನು ಈಡೇರಿಸಬೇಕಾದ ಹೊಣೆಗಾರಿಕೆ ಅವರ ಮೇಲಿದೆ.
ಮೂರು ವರ್ಷಗಳ ಬಳಿಕ ಜಿಲ್ಲೆಗೆ ಮಂತ್ರಿ ಸ್ಥಾನದ ಬರವೇನೋ ನೀಗಿದೆ. ಆದರೆ, ಮಳೆಯಿಲ್ಲದೇ ಬರಗಾಲ ಶುರುವಾಗುವ ಸಾಧ್ಯತೆ ಗೋಚರಿಸುತ್ತಿದೆ. ರೈತರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಸತತ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರಗೊಂಡಿದೆ. ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗುವ ಹಂತ ತಲುಪಿದ್ದು, ಬೆಳೆ ನಷ್ಟ, ಸಾಲದ ಹೊರೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಗ್ರಾಮೀಣ ಭಾಗವನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಬರ ನಿರ್ವಹಣೆ, ರೈತರಿಗೆ ಪರಿಹಾರ, ನೀರಾವರಿ ಯೋಜನೆಗಳಿಗೆ ವೇಗ ನೀಡುವುದು ಸಚಿವರ ಮೊದಲ ಆದ್ಯತೆಯಾಗಬೇಕಿದೆ.ಹಾವೇರಿ ನಗರದ ಜನರು ಹಲವು ವರ್ಷಗಳಿಂದ ನಿರೀಕ್ಷಿಸುತ್ತಿರುವ 24×7 ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದೆ. ಕೋಟ್ಯಂತರ ರುಪಾಯಿ ವೆಚ್ಚದ ಈ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ನಗರ ನಿವಾಸಿಗಳಿಗೆ ನಿರಂತರ ನೀರು ಪೂರೈಕೆ ಸಾಧ್ಯವಾಗಿಲ್ಲ. ಈ ಅವಧಿಯಲ್ಲಾದರೂ ಯೋಜನೆ ಪೂರ್ಣಗೊಂಡು ಜನರ ಮನೆಗಳಿಗೆ ಸಮರ್ಪಕ ಕುಡಿಯುವ ನೀರು ತಲುಪುವ ನಿರೀಕ್ಷೆ ಹೆಚ್ಚಿದೆ.
ಇದರ ಜೊತೆಗೆ ನದಿಗಳಿಂದ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ವೇಗ ನೀಡುವುದು ಅತ್ಯಗತ್ಯವಾಗಿದೆ. ಮಳೆ ಅಭಾವದ ಪರಿಸ್ಥಿತಿಯಲ್ಲಿ ಕೆರೆಗಳು ತುಂಬಿದರೆ ಕುಡಿಯುವ ನೀರಿನ ಜೊತೆಗೆ ಅಂತರ್ಜಲ ಮಟ್ಟವೂ ಸುಧಾರಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಸಮನ್ವಯಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.ಸಾಮಾಜಿಕ ನ್ಯಾಯದ ಪ್ರತಿನಿಧಿಯಾಗಿ ಸಚಿವ ಸ್ಥಾನ ಪಡೆದಿರುವ ರುದ್ರಪ್ಪ ಲಮಾಣಿ ಅವರು ರಾಜಕೀಯ ಯಶಸ್ಸಿನ ಜೊತೆಗೆ ಅಭಿವೃದ್ಧಿಯಲ್ಲೂ ತಮ್ಮ ಛಾಪು ಮೂಡಿಸಿದರೆ ಮಾತ್ರ ಜಿಲ್ಲೆಯ ಜನರ ನಿರೀಕ್ಷೆಗಳಿಗೆ ನ್ಯಾಯ ಒದಗಿಸಿದಂತಾಗಲಿದೆ. ಉಳಿದಿರುವ ಅಧಿಕಾರಾವಧಿಯಲ್ಲಿ ಅವರು ಕೈಗೊಳ್ಳುವ ನಿರ್ಧಾರಗಳು ಜಿಲ್ಲೆಯ ಭವಿಷ್ಯವನ್ನು ನಿರ್ಧರಿಸಲಿವೆ.
ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ: ಹಾವೇರಿ ವೈದ್ಯಕೀಯ ಕಾಲೇಜು ಆರಂಭವಾದರೂ ಜಿಲ್ಲೆಯ ಜನರು ಇನ್ನೂ ಉನ್ನತ ಮಟ್ಟದ ಆರೋಗ್ಯ ಸೇವೆಗಾಗಿ ಹುಬ್ಬಳ್ಳಿ, ದಾವಣಗೆರೆ ಹಾಗೂ ಬೆಂಗಳೂರಿನತ್ತ ಮುಖ ಮಾಡಬೇಕಾದ ಪರಿಸ್ಥಿತಿ ಇದೆ. ವೈದ್ಯಕೀಯ ಕಾಲೇಜು ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಜನರು ಬಹುಕಾಲದಿಂದ ಆಗ್ರಹಿಸುತ್ತಿದ್ದಾರೆ.ಹೃದಯ, ಮೂತ್ರಪಿಂಡ, ನರರೋಗ ಸೇರಿದಂತೆ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಜಿಲ್ಲೆಯಿಂದ ಪ್ರತಿದಿನ ನೂರಾರು ರೋಗಿಗಳು ಹೊರ ಜಿಲ್ಲೆಗಳಿಗೆ ತೆರಳಬೇಕಾಗುತ್ತಿದೆ. ಸಚಿವ ರುದ್ರಪ್ಪ ಲಮಾಣಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಹಾವೇರಿಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮಂಜೂರು ಮಾಡಿಸಿ, ಜಿಲ್ಲೆಯಲ್ಲಿ ಉನ್ನತ ಮಟ್ಟದ ಆರೋಗ್ಯ ಸೇವೆಗೆ ದಾರಿ ಮಾಡಿಕೊಟ್ಟರೆ ಅದು ಅವರ ಮಹತ್ವದ ಸಾಧನೆಯಾಗಿ ದಾಖಲಾಗಲಿದೆ.
ಬರ ಪರಿಸ್ಥಿತಿ ಅಧ್ಯಯನ ಮಾಡಬೇಕು: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬರಗಾಲದ ಪರಿಸ್ಥಿತಿ ಎದುರಾಗಿದೆ. ರೈತರು ಬಿತ್ತಿದ ಬೆಳೆ ಒಣಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಸರ್ಕಾರ ಬರಬೇಕಿದೆ. ಅದಕ್ಕಾಗಿ ಸಚಿವ ರುದ್ರಪ್ಪ ಲಮಾಣಿ ಅವರು ಜಿಲ್ಲೆಯ ಬರ ಪರಿಸ್ಥಿತಿಯನ್ನು ತುರ್ತಾಗಿ ಅಧ್ಯಯನ ಮಾಡಬೇಕಿದೆ. ಸಿಕ್ಕಿರುವ ಅವಕಾಶದಲ್ಲಿ ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ. ಬೆಳೆ ನಷ್ಟ ಪರಿಹಾರ ಕೊಡಿಸುವ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡಬೇಕು ಎಂಬುದು ರೈತರ ಮನವಿಯಾಗಿದೆ.