ಸಾರಾಂಶ
ದಾವಣಗೆರೆ: ಶ್ರೀ ಗುರುರಾಮದಾಸ ಸ್ವಾಮಿ ಆಧ್ಯಾತ್ಮಿಕ ಸೇವಾ ಟ್ರಸ್ಟ್‌ನಿಂದ 33ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಜಾಗೃತಿ ಸಮಾವೇಶವನ್ನು ಡಿ.15ರಂದು ನಗರದ ಪಿಜೆ ಬಡಾವಣೆಯ ಅಕ್ಕಮಹಾದೇವಿ ರಸ್ತೆಯ ಆದಿ ಕರ್ನಾಟಕ ವಿದ್ಯಾರ್ಥಿ ನಿಲಯದ ಮೈದಾನದಲ್ಲಿ ಹಮ್ಮಿಕೊಂಡಿರುವುದಾಗಿ ಟ್ರಸ್ಟ್ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮೂಹಿಕ ವಿವಾಹದಲ್ಲಿ ಈವರೆಗೆ 942 ಜೋಡಿಗಳು ದಾಂಪತ್ಯ ಜೀವನಕ್ಕೆ ಅಡಿ ಇಟ್ಟಿದ್ದು, ಈ ಬಾರಿಯೂ ಡಿ.15ರ ಬೆಳಿಗ್ಗೆ 11ಕ್ಕೆ ನಡೆಯುವ ಸಾಮೂಹಿಕ ವಿವಾಹಕ್ಕೆ ಎಷ್ಟೇ ಜೋಡಿ ಬಂದರೂ ಮದುವೆ ಮಾಡಿಸುತ್ತೇವೆ. ಆಸಕ್ತ ವಧು-ವರರ ಹೆಸರನ್ನು ಡಿ.10ರೊಳಗೆ ಸಂಸ್ಥೆಯಲ್ಲಿ ನೋಂದಾಯಿಸಬೇಕು ಎಂದರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವಧುಗಳಿಗೆ ತಾಳಿಯನ್ನು ಹಾಗೂ ಹಿರಿಯ ಜವಳಿ ವರ್ತಕ ಬಿ.ಸಿ.ಉಮಾಪತಿ ವಧು-ವರರಿಗೆ ಬಟ್ಟೆ ಹಾಗೂ ಮುಖಂಡ ಅಂಜಿನಪ್ಪ ಊಟದ ವ್ಯವಸ್ಥೆ ಮಾಡಿದ್ದಾರೆ. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವ ಎಚ್.ಆಂಜನೇಯ, ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಮಾಜದ ಗುರುಗಳು ಹಾಗೂ ವಿವಿಧ ಮಠಾಧೀಶರು ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.
ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ ಮಾತನಾಡಿ, ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಅಂತರ್ಜಾತಿ, ಅಂತಧರ್ಮೀಯ ವಿವಾಹಕ್ಕೂ ಅವಕಾಶವಿದೆ. ಸುಮಾರು 50 ಜೋಡಿಗಳಿಗೆ ಮದುವೆ ಮಾಡುವ ಗುರಿ ಹಾಕಿಕೊಂಡಿದ್ದೇವೆ. ಅದಕ್ಕಿಂತ ಹೆಚ್ಚು ಜೋಡಿಗಳು ಬಂದರೂ ಮದುವೆ ಮಾಡಿಸುತ್ತೇವೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದವರಿಗೆ ಸರ್ಕಾರದಿಂದ 50 ಸಾವಿರ ರು. ಪ್ರೋತ್ಸಾಹಧನ ಸಿಗಲಿದೆ. ಬಡ, ಮಧ್ಯಮ ವರ್ಗದ ಹೆತ್ತವರಿಗೆ ಇಂತಹ ಸಾಮೂಹಿಕ ವಿವಾಹಗಳು ವರವಾಗಿದೆ ಎಂದು ಹೇಳಿದರು.ವಧು-ವರರು ತಮ್ಮ ವ್ಯಾಪ್ತಿಯ ಪಾಲಿಕೆ, ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಂದ ತಾವು ಅವಿವಾಹಿತರೆಂಬ ಬಗ್ಗೆ ದೃಢೀಕರಣ ಪತ್ರ ಹಾಗೂ ವಯಸ್ಸಿನ ದೃಢೀಕರಣ ಪತ್ರವನ್ನು ಅರ್ಜಿ ಜೊತೆಗೆ ಲಗತ್ತಿಸುವುದು ಕಡ್ಡಾಯ. ಬಾಲ್ಯ ವಿವಾಹಕ್ಕೆ ಅವಕಾಶ ಇಲ್ಲ. ವಧು-ವರರು ಸಮಾಜ ಕಲ್ಯಾಣ ಇಲಾಖೆಗೆ ಅಗತ್ಯ ದಾಖಲೆ ಒದಗಿಸಿದರೆ, ಇಲಾಖೆಯಿಂದ ವಧು-ವರರಿಗೆ 50 ಸಾವಿರ ರು. ಸಿಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ಮತ್ತು ಛಲವಾದಿ ಸಮಾಜಗಳ ಮುಖಂಡರಾದ ಎಸ್.ಮಲ್ಲಿಕಾರ್ಜುನ, ಹೆಗ್ಗೆರೆ ರಂಗಪ್ಪ, ಛಲವಾದಿ ರಾಮಯ್ಯ, ರಾಘವೇಂದ್ರ ಕಡೇಮನಿ, ಎಂ.ಗುರುಮೂರ್ತಿ, ಬಿ.ಆರ್.ಶಿವಮೂರ್ತಿ, ಜಿ.ರಾಕೇಶ ಮತ್ತಿತರರಿದ್ದರು.ಶ್ರೀ ಗುರು ರಾಮದಾಸ ಸ್ವಾಮಿ ಆಧ್ಯಾತ್ಮಿಕ ಸೇವಾ ಟ್ರಸ್ಟ್ ಡಿ.15ರಂದು ದಾವಣಗೆರೆಯಲ್ಲಿ ಹಮ್ಮಿಕೊಂಡ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲಿಚ್ಛಿಸುವ ವಧು-ವರರು ಹೆಸರು ನೋಂದಾಯಿಸಲು, ಹೆಚ್ಚಿನ ಮಾಹಿತಿಗೆ ಬಿ.ಆರ್.ಶಿವಮೂರ್ತಿ (ಮೊ-95914-27999), ಜಿ.ರಾಕೇಶ (97413-11120) ಗೆ ಸಂಪರ್ಕಿಸಬೇಕು. ಬಿ.ಎಚ್.ವೀರಭದ್ರಪ್ಪ, ಅಧ್ಯಕ್ಷ, ಶ್ರೀ ಗುರು ರಾಮದಾಸ ಸ್ವಾಮಿ ಆಧ್ಯಾತ್ಮಿಕ ಸೇವಾ ಟ್ರಸ್ಟ್.