ನಾರಾಯಣ ಹೆಗಡೆಕನ್ನಡಪ್ರಭ ವಾರ್ತೆ ಹಾವೇರಿ
ಕೃಷಿ ಪ್ರಧಾನ ಜಿಲ್ಲೆಯಾಗಿರುವ ಹಾವೇರಿಗೆ ಇದೀಗ ಬೃಹತ್ ಕೈಗಾರಿಕಾ ಹೂಡಿಕೆಯ ಅವಕಾಶ ಒದಗಿ ಬಂದಿದೆ. ರಾಣಿಬೆನ್ನೂರು ತಾಲೂಕಿನ ನಲವಾಗಲ ಗ್ರಾಮದಲ್ಲಿ ಬರೋಬ್ಬರಿ ₹9,760 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ನವೀಕರಿಸಬಹುದಾದ ಇಂಧನ ಆಧಾರಿತ ಹಸಿರು ಹೈಡ್ರೋಜನ್ ಹಾಗೂ ಇ-ಮೆಥನಾಲ್ ಉತ್ಪಾದನಾ ಘಟಕ ಸ್ಥಾಪನೆಯಾಗಲಿದೆ.ಬೆಂಗಳೂರಿನ ಹೀರೋ ಫ್ಯೂಚರ್ ಎನರ್ಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಈ ಬೃಹತ್ ಯೋಜನೆಗೆ ಮುಂದಾಗಿದೆ. ಸಂಸ್ಥೆಯ ಪ್ರಮುಖ ಹೂಡಿಕೆ ಪ್ರಸ್ತಾವನೆಗೆ ಸೆ. 2ರಂದು ನಡೆದ 68ನೇ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಸಭೆಯಲ್ಲಿ ಅನುಮೋದನೆ ದೊರೆತಿದೆ. ಮುಖ್ಯಮಂತ್ರಿ ನೇತೃತ್ವದ ಸಮಿತಿಯು ಯೋಜನೆಗೆ ಹಸಿರು ನಿಶಾನೆ ನೀಡಿದೆ. ಈ ಯೋಜನೆಯಿಂದ ಸುಮಾರು 3,200 ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆಯಿದ್ದು, ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಹೊಸ ವೇಗ ದೊರೆಯುವ ಸಾಧ್ಯತೆಯಿದೆ.ನಲವಾಗಲ ಗ್ರಾಮದಲ್ಲಿ ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್ ಹಾಗೂ ಜೈವಿಕ ಮೂಲದ ಇಂಗಾಲದ ಡೈಆಕ್ಸೈಡ್ (CO₂) ಬಳಸಿ ಆಧುನಿಕ ತಂತ್ರಜ್ಞಾನದ ಮೂಲಕ ಇ-ಮೆಥನಾಲ್ ಉತ್ಪಾದಿಸುವ ಘಟಕವನ್ನು ಸ್ಥಾಪಿಸುವುದು ಯೋಜನೆಯ ಉದ್ದೇಶವಾಗಿದೆ. ಪರಿಸರ ಸ್ನೇಹಿ ಇಂಧನ ಉತ್ಪಾದನೆಗೆ ಆದ್ಯತೆ ನೀಡುವ ಈ ಯೋಜನೆಯು ಭವಿಷ್ಯದ ಇಂಧನ ಕ್ಷೇತ್ರದಲ್ಲಿ ಹಾವೇರಿ ಜಿಲ್ಲೆಯ ಹೆಸರನ್ನು ಗುರುತಿಸುವ ಅವಕಾಶ ಕಲ್ಪಿಸಲಿದೆ.ಯುವಕರಿಗೆ ಉದ್ಯೋಗದ ನಿರೀಕ್ಷೆ
ಯೋಜನೆಗೆ ಸುಮಾರು ₹9,760 ಕೋಟಿ ಬೃಹತ್ ಹೂಡಿಕೆಯಾಗಲಿದ್ದು, ನೇರ ಹಾಗೂ ಪರೋಕ್ಷವಾಗಿ ಸುಮಾರು 3,200 ಜನರಿಗೆ ಉದ್ಯೋಗಾವಕಾಶ ದೊರೆಯುವ ನಿರೀಕ್ಷೆಯಿದೆ. ಇದರಿಂದ ಸ್ಥಳೀಯ ಯುವಕರು ಉದ್ಯೋಗಕ್ಕಾಗಿ ಬೇರೆ ಜಿಲ್ಲೆ, ರಾಜ್ಯಗಳಿಗೆ ವಲಸೆ ಹೋಗುವ ಅನಿವಾರ್ಯತೆ ಕಡಿಮೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಯೋಜನೆಗೆ ಪೂರಕವಾಗಿ ಸಾರಿಗೆ, ನಿರ್ಮಾಣ, ಸೇವಾ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಯೂ ಆರ್ಥಿಕ ಚಟುವಟಿಕೆಗಳು ಹೆಚ್ಚುವ ನಿರೀಕ್ಷೆಯಿದೆ.ಕೈಗಾರಿಕಾ ನಕ್ಷೆಯಲ್ಲಿ ಹಾವೇರಿ: ಇಲ್ಲಿಯವರೆಗೆ ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆಗಳಿಗೆ ಹೆಚ್ಚು ಗುರುತಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಇಂತಹ ಬೃಹತ್ ಬಂಡವಾಳ ಹೂಡಿಕೆ ಯೋಜನೆ ಅನುಷ್ಠಾನಗೊಂಡರೆ ಕೈಗಾರಿಕಾ ಕ್ಷೇತ್ರಕ್ಕೂ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಸ್ಥಳೀಯರಿಗೆ ಉದ್ಯೋಗ, ವ್ಯಾಪಾರ-ವಹಿವಾಟು ವೃದ್ಧಿ ಹಾಗೂ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಯೋಜನೆಯ ಅನುಷ್ಠಾನ, ಅಗತ್ಯ ಮೂಲಸೌಕರ್ಯ ಮತ್ತು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ದೊರೆಯುವ ಕ್ರಮಗಳು ಮುಂದಿನ ದಿನಗಳಲ್ಲಿ ಮಹತ್ವ ಪಡೆಯಲಿವೆ.ಬೆಂಗಳೂರಿನ ಹೀರೋ ಫ್ಯೂಚರ್ ಎನರ್ಜೀಸ್ ಸಂಸ್ಥೆಯು ರಾಣಿಬೆನ್ನೂರು ತಾಲೂಕು ನಲವಾಗಲದಲ್ಲಿ ಜಾಗತಿಕ ಮಟ್ಟದ ಹಸಿರು ಹೈಡ್ರೋಜನ್, ಇ-ಮೆಥನಾಲ್ ಉತ್ಪಾದನಾ ಘಟಕ ಸ್ಥಾಪನೆಗೆ ಬೃಹತ್ ಪ್ರಮಾಣದಲ್ಲಿ ಬಂಡವಾಳ ಹೂಡಲು ಮುಂದಾಗಿದೆ. ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಭೆ ಇದಕ್ಕೆ ಅನುಮೋದನೆ ನೀಡಿದೆ. ಬೃಹತ್ ಹೂಡಿಕೆ ಮಾಡುವುದರಿಂದ ಜಿಲ್ಲೆಯ ಸಾವಿರಾರು ಜನರ ಕೈಗೆ ಉದ್ಯೋಗಾವಕಾಶಗಳು ದೊರೆಯಲಿವೆ. ಹಸಿರು ಇಂಧನ ಕ್ರಾಂತಿಗೆ ಮುನ್ನುಡಿಯಾಗಲಿದ್ದು, ಕೈಗಾರಿಕಾ ಭೂಪಟದಲ್ಲಿ ಹಾವೇರಿ ಜಿಲ್ಲೆಯ ಹೆಸರು ಕಾಣಿಸಿಕೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.