ಮಕ್ಕಳು ದೇಶದ ಭವಿಷ್ಯವಾಗಿದ್ದು, ಅವರಲ್ಲಿನ ಸಾಮರ್ಥ್ಯ ಗುರುತಿಸಿ ಬೆಳೆಸಲು ಸೂಕ್ತ ಅವಕಾಶ ಕಲ್ಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ.
ಬಳ್ಳಾರಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಏಕಾಗ್ರತೆ, ಸ್ಮರಣಶಕ್ತಿ, ಆತ್ಮವಿಶ್ವಾಸ ಹಾಗೂ ಸೂಕ್ಷ್ಮ ಗ್ರಹಣಶಕ್ತಿಯನ್ನು ಬೆಳೆಸುವ ಉದ್ದೇಶದಿಂದ ಶ್ರೀ ಮಹಾದೇವ ಶಿಕ್ಷಣ, ಕಲೆ ಹಾಗೂ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ‘ಗಾಂಧಾರಿ ವಿದ್ಯೆ ಸ್ಪರ್ಧೆ–2026’ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಜಾಗತಿಕ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್. ಪ್ರಭುಶೇಖರ ಗೌಡ ಮಾತನಾಡಿ, ಮಕ್ಕಳು ದೇಶದ ಭವಿಷ್ಯವಾಗಿದ್ದು, ಅವರಲ್ಲಿನ ಸಾಮರ್ಥ್ಯ ಗುರುತಿಸಿ ಬೆಳೆಸಲು ಸೂಕ್ತ ಅವಕಾಶ ಕಲ್ಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯಜ್ಞಾನದ ಜತೆಗೆ ಏಕಾಗ್ರತೆ, ಶಿಸ್ತು, ತಾಳ್ಮೆ, ಆತ್ಮವಿಶ್ವಾಸ ಹಾಗೂ ನಿರಂತರ ಪ್ರಯತ್ನದ ಮನೋಭಾವ ಬೆಳೆಸುವುದು ಅಗತ್ಯ ಎಂದರು.ಯೋಗ ಹಾಗೂ ಗಾಂಧಾರಿ ವಿದ್ಯೆ ತರಬೇತುದಾರ, ಕುರೇಕುಪ್ಪದ ಎಸ್ಆರ್ಕೆ ಯೋಗ ಕೇಂದ್ರದ ರಾಘವೇಂದ್ರ ಮಾತನಾಡಿ, ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದಲ್ಲ. ಮಕ್ಕಳಲ್ಲಿ ಉತ್ತಮ ಮೌಲ್ಯಗಳು, ಶಿಸ್ತು, ಏಕಾಗ್ರತೆ ಮತ್ತು ಆತ್ಮವಿಶ್ವಾಸ ಬೆಳೆಸುವ ಪ್ರಕ್ರಿಯೆಯಾಗಿದೆ. ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿದಾಗ ಅವರ ಸಾಮರ್ಥ್ಯ ಅನಾವರಣಗೊಳ್ಳಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಬಸವರಾಜ್ ಬಿಸಲಹಳ್ಳಿ, ಗಾಂಧಾರಿ ವಿದ್ಯೆಯಂತಹ ವಿಶಿಷ್ಟ ತರಬೇತಿ ಹಾಗೂ ಸ್ಪರ್ಧೆಗಳು ಮಕ್ಕಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿವೆ. ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸವಾಲುಗಳನ್ನು ಎದುರಿಸುವ ಮನೋಭಾವ ಬೆಳೆಯುತ್ತದೆ ಎಂದು ಹೇಳಿದರು.ಸಂಡೂರು–ಬಳ್ಳಾರಿಯ ಗಾಂಧಾರಿ ವಿದ್ಯೆ ತರಬೇತುದಾರರಾದ ಉಮಾ ಗಡಿಗಿ ಹಾಗೂ ಬಳ್ಳಾರಿಯ ಶ್ರೀ ಶಂಕರಾಚಾರ್ಯ ಚೈತನ್ಯ ವೇದಿಕೆಯ ಯೋಗ ಮತ್ತು ಗಾಂಧಾರಿ ವಿದ್ಯೆ ತರಬೇತುದಾರ ಕೆ. ಚಿದಂಬರ ರಾವ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಸ್ಪರ್ಧೆಯಲ್ಲಿ 68 ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಹಿರಿಯರು ಮತ್ತು ಕಿರಿಯರು ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಸಿ, ವಿಜೇತರನ್ನು ಆಯ್ಕೆ ಮಾಡಲಾಯಿತು. ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಉಳಿದ ಸ್ಪರ್ಧಿಗಳಿಗೂ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಹಿರಿಯರ ವಿಭಾಗದಲ್ಲಿ ತನುಷ್ ರೆಡ್ಡಿ ಕೆ. ಪ್ರಥಮ, ಹಿಮಬಿಂದು ದ್ವಿತೀಯ, ವೈಭವ ಎನ್.ಎಸ್.ಎಂ. ತೃತೀಯ ಸ್ಥಾನ ಪಡೆದರು. ಜೆ. ನಿಖಿಲ್, ಪ್ರತಿಭಾ ಕೆ. ಹಾಗೂ ಸಾಗರ್ ಸಮಾಧಾನಕರ ಬಹುಮಾನ ಪಡೆದುಕೊಂಡರು. ಕಿರಿಯರ ವಿಭಾಗದಲ್ಲಿ ಆದ್ಯ ಪ್ರಥಮ, ನಕ್ಷತ್ರ ಉದ್ದಾರ ದ್ವಿತೀಯ, ಸಿರಿ ನಂದನ ತೃತೀಯ ಸ್ಥಾನ ಪಡೆದರು. ತೇಜಸ್, ನಿತೇಶ್ ಹಾಗೂ ಸೌಖ್ಯ ಸಮಾಧಾನಕರ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಮಂಗಳಾ ಬಸವರಾಜ್, ಪ್ರಧಾನ ಕಾರ್ಯದರ್ಶಿ ಕೆ. ತಿಪ್ಪೇರುದ್ರಪ್ಪ, ಕಾರ್ಯದರ್ಶಿ ಸುಧೀಂದ್ರ ನಾಡಿಗಾರ್, ಸಹ ಕಾರ್ಯದರ್ಶಿ ಕೋದಂಡ ರಾಮ, ಸಾಂಸ್ಕೃತಿಕ ಕಾರ್ಯದರ್ಶಿ ಸುಮಾ ನಾಡಿಗಾರ್ ಉಪಸ್ಥಿತರಿದ್ದರು. ಸಿ.ಕೆ. ಪ್ರಕಾಶ್, ಐಶ್ವರ್ಯ ಉದ್ದಾರ, ಡಾ. ಶಿವಶಾಂತಲ, ಸೌಮ್ಯ ಹಾಗೂ ಗೀತಾಂಜಲಿ ಕಾರ್ಯಕ್ರಮ ನಿರ್ವಹಿಸಿದರು.