ನೇಮಕಾತಿ, ವಯೋಮಿತಿ ಹೆಚ್ಚಳಕ್ಕೆ ಧಾರವಾಡದಲ್ಲಿ ಬೃಹತ್‌ ಪ್ರತಿಭಟನೆ

| Published : Sep 26 2025, 01:00 AM IST

ನೇಮಕಾತಿ, ವಯೋಮಿತಿ ಹೆಚ್ಚಳಕ್ಕೆ ಧಾರವಾಡದಲ್ಲಿ ಬೃಹತ್‌ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಕಾಂತಕುಮಾರ್ ನೇತೃತ್ವದಲ್ಲಿ ಸುಮಾರು 3000ಕ್ಕೂ ಅಧಿಕ ಅಭ್ಯರ್ಥಿಗಳು ಸಪ್ತಾಪುರ, ಶ್ರೀನಗರ, ಕರ್ನಾಟಕ ಕಾಲೇಜು ಮೂಲಕ ಜ್ಯುಬಿಲಿ ವೃತ್ತದಲ್ಲಿ ಸಂಗಮವಾಗಿ ಸುಮಾರು 2 ಗಂಟೆ ಕಾಲ ರಸ್ತೆ ಬಂದ್‌ ಮಾಡಿ ಧರಣಿ ನಡೆಸಿದರು.

ಧಾರವಾಡ:

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ, ವಯೋಮಿತಿ ಹೆಚ್ಚಿಸುವುದು, ಕೆಎಎಸ್‌ ಅಧಿಸೂಚನೆಯಲ್ಲಿ ಕಂಡುಬಂದಿರುವ ಕನ್ನಡ ಅನುವಾದದ ತಪ್ಪುಗಳನ್ನು ಪರಿಶೀಲಿಸಿ ಅಧಿಸೂಚನೆ ರದ್ದುಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಧಾರವಾಡದಲ್ಲಿ ಗುರುವಾರ ಸಾವಿರಾರು ಉದ್ಯೋಗಾಕಾಂಕ್ಷಿಗಳು ಬೃಹತ್‌ ಮಟ್ಟದ ಧರಣಿ ನಡೆಸಿದರು.

ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಕಾಂತಕುಮಾರ್ ನೇತೃತ್ವದಲ್ಲಿ ಸುಮಾರು 3000ಕ್ಕೂ ಅಧಿಕ ಅಭ್ಯರ್ಥಿಗಳು ಸಪ್ತಾಪುರ, ಶ್ರೀನಗರ, ಕರ್ನಾಟಕ ಕಾಲೇಜು ಮೂಲಕ ಜ್ಯುಬಿಲಿ ವೃತ್ತದಲ್ಲಿ ಸಂಗಮವಾಗಿ ಸುಮಾರು 2 ಗಂಟೆ ಕಾಲ ರಸ್ತೆ ಬಂದ್‌ ಮಾಡಿ ಧರಣಿ ನಡೆಸಿದರು. ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳು ದೀರ್ಘಕಾಲದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಅನೇಕ ಇಲಾಖೆಗಳ ನೇಮಕಾತಿ ನಡೆಯದ ಕಾರಣ ಅಭ್ಯರ್ಥಿಗಳು ವಯೋಮಿತಿ ಮೀರಿದ್ದಾರೆ. ನಾಲ್ಕೈದು ವರ್ಷಗಳಿಂದ ಕಾನ್‌ಸ್ಟೇಬಲ್‌, ಪಿಎಸೈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿದೆ. ಏಳೆಂಟು ವರ್ಷಗಳಿಂದ ಎಫ್‌ಡಿಎ, ಎಸ್‌ಡಿಎ ಹುದ್ದೆಗಳ ನೇಮಕಾತಿ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಕನಿಷ್ಠ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ ತಕ್ಷಣವೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂದು ಆಗ್ರಹಿಸಲಾಯಿತು.

ಜತೆಗೆ ಕೆಎಎಸ್‌ ಅಧಿಸೂಚನೆಯಲ್ಲಿ ಕಂಡುಬಂದಿರುವ ಕನ್ನಡ ಅನುವಾದದ ತಪ್ಪುಗಳನ್ನು ಪರಿಶೀಲಿಸಿ, ಅಧಿಸೂಚನೆ ರದ್ದುಪಡಿಸುವ ಅಗತ್ಯವಿದೆ ಎಂದು ಆಗ್ರಹಿಸಿದರು.

ಜ್ಯುಬಿಲಿ ವೃತ್ತದಲ್ಲಿ ಸಾವಿರಾರು ಜನ ವಿದ್ಯಾರ್ಥಿಗಳು ಜಮಾವಣೆಗೊಂಡಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸ್ಥಳಕ್ಕೆ ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ ಸಹ ಭೇಟಿ ನೀಡಿ ಅವರ ಮನವೊಲಿಸಲು ಯತ್ನಿಸಿದರು. ಒಂದು ತಾಸಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೇ ಸಂಚಾರ ದಟ್ಟನೆ ಉಂಟಾಗಿತ್ತು. ಕೊನೆಗೆ ಜಿಲ್ಲಾಧಿಕಾರಿ ಮೂಲಕ ಅಭ್ಯರ್ಥಿಗಳು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.