ಸಾರಾಂಶ
ಉತ್ತರ ಭಾರತದಲ್ಲಿ ನಡೆಯುವ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣ ಭಾಗದ ಕೆಆರ್‌ಎಸ್‌ನಲ್ಲಿ ಸೆ.26ರಿಂದ 30ರವರೆಗೆ ಕಾವೇರಿ ಮಾತೆಗೆ ಆರತಿ ಮಾಡಲು ಬೃಂದಾವನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಉತ್ತರ ಭಾರತದಲ್ಲಿ ನಡೆಯುವ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣ ಭಾಗದ ಕೆಆರ್‌ಎಸ್‌ನಲ್ಲಿ ಸೆ.26ರಿಂದ 30ರವರೆಗೆ ಕಾವೇರಿ ಮಾತೆಗೆ ಆರತಿ ಮಾಡಲು ಬೃಂದಾವನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಸೆ.26ರಂದು ಆದಿಚುಂಚನಗಿರಿ ಸ್ವಾಮೀಜಿ ಮತ್ತು ಸಿದ್ಧಗಂಗಾ ಶ್ರೀಗಳ ಸಮ್ಮುಖದಲ್ಲಿ ಸಂಜೆ 5 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾವೇರಿ ಆರತಿಗೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಬೃಂದಾವನದ ಕೆಳಭಾಗದಲ್ಲಿರುವ ಕಾವೇರಿ ಮಾತೆ ಪ್ರತಿಮೆ ಬಳಿ ವೇದಿಕೆ ಸಿದ್ಧಗೊಂಡಿದೆ. ಬುಧವಾರ ಸಂಜೆ ಡಿ.ಕೆ.ಶಿವಕುಮಾರ್ ಕೆಆರ್‌ಎಸ್‌ಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದು, ಸಾಂಕೇತಿಕವಾಗಿ ಕಾವೇರಿ ಆರತಿ ಮಾಡುವುದನ್ನು ವೀಕ್ಷಿಸಿದ್ದಾರೆ.
ಕಾವೇರಿ ಆರತಿ ಮಾಡಿ ಪೂಜಿಸಬೇಕೆಂಬುದು ಡಿಕೆಶಿ ಕನಸಾಗಿದ್ದು, ಈ ಬಗ್ಗೆ 2024ರಲ್ಲೇ ಘೋಷಿಸಿದ್ದರು. ಅದರಂತೆ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಶಾಸಕರ ನಿಯೋಗ ವಾರಣಾಸಿ ಮತ್ತು ಹರಿದ್ವಾರಕ್ಕೆ ಭೇಟಿ ನೀಡಿ ಗಂಗಾರತಿ ವೀಕ್ಷಿಸಿ ಸರ್ಕಾರಕ್ಕೆ ವರದಿ ನೀಡಿತ್ತು. ಆ ಪ್ರಕಾರ ಸರ್ಕಾರ ಕಾವೇರಿ ಆರತಿ ಮಾಡಲು ತೀರ್ಮಾನಿಸಿದೆ. ಕಾವೇರಿ ಆರತಿ ವೀಕ್ಷಿಸಲು ಕೆಆರ್‌ಎಸ್‌ಗೆ ಆಗಮಿಸುವ ಪ್ರವಾಸಿಗರು ಹಾಗೂ ಸುತ್ತಲಿನ ನಿವಾಸಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಸ್ಥಳೀಯರಿಗಾಗಿ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ.ಕಾವೇರಿ ಆರತಿ ಹೇಗೆ?:
13 ಜನರು ಕಾವೇರಿ ಆರತಿ ಮಾಡಲಿದ್ದು, ಇವರಿಗೆ ತಲಾ ಇಬ್ಬರು ಸಹಾಯಕರು ಸೇರಿ ಒಟ್ಟು 40 ಜನರ ತಂಡ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಮೊದಲು ವಾತಾಪಿ ಗಣಪತಿಂ ಭಜೆ ಮಂಗಳವಾದ್ಯದಿಂದ ಪೂಜೆ ಪ್ರಾರಂಭವಾಗಿ ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ, ಸಂಕಲ್ಪ ನಡೆಯಲಿದೆ. ನಂತರ ಕಾವೇರಿ ಸ್ತೋತ್ರದ ಮೂಲಕ ತೀರ್ಥಕ್ಕೆ ಪೂಜೆ, ಬಾಗಿನ ಅರ್ಪಣೆ ಮಾಡಲಾಗುವುದು. ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರಾರ್ಥನೆ, ಚಾಮರ ಸೇವೆ, ಮೂರು ದಿಕ್ಕಿಗೂ ಶಂಖನಾದ, ಧೂಪದ ಆರತಿ ಹಾಗೂ ಮಂತ್ರ ಪುಷ್ಪ ಪಠಣ, ಕೊನೆಯಲ್ಲಿ ಕುಂಭಾರತಿ, ನಾಗಾರತಿ, ಕಾವೇರಿ ಆರತಿಯೊಂದಿಗೆ ಪೂಜಾ ಕೈಂಕರ್ಯ ಸಂಪನ್ನವಾಗಲಿದೆ.--
5 ದಿನ ಉಚಿತ ಲಾಡು ವಿತರಣೆಮಂಡ್ಯ: ಕಾವೇರಿ ಆರತಿ ವೀಕ್ಷಿಸಲು ಆಗಮಿಸುವ ಪ್ರವಾಸಿಗರು, ಸಾರ್ವಜನಿಕರಿಗೆ 5 ದಿನ ಉಚಿತವಾಗಿ ಲಾಡು ಪ್ರಸಾದ ವಿತರಿಸಲು ತೀರ್ಮಾನಿಸಲಾಗಿದೆ. ಪ್ರತಿ ನಿತ್ಯ ಕನಿಷ್ಠ 8 ರಿಂದ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ರಾಜ್ಯ, ಹೊರ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವವರಿಗೆ ಪ್ರಸಾದ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.