ಸೆ.26 ರಿಂದ 5 ದಿನಗಳ ಕೆಆರ್‌ಎಸ್ ನಲ್ಲಿ ಕಾವೇರಿ ಆರತಿ: ಚಲುವರಾಯಸ್ವಾಮಿ

| Published : Sep 24 2025, 01:00 AM IST

ಸೆ.26 ರಿಂದ 5 ದಿನಗಳ ಕೆಆರ್‌ಎಸ್ ನಲ್ಲಿ ಕಾವೇರಿ ಆರತಿ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಾಡಿನ ಜೀವನದಿ ಕಾವೇರಿ ಆರತಿ ಸೆ.26 ರಿಂದ 5 ದಿನಗಳ ಕಾಲ ನಡೆಯಲಿದ್ದು, ಅಂದು ಸಂಜೆ 5 ಗಂಟೆಗೆ ಉಪ ಮುಖ್ಯಮಂತ್ರಿ, ಜಲ‌ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾವೇರಿ ಆರತಿಗೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ನಾಡಿನ ಜೀವನದಿ ಕಾವೇರಿ ಆರತಿ ಸೆ.26 ರಿಂದ 5 ದಿನಗಳ ಕಾಲ ನಡೆಯಲಿದ್ದು, ಅಂದು ಸಂಜೆ 5 ಗಂಟೆಗೆ ಉಪ ಮುಖ್ಯಮಂತ್ರಿ, ಜಲ‌ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾವೇರಿ ಆರತಿಗೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವರಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠಾಧ್ಯಕ್ಷ ಡಾ.ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ನಾನು, ಜಿಲ್ಲೆಯ ಶಾಸಕರಾದ ರಮೇಶ್‌ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ಪಿ.ರವಿಕುಮಾರ್, ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ಮಧು ಮಾದೇಗೌಡ, ದಿನೇಶ್ ಗೂಳಿಗೌಡ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ನೀರಾವರಿ ನಿಗಮದ ಅಧಿಕಾರಿಗಳು ಪಾಲ್ಗೊಳ್ಳುವರು.

ಕೊಡಗಿನಲ್ಲಿ ಹುಟ್ಟಿ, ಕೃಷ್ಣರಾಜ ಸಾಗರದಲ್ಲಿ ನಿಂತು ಮಂಡ್ಯ, ಮೈಸೂರು, ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಡಿಯುವ ನೀರು, ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಆಧಾರವಾಗಿರುವ ಕಾವೇರಿ ನದಿ ತಮಿಳುನಾಡಿನ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೇಸಾಯ ಹಾಗೂ ಕುಡಿಯುವ ನೀರಿಗೆ ಕಾರಣೀಭೂತವಾಗಿ ಪಾಂಡಿಚೇರಿ ಮುಖಾಂತರ ಅರಬ್ಬಿ ಸಮುದ್ರದಲ್ಲಿ ಲೀನವಾಗುತ್ತದೆ.

ಗಂಗೆಯಷ್ಟೇ ಪಾವಿತ್ರ್ಯ ಹೊಂದಿರುವ ಕಾವೇರಿ ನದಿಗೆ ಕಾವೇರಿ ಆರತಿ ಮಾಡಿ ಭಕ್ತಿ ಭಾವದಿಂದ ನಮಿಸಿ ಪೂಜಿಸಬೇಕೆಂಬುದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2024ರಲ್ಲಿ ಕೆಆರ್ ಎಸ್ ನಲ್ಲಿ ಕಾವೇರಿಗೆ ಬಾಗಿನ ಅರ್ಪಿಸುವಾಗ ಡಿಸಿಎಂ ಈ ವಿಷಯವನ್ನು ಘೋಷಣೆ ಮಾಡಿದ್ದರು‌. ಅದರಂತೆ ನನ್ನ ನೇತೃತ್ವದಲ್ಲಿ ಶಾಸಕರ ನಿಯೋಗ ವಾರಣಾಸಿ ಮತ್ತು ಹರಿದ್ವಾರಕ್ಕೆ ಭೇಟಿ ನೀಡಿ ಗಂಗಾರತಿಯನ್ನು ವೀಕ್ಷಿಸಿ ಸರ್ಕಾರಕ್ಕೆ ವರದಿ ನೀಡಿತ್ತು. ಆ ಪ್ರಕಾರ ಸರ್ಕಾರ ಕಾವೇರಿ ಆರತಿ ಮಾಡಲು ತೀರ್ಮಾನಿಸಿ ಸುಮಾರು 10 ಸಾವಿರ ಜನರು ಭವ್ಯ ಕಾರ್ಯಕ್ರಮ ವೀಕ್ಷಣೆ ಮಾಡಬಹುದಾದ ಬೃಹತ್ ಸ್ಟೇಡಿಯಂ ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿತು.

ಈ ಬಾರಿ ದಸರಾದಲ್ಲಿ ಸಾಂಕೇತಿಕವಾಗಿ 5 ದಿನಗಳ ಕಾಲ ಕೆಆರ್ ಎಸ್ ನಲ್ಲಿ ಕಾವೇರಿ ತಾಯಿಗೆ ಆರತಿ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಮಳೆ, ಬೆಳೆ ಒಳ್ಳೆಯದಾಗಲಿ, ರಾಜ್ಯಕ್ಕೆ ಸನ್ಮಂಗಳವಾಗಲಿ ಎಂದು ತಾಯಿ ಕಾವೇರಿಯಲ್ಲಿ ಪೂಜೆ ಮಾಡಿ ಪ್ರಾರ್ಥಿಸಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.

ಕಾವೇರಿ ಆರತಿಯ ವಿಧಿ ವಿಧಾನಗಳು

* 13 ಜನರಿಂದ ಆರತಿ. ಅವರಿಗೆ ತಲಾ ಇಬ್ಬರು ಸಹಾಯಕರು ಸೇರಿ ಒಟ್ಟು 40 ಜನರ ತಂಡ ಪೂಜೆಯಲ್ಲಿ ಭಾಗಿ.

* ಮೊದಲು ವಾತಾಪಿ ಗಣಪತಿಂ ಭಜೆ ಮಂಗಳವಾದ್ಯದಿಂದ ಪೂಜೆ ಪ್ರಾರಂಭ.

* ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ, ಸಂಕಲ್ಪ.‌

* ಕಾವೇರಿ ಸ್ತೊತ್ರದ ಮೂಲಕ ತೀರ್ಥಕ್ಕೆ ಪೂಜೆ, ಬಾಗಿನ ಅರ್ಪಣೆ.

* ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರಾರ್ಥನೆ, ಚಾಮರ ಸೇವೆ.

* ಮೂರು ದಿಕ್ಕಿಗೂ ಶಂಖನಾದ, ದೂಪದ ಆರತಿ ಹಾಗೂ ಮಂತ್ರ ಪುಷ್ಪ ಪಠಣ

* ಕೊನೆಯಲ್ಲಿ ಕುಂಭಾರತಿ, ನಾಗಾರತಿ, ಕಾವೇರಿ ಆರತಿಯೊಂದಿಗೆ ಪೂಜಾ ಕೈಂಕರ್ಯ ಸಂಪನ್ನವಾಗಲಿದೆ.