ಕ್ರಿಸ್‌ಮಸ್‌ ಹಬ್ಬದಲ್ಲಿ ರಜೆ ಹೊಂದಿಸಿಕೊಳ್ಳಲು ಹಿಂದೂ ಹಬ್ಬವಾದ ದಸರಾದ ರಜೆಗಳನ್ನು ರದ್ದುಪಡಿಸಿ ಹಬ್ಬದ ಸಮಯದಲ್ಲಿ ಶಾಲೆ ಆರಂಭಿಸಿರುವ ಕ್ರಿಶ್ಚಿಯನ್‌ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಇತ್ತೀಚೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಡಿಡಿಪಿಐ ಕಚೇರಿ ಎದುರು ಪ್ರತಿಭಟಿಸಲಾಗಿತ್ತು.

ಧಾರವಾಡ:

ದಸರಾ ರಜೆಯಲ್ಲೂ ಶಾಲೆ ಆರಂಭಿಸಿ ತರಗತಿ ನಡೆಸುತ್ತಿದ್ದ ಇಲ್ಲಿಯ ಬಾಸೆಲ್‌ ಮಿಶನ್‌ ಬಾಲಕಿಯರ ಶಾಲೆಯ ವಿರುದ್ಧ ಶ್ರೀರಾಮಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಶಾಲೆಯ ಗೇಟ್‌ ಎದುರು ಜಮಾಯಿಸಿದ ಕಾರ್ಯಕರ್ತರು ಕ್ರಿಶ್ಚಿಯನ್ ಶಾಲೆಗಳ ಕ್ರಮ ಖಂಡಿಸಿ ಘೋಷಣೆ ಕೂಗಿದರು. ಜತೆಗೆ ಕೂಡಲೇ ತರಗತಿ ಬಂದ್‌ ಮಾಡಬೇಕೆಂದು ಪಟ್ಟು ಹಿಡಿದು ಶಾಲೆಯ ಗೇಟ್‌ಗೆ ಬೀಗ ಹಾಕಲು ಯತ್ನಿಸಿದರು. ಕೂಡಲೇ ಪೊಲೀಸರು ತಡೆದು ಶಾಲಾ ಆಡಳಿತ ಮಂಡಳಿ ಕರೆದು ಚರ್ಚಿಸಲಾಯಿತು.

ಕ್ರಿಸ್‌ಮಸ್‌ ಹಬ್ಬದಲ್ಲಿ ರಜೆ ಹೊಂದಿಸಿಕೊಳ್ಳಲು ಹಿಂದೂ ಹಬ್ಬವಾದ ದಸರಾದ ರಜೆಗಳನ್ನು ರದ್ದುಪಡಿಸಿ ಹಬ್ಬದ ಸಮಯದಲ್ಲಿ ಶಾಲೆ ಆರಂಭಿಸಿರುವ ಕ್ರಿಶ್ಚಿಯನ್‌ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಇತ್ತೀಚೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಡಿಡಿಪಿಐ ಕಚೇರಿ ಎದುರು ಪ್ರತಿಭಟಿಸಲಾಗಿತ್ತು. ಸ್ಪಂದಿಸಿದ ಡಿಡಿಪಿಐ ಎಸ್‌.ಎಸ್‌. ಕೆಳದಿಮಠ, ರಜಾ ಅವಧಿಯಲ್ಲಿ ಪರೀಕ್ಷೆ ನಡೆಸುವಂತಿಲ್ಲ ಹಾಗೂ ಸೆ. 25ರಿಂದ ಸಂಪೂರ್ಣ ಶಾಲೆಗೆ ರಜೆ ನೀಡಬೇಕೆಂದು ಆದೇಶಿಸಿದ್ದರು. ಆದರೂ ಬಾಸೆಲ್‌ ಮಿಶನ್‌ ಸಂಸ್ಥೆಯು ತರಗತಿ ನಡೆಸುತ್ತಿರುವುದು ಯಾವ ನ್ಯಾಯ ಎಂದು ಸಂಘದ ಮುಖಂಡರಾದ ಅಣ್ಣಪ್ಪದಿವಟಗಿ ಹಾಗೂ ಇತರರು ಖೇದ ವ್ಯಕ್ತಪಡಿಸಿದರು.

ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯು ಪಾಲಕರನ್ನು ಶಾಲೆಗೆ ಕರೆಯಿಸಿ ಮಕ್ಕಳನ್ನು ತರಗತಿಯಿಂದ ಹೊರ ಬಿಡಲಾಯಿತು. ಜೊತೆಗೆ ಅ. 7ರ ವರೆಗೆ ಶಾಲೆಗೆ ರಜೆ ಘೋಷಿಸಲಾಯಿತು.