ಯಲ್ಲಾಪುರ: ವರದಾ- ಬೇಡ್ತಿ ಹಾಗೂ ಅಘನಾಶಿನಿ- ವೇದಾವತಿ ನದಿ ಜೋಡಣೆ ವಿರೋಧಿಸಿ ಪಟ್ಟಣದಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್‌ ಪ್ರತಿಭಟನೆ ನಡೆಸಿ ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಹಲವು ನಿರ್ಣಯ ಕೈಗೊಳ್ಳಲಾಯಿತು. ಪಕ್ಷಾತೀತವಾಗಿ ಹಲವು ಜನಪ್ರತಿನಿಧಿಗಳು ಸೇರಿದಂತೆ 10 ಸಾವಿರಕ್ಕೂ ಅಧಿಕ ಜನರ ಹೋರಾಟದಲ್ಲಿ ಪಾಲ್ಗೊಂಡು ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ೧೫ ದಿನಗಳಲ್ಲಿ ನಿರ್ಧಾರ ಕೈಗೊಳ್ಳದಿದ್ದಲ್ಲಿ ರಾಜ್ಯ ಹಾಗೂ ಕೇಂದ್ರದ ಜನಪ್ರತಿನಿಧಿಗಳಿಗೆ ಕಣ್ಣು ತೆರೆಸುವ ಕಾರ್ಯ ಮಾಡಲಾಗುವುದು ಎಂಬ ಸಂದೇಶ ಸಾರಲಾಯಿತು. ಪಶ್ಚಿಮ ಘಟ್ಟಪ್ರದೇಶದ ಸೂಕ್ಷ್ಮ ಮತ್ತು ಅತಿ ಮಹತ್ವದ ಪರಿಸರದ ಸಂರಕ್ಷಣೆಗಾಗಿ ಮುಂಬರುವ ಎಲ್ಲ ಸಾರ್ವತ್ರಿಕ ಚುನಾವಣೆಗಳ ಮತದಾನ ಬಹಿಷ್ಕಾರದಂಥ ನಿರ್ಧಾರ ಮಾಡಲಾಗುವುದು ಎಂದು ಬೇಡ್ತಿ- ಅಘನಾಶಿನಿ ಕೊಳ್ಳ ಸಮಿತಿ ಎಚ್ಚರಿಸಿದೆ.

ಬೆಳಗ್ಗೆ ೧೦.೩೦ಕ್ಕೆ ಶಿರಸಿ ರಸ್ತೆಯ ಟಿಎಂಎಸ್ ಸೂಪರ್ ಮಾರ್ಟ್ ಎದುರು ಸಭೆ ನಡೆದು ಅಲ್ಲಿಂದ ಮೆರವಣಿಗೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಕಲ್ಪದ ಎದುರು ನಾಲ್ಕು ಗಂಟೆಗಳ ಕಾಲ ರಸ್ತೆ ತಡೆ ನಡೆಸಲಾಯಿತು. ಹೋರಾಟದಲ್ಲಿ ೧೦ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಜಿಲ್ಲೆಯ ವಿವಿಧ ಭಾಗಗಳಿಂದ ಭಾಗವಹಿಸಿದ್ದರು.ಹೋರಾಟದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜಿಲ್ಲೆಯ ಜನ ಪ್ರಜ್ಞಾವಂತರಿದ್ದಾರೆ. ನಮಗೆ ಜನರ ಧ್ವನಿಯ ಅರಿವಿದೆ. ನಾವು ಒಗ್ಗಟ್ಟಿನಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮುಖ್ಯಸ್ಥರಿಗೆ ಮನವರಿಕೆ ಮಾಡಿದ್ದೇವೆ. ಮುಂದೆಯೂ ಯೋಜನೆ ವಿರುದ್ಧ ನಾವು ಕೇಂದ್ರ, ರಾಜ್ಯ ಸರ್ಕಾರದಲ್ಲಿ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದ ಅವರು, ಬಿ.ಎಂ. ಕುಮಾರಸ್ವಾಮಿಯವರೇ ನೀವು ದೂರದಿಂದ ಭಾಷಣ ಮಾಡುವುದಕ್ಕೆ ಬಂದಿದ್ದೀರಿ, ರಾಜಕೀಯ ಇಲ್ಲಿ ತುರುಕಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಜನರ ಆಕ್ರೋಶ ಸರ್ಕಾರಕ್ಕೆ ತಲುಪಿದೆ. ಈ ಯೋಜನೆ ೮೦ರ ದಶಕದಲ್ಲಿಯೇ ಪ್ರಾರಂಭಗೊಂಡಿತ್ತು. ಪ್ರಕೃತಿ ಮುನಿದರೆ ಏನಾಗುತ್ತದೆ ಎಂಬುದನ್ನು ನಾವೆಲ್ಲ ಕಂಡಿದ್ದೇವೆ. ಹಾಗಾಗಿ ಈ ಯೋಜನೆಯನ್ನು ನಿಲ್ಲಿಸುವುದಕ್ಕೆ ನಾವೆಲ್ಲ ಬದ್ಧರು ಎಂದರು.

ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಈ ಹೋರಾಟದಲ್ಲಿ ಯಾವುದೇ ಕಾರಣಕ್ಕೆ ಯಾರೂ ರಾಜಕಾರಣವನ್ನು ಸೇರಿಸಬೇಡಿ. ಅದು ಹೋರಾಟಕ್ಕೆ ಹಿನ್ನಡೆಯಾಗುತ್ತದೆ. ಸ್ವರ್ಣವಲ್ಲಿ ಶ್ರೀಗಳ ನೇತೃತ್ವ, ಮಾರ್ಗದರ್ಶನದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಯೋಜನೆಯನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತೇವೆ. ಶ್ರೀಗಳ ಆದೇಶವನ್ನು ಯಾವುದೇ ಕಾರಣಕ್ಕೆ ನಿರ್ಲಕ್ಷಿಸುವುದಿಲ್ಲ. ಜನರ ಭಾವನೆಯನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಂಡಿದ್ದೇವೆ ಎಂದರು.

ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಜಿಲ್ಲೆಯ ಮುಂದಿನ ಜನಾಂಗಕ್ಕಾಗಿ ಯೋಜನೆಯನ್ನು ನಿಲ್ಲಿಸಲೇಬೇಕು. ಇದು ಅರ್ಥಪೂರ್ಣದ ಹೋರಾಟ. ತ್ಯಾಗಮಯ ಜಿಲ್ಲೆಗೆ ಇನ್ನು ಯಾವ ಯೋಜನೆಯೂ ಬೇಡ. ಇಂದು ಬರಗಾಲದಿಂದಾಗಿ ಕುಡಿಯುವುದಕ್ಕೆ ನೀರು ಇಲ್ಲವಾಗಿದೆ. ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಯೋಜನೆಯನ್ನು ನಿಲ್ಲಿಸುವಲ್ಲಿ ಕಾರಣರಾಗುತ್ತೇವೆ ಎಂದರು.


ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಜಿಲ್ಲೆಯ ಶಾಸಕರು ಮತ್ತು ಸಂಸದರು ಸೇರಿ ತೀವ್ರ ವಿರೋಧ ವ್ಯಕ್ತಪಡಿಸಿದರೆ ಈ ಯೋಜನೆಯನ್ನು ತಡೆಯಬಹುದು. ಬೇರೆ ಯಾವ ಜಿಲ್ಲೆಗೂ ಇಲ್ಲದ ಯೋಜನೆಗಳು ನಮ್ಮ ಬಳಿ ಬರುತ್ತದೆ. ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದರು.

ಪರಿಸರ ತಜ್ಞ ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ಈ ಯೋಜನೆಯ ನದಿಗಳಿಗೆ ಅಗತ್ಯವಾದ ನೀರೇ ಇಲ್ಲ. ಸಾವಿರಾರು ಕೋಟಿ ರು. ಹಣ ವ್ಯರ್ಥವಾಗುತ್ತದೆ. ಕೇಂದ್ರ ನೀರಾವರಿ ಅಭಿವೃದ್ಧಿ ಮಂಡಳಿಯ ಒಪ್ಪಿಗೆ ದೊರೆತರೂ ಇದನ್ನು ವಿರೋಧಿಸಲೇಬೇಕು. ರಾಜ್ಯ ಸರ್ಕಾರ ಯೋಜನೆಯನ್ನು ನಿಲ್ಲಿಸಲು ಮುಂದಾಗಬೇಕು. ಜನಪ್ರತಿನಿಧಿಗಳು ಯೋಜನೆ ಕುರಿತು ಸ್ಪಷ್ಟತೆ ನೀಡಬೇಕು ಎಂದರು.

ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನವಾಗಬೇಕು ಎಂದ ಅವರು, ಹೋರಾಟದ ಕುರಿತು ಎಲ್ಲ ಮಜಲುಗಳ ಮಾಹಿತಿ ನೀಡಿದರು.

ಹೋರಾಟ ಸಮಿತಿಯ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಸ್ವಾಗತಿಸಿ, ಕೈಗೊಂಡ ನಿರ್ಣಯ ವಾಚಿಸಿದರು. ಶಿವಪ್ರಸಾದ ಭಟ್ಟ ನಿರ್ವಹಿಸಿದರು. ಮಾತೃಮಂಡಳಿ ಮಾತೆಯರು ಪರಿಸರ ಗೀತೆ, ಭಜನೆ, ದೇಶಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಷ್‌ ಶಶಿ ಮನವಿ ಸ್ವೀಕರಿಸಿ ರಾಜ್ಯ, ಕೇಂದ್ರಕ್ಕೆ ಹೋರಾಟದ ಕುರಿತು ಮಾಹಿತಿ ನೀಡಲಾಗುವುದು ಎಂದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.