ಶೌಚಾಲಯಗಳು ಮತ್ತು ಸ್ವಚ್ಛತಾ ವ್ಯವಸ್ಥೆಗಳು ನಿರಂತರವಾಗಿ ಬಳಕೆಯಾಗುವ ಮೂಲಕ ಒಡಿಎಫ್ (ಬಹಿರಂಗ ಶೌಚಮುಕ್ತ) ಸಾಧಿಸುವುದು ಅತೀ ಮುಖ್ಯವಾಗಿದ್ದು, ಈ ದಿಶೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತೀ ಮುಖ್ಯವಾಗಿದೆ.
ಕನ್ನಡಪ್ರಭ ವಾರ್ತೆ ರೋಣ
ಶೌಚಾಲಯಗಳು ಮತ್ತು ಸ್ವಚ್ಛತಾ ವ್ಯವಸ್ಥೆಗಳು ನಿರಂತರವಾಗಿ ಬಳಕೆಯಾಗುವ ಮೂಲಕ ಒಡಿಎಫ್ (ಬಹಿರಂಗ ಶೌಚಮುಕ್ತ) ಸಾಧಿಸುವುದು ಅತೀ ಮುಖ್ಯವಾಗಿದ್ದು, ಈ ದಿಶೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತೀ ಮುಖ್ಯವಾಗಿದೆ ಎಂದು ಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.ಮಂಗಳವಾರ ಪಟ್ಟಣದ ಸಾಹಿತ್ಯ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಛ ಭಾರತ ಮಿಷನ್ ( ಗ್ರಾಮೀಣ) ,ಜಿಪಂ, ತಾಪಂ ರೋ, ಎಸ್.ಆರ್. ಪ್ರತಿಷ್ಠಾನ ರೋಣ ಇವುಗಳ ಸಂಯುಕ್ತಾಶ್ರಯದಲ್ಲಿ ರೋಣ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಒಡಿಎಫ್ ಸುಸ್ಥಿರತೆಯನ್ನು ಸಾಧಿಸಿದ ಕ್ಲಸ್ಟರ್ ಗಳಲ್ಲಿ ಅನುಷ್ಠಾನ ಕುರಿತು ತಾಲೂಕು ಮಟ್ಟದ ದೃಷ್ಟಿಕೋನ ಮತ್ತು ಕಾರ್ಯ ಯೋಜನೆ ಕಾರ್ಯಾಗಾರದಲ್ಲಿ ಮಾತನಾಡಿದರು.
ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಾಗಿಸುವಲ್ಲಿ ಈಗಾಗಲೆ ಪ್ರತಿಯೊಂದು ಮನೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು, ಗ್ರಾಮಗಳಲ್ಲಿ ಒಡಿಎಫ್ ಘೋಷಣೆಯಾದರೇ ಸಾಲದು, ಅಲ್ಲಿ ನಿರ್ಮಿಸಲಾದ ಶೌಚಾಲಯಗಳು ನಿರಂತರ ಬಳಕೆಯಾಗುತ್ತವೆ ಎಂಬುದು ತಿಳಿಯುವುದು ಪ್ರಮುಖವಾಗಿದೆ. ತಮ್ಮ ಮನೆಯಲ್ಲಿ ಶೌಚಾಲಯವಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಬಹುತೇಕರು ಶೌಚಾಲಯ ಬಳಸದೇ ಬಯಲಿನತ್ತ ತೆರಳುತ್ತಿದ್ದಾರೆ. ಇದರಿಂದ ಅನೈರ್ಮಲತ್ಯೆ ಉಂಟಾಗಿ, ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವುದು. ಇದನ್ನು ಮನಗಂಡು ದೆಹಲಿ ಮೂಲದ ಪಿಡ್ ಬ್ಯಾಕ್ ಫೌಂಡೇಶನ್ ರೋಣ ಮತಕ್ಷೇತ್ರದಲ್ಲಿ 5 ಗ್ರಾಪಂಗಳನ್ನು ದತ್ತು ಪಡೆದು, ಅಲ್ಲಿನ ಗ್ರಾಮಗಳಲ್ಲಿ ಬಯಲು ಬಹಿರ್ದೆಸೆ ಮುಕ್ತ ಮಾಡುವ ಮೂಲಕ ಪ್ರತಿಯೊಬ್ಬರು ಶೌಚಾಲಯ ಬಳಸುವಂತೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸಲಿದ್ದು, 3 ತಿಂಗಳ ಅವದಿಯಲ್ಲಿಯೇ ಈ ಸಾಧನೆಗೆ ಪಿಡ್ ಬಾಕ್ ಫೌಂಡೇಶನ್ ಪಣತೊಟ್ಟಿದ್ದು, ಈ ಕಾರ್ಯ ಸಾಕಾರಗೊಳ್ಳಲು ಜನತೆ ಸಹಕಾರ ಮುಖ್ಯವಾಗಿದೆ. ಈ ದಿಶೆಯಲ್ಲಿ ಜಿಪಂ, ತಾಪಂ ಮತ್ತು ಗ್ರಾಪಂ ಅಧಿಕಾರಿಗಳು ಒಗ್ಗೂಡಿ ಪಿಡ್ ಬ್ಯಾಕ್ ಫೌಂಡೇಶನ್ ನೊಂದಿಗೆ ಶ್ರಮಿಸಬೇಕು ಎಂದರು.ಜಿಪಂ ಸಿಇಒ ಮುಕುಲ್ ಜೈನ್ ಮಾತನಾಡಿ, ಬಯಲು ಬಹಿರ್ದೇಶೆ ಮುಕ್ತ ಗ್ರಾಮ ಹಾಗೂ ಶೌಚಾಲಯ ಬಳಕೆ ಕುರಿತು ಜನರಲ್ಲಿ ಜಾಗೃತಿ, ಪರಿವರ್ತನೆ ತರುವಲ್ಲಿ ಕಾರ್ಯ ಕೈಗೊಳ್ಳಲಿರುವ ಪಿಡ್ ಬ್ಯಾಕ್ ಫೌಂಡೇಶನ್ಗೆ ಬೇಕಾದ ಸಹಕಾರವನ್ನು ಜಿಪಂಯಿಂದ ನೀಡಲಾಗುವುದು ಎಂದರು.
ದೆಹಲಿ ಪಿಡ್ ಬ್ಯಾಕ್ ಫೌಂಡೇಶನ್ ವ್ಯವಸ್ಥಾಪಕ ಅಜಯ ಸಿನ್ಹಾ ಮಾತನಾಡಿ, ಶೇ. 90ರಷ್ಟು ಮನೆಗಳಲ್ಲಿ ಶೌಚಾಲಯಗಳಿದ್ದರೂ ಬಹುತೇಕರು ಶೌಚಾಲಯ ಬಳಸದೇ ಬಯಲಿನತ್ತ ಹೋಗುತ್ತಾರೆ. ಶೌಚಾಲಯ ಕಟ್ಟಿಸಿಕೊಂಡರೇ ಸಾಲದು, ಅದರ ಬಳಕೆ ಅತೀ ಮುಖ್ಯವಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ರೋಣ ತಾಲೂಕಿನ 5 ಗ್ರಾಪಂಗಳನ್ನು ದತ್ತು ಪಡೆದು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿಸುವಲ್ಲಿ ಪಿಡ್ ಬ್ಯಾಕ್ ಫೌಂಡೇಶನ್ ಪಣ ತೊಡಲಿದೆ ಎಂದರು.ಕಾರ್ಯಾಗಾರದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಪಂ ಉಪ ಕಾರ್ಯದರ್ಶಿ ಎಂ.ವ್ಹಿ. ಚಳಗೇರಿ, ಅಶೋಕ ಮಿರ್ಜಿ, ಐ.ಎಸ್. ಪಾಟೀಲ, ಗ್ಯಾಎಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ, ಶರಣಪ್ಪ ಬೇಟಗೇರಿ, ಪಿಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ವೀರಣ್ಣ ಶೆಟ್ಟರ, ಪ್ರಭು ಮೇಟಿ, ಪರಶುರಾಮ ಅಳಗವಾಡಿ, ಅಕ್ಷಯ ಪಾಟೀಲ, ಶರಣಗೌಡ ಪಾಟೀಲ ಸರ್ಜಾಪೂರ, ತಾಒಂ ಇಒ ಚಂದ್ರಶೇಖರ ಕಂದಕೂರ, ಬಿ.ಎಸ್. ಕರಿಗೌಡ್ರ ಮುಂತಾದವರಿದ್ದರು.