ಇಂದಿನ ಶಿಕ್ಷಣದಲ್ಲಿ ಸಂಸ್ಕಾರದ ಕೊರತೆ ಇದೆ. ಕೇವಲ ಅಂಕದಿಂದಲೇ ಎಲ್ಲವನ್ನೂ ಸಾಧಿಸಲಾಗದು. ಮಕ್ಕಳಿಗೆ ನಮ್ಮ ಪರಂಪರೆಯ ಸಂಸ್ಕಾರ, ಮೌಲ್ಯ, ಸಂಸ್ಕೃತಿಯನ್ನು ಮೂಡಿಸದಿದ್ದರೆ ಅವರ ಬದುಕು ಶ್ರೇಷ್ಠತ್ವವನ್ನು ಕಳೆದುಕೊಳ್ಳುತ್ತದೆ.
ಯಲ್ಲಾಪುರ: ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ಮತ್ತು ನೀರಿಗೆ ತೀವ್ರ ತೊಂದರೆ ಬರಲಿದೆ ಎಂಬುದು ತಜ್ಞರ ಅಭಿಮತ. ಇಂದು ಕೈಯಲ್ಲಿಯೇ ಜಗತ್ತನ್ನು ನೋಡುವ ಗೀಳಿಗೆ ದಾಸರಾಗುತ್ತಿದ್ದೇವೆ. ಇದು ಭವಿಷ್ಯತ್ತಿನಲ್ಲಿ ಬಹುದೊಡ್ಡ ಆತಂಕಕ್ಕೆ ಎಡೆ ಮಾಡುತ್ತಿದೆ ಎಂದು ಬಂಗಾರಮಕ್ಕಿಯ ಮಾರುತಿ ಗುರೂಜಿ ನುಡಿದರು.
ಅವರು ಸೋಮವಾರ ಪಟ್ಟಣದ ಗಾಂಧೀ ಕುಟೀರದಲ್ಲಿ ನಡೆಯುತ್ತಿರುವ 2ನೇ ದಿನದ ಸಂಕಲ್ಪ ಉತ್ಸವದಲ್ಲಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.ಇಂದಿನ ಶಿಕ್ಷಣದಲ್ಲಿ ಸಂಸ್ಕಾರದ ಕೊರತೆ ಇದೆ. ಕೇವಲ ಅಂಕದಿಂದಲೇ ಎಲ್ಲವನ್ನೂ ಸಾಧಿಸಲಾಗದು. ಮಕ್ಕಳಿಗೆ ನಮ್ಮ ಪರಂಪರೆಯ ಸಂಸ್ಕಾರ, ಮೌಲ್ಯ, ಸಂಸ್ಕೃತಿಯನ್ನು ಮೂಡಿಸದಿದ್ದರೆ ಅವರ ಬದುಕು ಶ್ರೇಷ್ಠತ್ವವನ್ನು ಕಳೆದುಕೊಳ್ಳುತ್ತದೆ. ಆಸೆ ಬಿಡುವವರೆಗೂ ಆರೋಗ್ಯ ದೊರೆಯದು. ಆಧ್ಯಾತ್ಮಿಕತೆಯಲ್ಲಿ ತೊಡಗಿಕೊಳ್ಳುವವರೆಗೂ ಆನಂದ ಸಿಗದು. ಪ್ರಾಜ್ಞರ, ಗಣ್ಯರ ಮಾತನ್ನು ಕೇಳಿ ಅರ್ಥೈಸಿಕೊಳ್ಳಬೇಕು ಎಂದರು.
ಸಿದ್ದಾಪುರದ ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮಿಗಳು ಸಾನ್ನಿಧ್ಯ ವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಕಲ್ಪ ದೃಢವಾಗಿದ್ದರೆ ಯಾವುದೇ ಕೆಲಸ ಯಶಸ್ವಿಯಾಗುತ್ತದೆ. ಸಂಕಲ್ಪ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಜತೆಗೆ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೂ ಮಹತ್ವ ನೀಡುತ್ತಿರುವುದು ಸಂತೋಷದ ಸಂಗತಿ. ಸ್ವರ್ಣವಲ್ಲಿ ಶ್ರೀಗಳು ನಾಡಿನಾದ್ಯಂತ ಗೀತಾಭಿಯಾನ ನಡೆಸುತ್ತಿದ್ದಾರೆ. ಗೀತೆಯೊಂದೇ ಸಕಲ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು ಎಂದರು.ಈ ಸಂದರ್ಭದಲ್ಲಿ ಕಲಾಸೇವೆಗಾಗಿ ರಾಮಚಂದ್ರ ಭಟ್ಟ ಕಂಕುಮನೆ ಹಾಗೂ ಆರೋಗ್ಯ ಸೇವೆಗಾಗಿ ದೀಪಿಕಾ ಅಶೋಕ ತಾಮಸೆ ಅವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಮುಖರಾದ ಸದಾನಂದ ಭಟ್ಟ ಹಳವಳ್ಳಿ, ಸುಬ್ಬಣ್ಣ ಬೋಳ್ಮನೆ, ಎಲ್.ಪಿ. ಭಟ್ಟ ಗುಂಡ್ಕಲ್, ದತ್ತಾತ್ರಯ ಭಟ್ಟ, ದೋಂಡು ಪಾಟೀಲ, ಗಣೇಶ ಪಾಟಣಕರ, ಮಹೇಶ ದೇಸಾಯಿ, ಚಿದಾನಂದ ಹರಿಜನ ಇದ್ದರು. ಸಂಕಲ್ಪ ಸಂಚಾಲಕ ಪ್ರಸಾದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಜಿ. ಹೆಗಡೆ ಸ್ವಾಗತಿಸಿದರು. ಎ.ಜಿ. ನವೀನಕುಮಾರ ನಿರ್ವಹಿಸಿದರು. ಕೊನೆಯಲ್ಲಿ ವನವಾಸಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ವಂದೇ ಮಾತರಂ ಹಾಡಿದರು.