ನಾಡಿಗೆ ಒಳ್ಳೆಯ ಮಳೆ, ಬೆಳೆಯಾಗಲಿ

| Published : Jul 03 2025, 12:32 AM IST

ಸಾರಾಂಶ

ನಾಡಿಗೆ ಒಳ್ಳೆಯ ಮಳೆ, ಬೆಳೆಯಾಗಲಿ, ನಮ್ಮ ದಾವಣಗೆರೆ ರೈತರು ಸಮೃದ್ಧಿಯಿಂದ ಇರಲಿ, ಪ್ರತಿಯೊಬ್ಬರ ಆಸೆ ಆಕಾಂಕ್ಷೆಗಳಾದ ನಮ್ಮ ಮುಂದಿನ ಭವಿಷ್ಯ, ಆರೋಗ್ಯ, ನಮ್ಮ ಮಕ್ಕಳ ಭವಿಷ್ಯ ಎಲ್ಲವೂ ಕೂಡ ಉಜ್ವಲವಾಗಿರಲಿ ದೇವರು ಇನ್ನೂ ಹೆಚ್ಚಿನ ಶಕ್ತಿ, ಸ್ಫೂರ್ತಿ ನಮ್ಮೆಲ್ಲರಿಗೂ ಕರುಣಿಸಲಿ ಎಂದು ಪುರಿ ಶ್ರೀ ಜಗನ್ನಾಥ ಸ್ವಾಮಿಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರಾರ್ಥಿಸಿದರು.

ದಾವಣಗೆರೆ: ನಾಡಿಗೆ ಒಳ್ಳೆಯ ಮಳೆ, ಬೆಳೆಯಾಗಲಿ, ನಮ್ಮ ದಾವಣಗೆರೆ ರೈತರು ಸಮೃದ್ಧಿಯಿಂದ ಇರಲಿ, ಪ್ರತಿಯೊಬ್ಬರ ಆಸೆ ಆಕಾಂಕ್ಷೆಗಳಾದ ನಮ್ಮ ಮುಂದಿನ ಭವಿಷ್ಯ, ಆರೋಗ್ಯ, ನಮ್ಮ ಮಕ್ಕಳ ಭವಿಷ್ಯ ಎಲ್ಲವೂ ಕೂಡ ಉಜ್ವಲವಾಗಿರಲಿ ದೇವರು ಇನ್ನೂ ಹೆಚ್ಚಿನ ಶಕ್ತಿ, ಸ್ಫೂರ್ತಿ ನಮ್ಮೆಲ್ಲರಿಗೂ ಕರುಣಿಸಲಿ ಎಂದು ಪುರಿ ಶ್ರೀ ಜಗನ್ನಾಥ ಸ್ವಾಮಿಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರಾರ್ಥಿಸಿದರು.ನಗರದ ಮಂಡಿಪೇಟೆಯ ಕೋದಂಡ ರಾಮ ದೇವಸ್ಥಾನದ ಆವರಣದಲ್ಲಿ ಬುಧವಾರ ಮಧ್ಯಾಹ್ನ ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ ಇಸ್ಕಾನ್‌ನಿಂದ ನಡೆದ 4ನೇ ಬಾರಿಗೆ ವಿಶ್ವವಿಖ್ಯಾತ ಪುರಿ ಶ್ರೀ ಜಗನ್ನಾಥ ಸ್ವಾಮಿಯ ರಥ ಯಾತ್ರೆಗೆ ಬಂಗಾರದ ಪೊರಕೆಯಿಂದ ರಸ್ತೆಯ ಮಾರ್ಗವನ್ನು ಸ್ವಚ್ಛಗೊಳಿಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇವರು ನಮಗೆ ಒಳ್ಳೆಯ ಮಾರ್ಗದರ್ಶನ ನೀಡಲಿ, ಇಸ್ಕಾನ್ ಸಂಸ್ಥೆಯವರೂ ದಾವಣಗೆರೆ ಜನತೆಗೆ ಮಾರ್ಗದರ್ಶನ ಮಾಡಲಿ ಎಂದರು. ಇಸ್ಕಾನ್ ದಾವಣಗೆರೆಯ ಮುಖ್ಯಸ್ಥ ಅವಧೂತ ಚಂದ್ರದಾಸ್ ಮಾತನಾಡಿದರು.

ತಿರುಪತಿ ಗುರುಗಳು, ದೂಡಾ ಅಧ್ಯಕ್ಷ, ರಥಯಾತ್ರೆ ಸಮಿತಿ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಇಸ್ಕಾನ್ ದಾವಣಗೆರೆ ವಿಭಾಗದ ಸಂಚಾಲಕರು, ಸದ್ಬಕ್ತರು, ಇತರು ಭಾಗವಹಿಸಿದ್ದರು.

ನಂತರ ರಥಯಾತ್ರೆ ಶ್ರೀ ಕೋದಂಡರಾಮ ದೇವಸ್ಥಾನದಿಂದ ಹೊರಟು ಚಾಮರಾಜಪೇಟೆ ವೃತ್ತ, ಹಾಸಭಾವಿ ವೃತ್ತ, ಚೌಕಿಪೇಟೆ, ಹೊಂಡದ ವೃತ್ತ, ಅರುಣ ವೃತ್ತ, ಆರ್.ಎಚ್.ಛತ್ರ, ಜಯದೇವ ವೃತ್ತ, ವಿದ್ಯಾರ್ಥಿಭವನದ ಮೂಲಕ ಗುಂಡಿ ವೃತ್ತಕ್ಕೆ ಆಗಮಿಸಿತು. ಭಕ್ತರ ಹರಿನಾಮ ಕೀರ್ತನೆ, ಹತ್ತಾರು ಕಲಾತಂಡಗಳೊಂದಿಗೆ ಮೆರವಣಿಗೆ ಜರುಗಿತು. ಮೆರವಣಿಗೆ ಸಾಗಿದ ವೃತ್ತಗಳಲ್ಲಿ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ನೃತ್ಯ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.