ಸಾರಾಂಶ
ಓಲೆ ಗರಿಗಳಲ್ಲಿ 12ನೇ ಶತಮಾನದ ಶಿವ ಶರಣರು ರಚಿಸಿದಂತಹ ವಚನ ಸಾಹಿತ್ಯವನ್ನು ವಚನಗಳ ಪಿತಾಮಹರಾದ ಫ.ಗು.ಹಳಕಟ್ಟಿ ಅವರು ಸಂಗ್ರಹಿಸಿ ವಚನ ಶಾಸ್ತ್ರಸಾರ ಎಂಬ ಗ್ರಂಥವನ್ನು ಕನ್ನಡದಲ್ಲಿ ಎಲ್ಲರಿಗೂ ಆರ್ಥವಾಗುವಂತೆ ಬರೆದು ವಚನ ಸಾಹಿತ್ಯಕ್ಕೆ ಬೆಳಕು ಚಲ್ಲಿದ ಮಹಾನುಭಾವರು ಎಂದು ಶರಣ ಸಿರಿ ಪ್ರಶಸ್ತಿ ಪುರಸ್ಕೃತ ಗುಳ್ಳಹಳ್ಳಿ ಎಚ್.ಎಸ್.ಮಲ್ಲಿಕಾರ್ಜುನಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಓಲೆ ಗರಿಗಳಲ್ಲಿ 12ನೇ ಶತಮಾನದ ಶಿವ ಶರಣರು ರಚಿಸಿದಂತಹ ವಚನ ಸಾಹಿತ್ಯವನ್ನು ವಚನಗಳ ಪಿತಾಮಹರಾದ ಫ.ಗು.ಹಳಕಟ್ಟಿ ಅವರು ಸಂಗ್ರಹಿಸಿ ವಚನ ಶಾಸ್ತ್ರಸಾರ ಎಂಬ ಗ್ರಂಥವನ್ನು ಕನ್ನಡದಲ್ಲಿ ಎಲ್ಲರಿಗೂ ಆರ್ಥವಾಗುವಂತೆ ಬರೆದು ವಚನ ಸಾಹಿತ್ಯಕ್ಕೆ ಬೆಳಕು ಚಲ್ಲಿದ ಮಹಾನುಭಾವರು ಎಂದು ಶರಣ ಸಿರಿ ಪ್ರಶಸ್ತಿ ಪುರಸ್ಕೃತ ಗುಳ್ಳಹಳ್ಳಿ ಎಚ್.ಎಸ್.ಮಲ್ಲಿಕಾರ್ಜುನಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ನಡೆದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜಯಂತ್ಯುತ್ಸವ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯಕ್ಕೆ ಫ.ಗು.ಹಳಕಟ್ಟಿಯವರ ಕೊಡುಗೆ ಎಂಬ ವಿಷಯದ ಕುರಿತು ಮಾತನಾಡಿದರು.
ಓಲೆಗರಿಯಿಂದ ಎಲ್ಲರೂ ಓದಬಹುದಾದಂತಹ ಕನ್ನಡ ಭಾಷೆಯಲ್ಲಿ ಬರೆದು ಪುಸ್ತಕದ ಮುದ್ರಣಕ್ಕಾಗಿ ಮಂಗಳೂರಿನಲ್ಲಿದ್ದ ಭಾಸಲ್ ಮಿಷನ್ ಎಂಬ ಮುದ್ರಣಾಲಯಕ್ಕೆ ಮುದ್ರಿಸಲು ನೀಡಿದಾಗ ಅವರು ವಚನ ಸಾಹಿತ್ಯದ ಮುದ್ರಣ ಮಾಡದೆ ವಾಪಸ್ ಕಳಿಸಿದರು. ಈ ವೇಳೆ ಫ.ಗು.ಹಳಕಟ್ಟಿ ಅವರು ತಮ್ಮ ಮನೆಯನ್ನು ಮಾರಾಟ ಮಾಡಿ ಮುದ್ರಣದ ಯಂತ್ರ ತಂದು ವಚನ ಸಾಹಿತ್ಯದ ಪುಸ್ತಕವನ್ನು ಮುದ್ರಿಸಿದರು ಎಂದು ತಿಳಿಸಿದರು.ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್.ಶಂಕರಪ್ಪ ಮಾತನಾಡಿ, 12ನೇ ಶತಮಾನದ ಶರಣರು ತಮ್ಮ ಅನುಭವಗಳಲ್ಲಿ ಆದ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ರಚಿಸಿದ ವಚನ ಸಾಹಿತ್ಯ ಸೂರ್ಯ, ಚಂದ್ರರು ಇರುವ ತನಕ ಅಚ್ಚಹಸಿರಾಗಿರುವುದು ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಎಚ್.ಎಂ.ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಮಲ್ಲೇಶಪ್ಪ, ಹಿರಿಯ ಪತ್ರಕರ್ತ ಬಾ.ರಾ.ಮಹೇಶ್, ದತ್ತಿದಾನಿಗಳಾದ ಹನುಮಂತಪ್ಪ, ರುದ್ರಪ್ಪ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ದತ್ತಿ ದಾನಿಗಳ ಪರಿಚಯವನ್ನು ಸತೀಶ್ ಮಾಡಿಕೊಟ್ಟರು.