ಆರೇ ತಿಂಗಳಲ್ಲಿ ಡಿಸಿಎಫ್‌ ವರ್ಗಾವಣೆ..! ಎಸ್ಪಿದೂ ಸಹ.?

| Published : Jul 03 2025, 12:32 AM IST

ಆರೇ ತಿಂಗಳಲ್ಲಿ ಡಿಸಿಎಫ್‌ ವರ್ಗಾವಣೆ..! ಎಸ್ಪಿದೂ ಸಹ.?
Share this Article
  • FB
  • TW
  • Linkdin
  • Email

ಸಾರಾಂಶ

DCF transfer in six months..! SP too.?

- ಅಕ್ರಮ ತಡೆಗಟ್ಟಿದ್ದಕ್ಕೆ ಸರ್ಕಾರದ ವರ್ಗಾವಣೆ ಶಿಕ್ಷೆ ?

- ಅರಣ್ಯ ಪ್ರದೇಶ ಒತ್ತುವರಿ ತಡೆದಿದ್ದ ಡಿಸಿಎಫ್‌ ಪ್ರಕಾಶ ಪ್ರಿಯದರ್ಶಿ 6 ತಿಂಗಳಲ್ಲೇ ವರ್ಗ!

- ಅಕ್ರಮ ಮರಳು, ಮಟ್ಕಾ ದಂಧೆ ಅಟ್ಟಟಹಾಸಕ್ಕೆ ಬ್ರೇಕ್‌ ಹಾಕಿದ್ದ ಎಸ್ಪಿ ಪೃಥ್ವಿಕ್‌ಗೂ ವರ್ಗಾವಣೆ ?

- ಯಾದಗಿರಿ ಜಿಲ್ಲೆಯಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲವೇ?

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಹಿಂದುಳಿದ ಜಿಲ್ಲೆಯನ್ನು ಮುಂದುವರೆದ ಜಿಲ್ಲೆಯನ್ನಾಗಿಸಬೇಕೆಂದರೆ ಅಭಿವೃದ್ಧಿಪರ ಚಿಂತನೆಯುಳ್ಳ , ಜೊತೆಗೆ ಪ್ರಾಮಾಣಿಕ ಅಧಿಕಾರಿಗಳ ಇರುವಿಕೆಯೂ ಸಹ ಅಷ್ಟೇ ಮುಖ್ಯ. ಆದರೆ, ಜಿಲ್ಲೆಯಲ್ಲಿ ಅವ್ಯಾಹತ ನಡೆಯುತ್ತಿದ್ದ ವಿವಿಧ ರೀತಿಯ ಅಕ್ರಮ ತಡೆಗಟ್ಟುವುದು ಸೇರಿದಂತೆ ಜನಹಿತ ಚಿಂತನೆಗಳುಳ್ಳ ಕಾರ್ಯಗಳಿಗೆ ಮುಂದಾದ ಅಧಿಕಾರಿಗಳಿಗೆ ವರ್ಗಾವಣೆ ವಣೆ ಶಿಕ್ಷೆ ವಿಧಿಸಲಾಗುತ್ತಿದೆಯೇ?

ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲೀಗ ಪ್ರತಿಧ್ವನಿಸುತ್ತಿದೆ. ಯಾದಗಿರಿ ಉಪ ಅರಣ್ಯ ಸಂರಕ್ಷಣಾಧಿಕಾರಿ (Deputy Conservator of Forests), 2018ರ ಬ್ಯಾಚಿನ ಐ.ಎಫ್‌.ಎಸ್‌. ಅಧಿಕಾರಿ ಪ್ರಭಾಕರ್‌ ಪ್ರಿಯದರ್ಶಿ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಲಾಗಿದೆ. ಜನವರಿ 2ರಂದು ಅಧಿಕಾರ ಸ್ವೀಕರಿಸಿದ್ದ ಡಿಸಿಎಫ್‌ ಪ್ರಭಾಕರ್‌ ಅವರನ್ನು ಗೋಕಾಕ್‌ನ ಘಟಪ್ರಭಾ ವಿಭಾಗಕ್ಕೆ ಡಿಸಿಎಫ್‌ ಎಂದು ವರ್ಗಾಯಿಸಲಾಗಿದೆ. ಇಲ್ಲಿಗೆ ಬಂದ ಆರೇಳು ತಿಂಗಳಲ್ಲೇ ಇವರ ವರ್ಗಾವಣೆ ಇಲಾಖೆ ಹಾಗೂ ಪರಿಸರ-ಪ್ರಾಣಿಪ್ರಿಯರ ಅಚ್ಚರಿಗೂ ಕಾರಣವಾಗಿದೆ.

ಜಿಲ್ಲೆಯ ವಿವಿಧೆಡೆ 80 ಎಕರೆ ಅರಣ್ಯ ಪ್ರದೇಶದ ಒತ್ತುವರಿ ತೆರವುಗೊಳಿಸಿದ್ದು, ಸುರಪುರದ ದೀವಳಗುಡ್ಡ ಅರಣ್ಯ ಇಲಾಖೆಯ ಭೂಮಿ ಕಬಳಿಸಿದವರ ವಿರುದ್ಧ ದೂರು ದಾಖಲಿಸಿ ದಿಟ್ಟತನ ಮೆರೆದಿದ್ದ ಪ್ರಭಾಕರ್‌, ಅರಣ್ಯಭಕ್ಷಕರು, ಲಾಬಿಪರ ನಿಂತಿದ್ದ ರಾಜಕೀಯ ಮುಖಂಡರ ಕೆಂಗಣ್ಣಿಗೆ ಕಾರಣವಾಗಿದ್ದರು.

ಸುರಪುರ ಅರಣ್ಯ ಪ್ರದೇಶದ ಭೂಮಿಯನ್ನು ಗೈರಾಣಿ ಎಂದು ಬಿಂಬಿಸಿ, ಕೋಟ್ಯಂತರ ಮೌಲ್ಯದ 20ಕ್ಕೂ ಹೆಚ್ಚು ಎಕರೆ ಜಮೀನಿನ ಮೇಲೆ ಹೊಂಚು ಹಾಕಿದವರ ವಿರುದ್ಧ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆದು, ಅರಣ್ಯ ಭೂಮಿ ರಕ್ಷಣೆಗೆ ಮುಂದಾಗಿದ್ದರು. ರಾಜ್ಯದಲ್ಲೇ ಅತ್ಯಂತ ದೊಡ್ಡದಾದ ಬೋನಾಳ ಪಕ್ಷಿಧಾಮಕ್ಕೆ ಹೊಸ ರೂಪ ನೀಡುವಲ್ಲಿ ಮುತುವರ್ಜಿವಹಿಸಿ, ರಂಗನತಿಟ್ಟು ಮಾದರಿ ಮೀರಿಸುವಂತೆ ರೂಪುರೇಷೆ ಸಿದ್ಧಪಡಿಸಿದ್ದ, ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಚಿಂತನೆಯಂತೆ ಈ ಭಾಗದಲ್ಲಿ ಹಸಿರೀಕರಣ ಕೊರತೆ ನಿವಾರಿಸುವಲ್ಲಿ ಒಂದು ಕಿ.ಮೀ.ಗೆ 400 ಸಸಿಗಳ ನೆಡುವಿಕೆ ಯೋಜನೆ ಕೈಗೆತ್ತಿಕೊಂಡು, ಅನುದಾನ ದುರ್ಬಳಕೆಯಾಗದಂತೆ ಕಣ್ಗಾವಲು ವಹಿಸಿದ್ದರ ಪರಿಣಾಮ, ಅವಧಿಪೂರ್ವದಲ್ಲೇ "ವರ್ಗಾವಣೆ ಶಿಕ್ಷೆ "ಗೆ ಗುರಿಯಾದರು ಎಂಬ ಮಾತು ಇಲಾಖೆಯಲ್ಲೇ ಕೇಳಿ ಬರುತ್ತಿವೆ. ಜೊತೆಗೆ, ಎಸಿಎಫ್‌ ವರ್ಗಾವಣೆಗೂ ಬಿಗಿಪಟ್ಟು ಹಿಡಿದಿದ್ದ ರಾಜಕೀಯ ಪುಢಾರಿಗಳ ವಿರುದ್ಧ ಸಚಿವ ಈಶ್ವರ ಖಂಡ್ರೆ ಗುಟುರು ಹಾಕಿದ್ದರಿಂದ, ವಿವಿಧ ಕಾರ್ಯಾಚರಣೆಯಲ್ಲಿ ಅಕ್ರಮಕೋರರ ಬೆವರಿಳಿಸಿದ್ದ ಎಸಿಎಫ್‌ ಸುನಿಲ್‌ ಕುಮಾರ್‌ ವರ್ಗಾವಣೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ.

======ಬಾಕ್ಸ್‌======

* ಅಕ್ರಮಕೋರರ ನಿದ್ದೆಗೆಡಿಸಿದ್ದ ಎಸ್ಪಿ ಪ್ರಥ್ವಿಕ್‌ ಸಹ ವರ್ಗಾವಣೆ ?

ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪೃಥ್ವಿಕ್‌ ಶಂಕರ್‌ ಅವರನ್ನೂ ಸಹ ವರ್ಗಾವಣೆಗೆ ಸರ್ಕಾರ ಸಿದ್ಧತೆ ನಡೆಸಿದ್ದು, ಒಂದೆರೆಡು ದಿನಗಳಲ್ಲಿ ಅವರನ್ನೂ ಸಹ ಇಲ್ಲಿಂದ ಬೀಳ್ಕೊಡುವ ಸಿದ್ಧತೆ ತೆರೆಮರೆಯಲ್ಲೇ ನಡೆದಿವೆ ಎನ್ನಲಾಗುತ್ತಿದೆ. 2018 ರ ಬ್ಯಾಚಿನ, ಮಂಡ್ಯ ಮೂಲದ ಐಪಿಎಸ್‌ ಅಧಿಕಾರಿ ಪೃಥ್ವಿಕ್‌ ಶಂಕರ್‌ ಕಳೆದ ನವೆಂಬರಿನಲ್ಲಿ ಯಾದಗಿರಿ ಜಿಲ್ಲೆ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದಕ್ಕೂ ಮುನ್ನ, ಸಿಐಡಿಯಲ್ಲಿ ಎಸ್ಪಿಯಾಗಿದ್ದ ಪೃಥ್ವಿಕ್‌ ಶಂಕರ್‌, ಯಾದಗಿರಿ ನಗರ ಠಾಣೆಯ ಪಿಎಸ್ಐ ಆಗಿದ್ದ ಪರಶುರಾಮ್‌ ಸಾವಿನ ಪ್ರಕರಣದ ತನಿಖೆಯನ್ನೂ ನಡೆಸಿದ್ದರು. ಅಕ್ರಮಗಳ ವಿರುದ್ಧ ಸಮರ ಸಾರಿರುವ ಪೃಥ್ವಿಕ್‌, ದಂಧೆಕೋರರ ಸದ್ದಡಗಿಸಿದ್ದರು.

ಆದರೆ, ಎಸ್ಪಿ ನಡೆಯಿಂದಾಗಿ ಅಕ್ರಮ ದಂಧೆಕೋರರ ವ್ಯಾಪಾರ ಸ್ಥಗಿತಗೊಂಡಂತಾಗಿದೆ. ಇದು ಪ್ರಭಾವಿಗಳ ವಲಯದಲ್ಲೂ ಸಹ ಒಂದಿಷ್ಟು ಉಸಿರು ಗಿಟ್ಟಿಸುವ ವಾತಾವರಣಕ್ಕೆ ಕಾರಣವಾಗಿರುವುದರಿಂದ, ಪೃಥ್ಬಿಕ್ ಶಂಕರ್‌ ಅವರನ್ನೂ ವರ್ಗಾವಣೆಗೊಳಿಸುವಂತೆ ರಾಜಕೀಯ ಲಾಬಿ ಕೈಹಾಕಿದೆ. ಏಳೆಂಟು ತಿಂಗಳಲ್ಲೇ ದಿಟ್ಟ ಅಧಿಕಾರಿಯ ವರ್ಗಾವಣೆಗೊಳಿಸಿದರೆ ಜನಾಕ್ರೋಶದ ಜೊತೆಗೆ ಮುಂದೆಲ್ಲಿ ಅವರು ಕಾನೂನು ಮೊರೆ ಹೋದರೆ ಸರ್ಕಾರದ ಮರ್ಯಾದೆ ಏನಾದೀತು ಎಂಬುದಾಗಿ ಸರ್ಕಾರ/ಮಂತ್ರಿಗಳ ಮಟ್ಟದಲ್ಲಿ ಇದು ಚರ್ಚೆಗೆ ಬಂತೆನ್ನಲಾಗಿದೆ. ಸಮುದಾಯದ ಮುಖಂಡರೊಬ್ಬರನ್ನು ಬೆಂಗಳೂರಿಗೆ ವಶೀಲಿಗೆ ಕಳುಹಿಸಿ, ವರ್ಗಾವಣೆಗೆ ಸಹಿ ಹಾಕಿಸುವ ಯತ್ನ ನಡೆಯುತ್ತಿದೆ. ಬೇರೊಬ್ಬ ಅಧಿಕಾರಿಗೆ ಈಗಾಗಲೇ ರಾಜಕೀಯ ವಲಯ "ರೆಡ್‌ ಕಾರ್ಪೆಟ್‌ " ಮಿನಟ್ಸ್‌ ನೀಡಿದೆ ಎಂಬ ಮಾತು ಪೊಲೀಸ್‌ ವಲಯದಲ್ಲಿ ಕೇಳಿ ಬರುತ್ತಿದೆ. ಅಧಿಕಾರ ಸ್ವೀಕರಿಸಿದ ಏಳೆಂಟು ತಿಂಗಳಲ್ಲೇ ಕಾನೂನುಬಾಹಿರ ಕೃತ್ಯಗಳಿಗೆ ಲಗಾಮು ಹಾಕಿ, ಖಾಕಿಪಡೆಯ ಪ್ರಾಮಾಣಿಕ ವಲಯ ಹಾಗೂ ಜನರಲ್ಲಿ ಹೊಸ ಆಶಾಭಾವ ಮೂಡಿಸಿದ ಅಧಿಕಾರಿಯ ವರ್ಗಾವಣೆಗೆ ಸರ್ಕಾರ ಮುಂದಾಗುತ್ತಿದೆ ಎಂಬ ಮಾತುಗಳು ಕೆಳಹಂತದ ಅಧಿಕಾರಿಗಳಿಗೆ ಸ್ಥೈರ್ಯ ಕುಗ್ಗಿಸಿದಂತಿದೆ.

-

2ವೈಡಿಆರ್‌10 : ಪ್ರಭಾಕರ್‌ ಪ್ರಿಯದರ್ಶಿ, ಐ.ಎಫ್‌.ಎಸ್‌., ಡಿಸಿಎಫ್‌.

2ವೈಡಿಆರ್‌11 : ಪೃಥ್ವಿಕ್ ಶಂಕರ್‌, ಐ.ಪಿ.ಎಸ್‌., ಎಸ್ಪಿ, ಯಾದಗಿರಿ.