ಐಗೂರಿನಲ್ಲಿ ನಡೆಯಲಿರುವ ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಅಚ್ಚುಕಟ್ಟಾಗಿ ಎಲ್ಲರೂ ನೆನಪಿಸಿಕೊಳ್ಳುವ ರೀತಿಯಲ್ಲಿ ನಡೆಸಬೇಕು. ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನು ಮಾಡಿಕೊಳ್ಳಿ ಎಂದು ಮಡಿಕೇರಿ ಶಾಸಕ ಹಾಗೂ ಸಮ್ಮೇಳನದ ಗೌರವಾಧ್ಯಕ್ಷರೂ ಆದ ಡಾ. ಮಂತರ್ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಐಗೂರಿನಲ್ಲಿ ನಡೆಯಲಿರುವ ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಅಚ್ಚುಕಟ್ಟಾಗಿ ಎಲ್ಲರೂ ನೆನಪಿಸಿಕೊಳ್ಳುವ ರೀತಿಯಲ್ಲಿ ನಡೆಸಬೇಕು. ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನು ಮಾಡಿಕೊಳ್ಳಿ ಎಂದು ಮಡಿಕೇರಿ ಶಾಸಕ ಹಾಗೂ ಸಮ್ಮೇಳನದ ಗೌರವಾಧ್ಯಕ್ಷರೂ ಆದ ಡಾ. ಮಂತರ್ ಗೌಡ ಹೇಳಿದರು.

ಐಗೂರಿನ ಸಹಕಾರ ಸಂಘದ ಸಭಾಂಗಣದಲ್ಲಿ ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಉಪ ಸಮಿತಿಗಳ ಸಮ್ಮೇಳನದ ತಯಾರಿ ಕುರಿತು ವಿವರಣೆ ಪಡೆದರು. ಹಣಕಾಸು ಸಮಿತಿ ಅಧ್ಯಕ್ಷ ಕೆ.ಪಿ. ರಾಯ್, ಆಹಾರ ಸಮಿತಿ ಅಧ್ಯಕ್ಷ ಮಚ್ಚಂಡ ಅಶೋಕ್, ಮೆರವಣಿಗೆ ಸಮಿತಿ ಅಧ್ಯಕ್ಷ ಡಿ.ಎಸ್. ಚಂಗಪ್ಪ, ವೇದಿಕೆ ತಯಾರಿ ಸಮಿತಿ ಅಧ್ಯಕ್ಷ ಸಿ.ಕೆ. ರೋಹಿತ್, ಅಲಂಕಾರ ಸಮಿತಿ ಅಧ್ಯಕ್ಷ ಕೆ.ಪಿ. ದಿನೇಶ್, ಸ್ಮರಣ ಸಂಚಿಕೆ ಸಂಪಾದಕ ಎಸ್.ಎಂ. ಚಂಗಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಸಮ್ಮೇಳನದ ಎಚ್.ಕೆ. ಉಮೇಶ್ ತಯಾರಿಗಳ ಕುರಿತು ಮಾಹಿತಿ ನೀಡಿದರು.

ಇದು ತಾಲೂಕು ಸಮ್ಮೇಳನವಾದರೂ ಐಗೂರು ಮತ್ತು ಸುತ್ತಮುತ್ತಲ ಹಳ್ಳಿಗಳ ಮನೆಯ ಉತ್ಸವವಾಗಬೇಕು. ಎಲ್ಲರೂ ಇದರಲ್ಲಿ ಪಾಲ್ಗೊಳ್ಳುವಂತಾಗಲು ಸಮಿತಿಯವರು ಎಲ್ಲ ಗ್ರಾಮಗಳಲ್ಲಿ ಸಭೆ ಸೇರಿ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಬೇಕು. ಅಲ್ಲದೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮತ್ತು ಗಡಿ ಭಾಗದಲ್ಲಿ ಪ್ರಚಾರದ ಬ್ಯಾನರ್ ಗಳನ್ನು ಅಳವಡಿಸಬೇಕು ಎಂದು ಶಾಸಕರು ಸೂಚಿಸಿದರು.

ಸಾಹಿತ್ಯ ಸಮ್ಮೇಳನದ ವಿವಿಧ ಉಪ ಸಮಿತಿಗಳಲ್ಲಿರುವ 200ಕ್ಕೂ ಹೆಚ್ಚು ಸದಸ್ಯರು ಸ್ವತಃ ಸಮ್ಮೇಳನಕ್ಕೆ ಹಣಕಾಸಿನ ಸಹಕಾರ ನೀಡಬೇಕು. ಕೊನೆಯ ಪಕ್ಷ ಪ್ರತಿಯೊಬ್ಬ ಸದಸ್ಯರು ತಮ್ಮ ಕೈಲಾಗುವ ಹಣ ನೀಡುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಹಣಕಾಸು ಸಮಿತಿ ಅಧ್ಯಕ್ಷ ಕೆ.ಪಿ. ರಾಯ್ ಮನವಿ ಮಾಡಿದರು.

ಮಧ್ಯಾಹ್ನ ಮತ್ತು ರಾತ್ರಿ ಸೇರಿ ಸುಮಾರು 6,000 ಜನರಿಗೆ ಊಟ, ಉಪಹಾರಗಳ ವ್ಯವಸ್ಥೆ ಮಾಡಲಿರುವುದಾಗಿ ಆಹಾರ ಸಮಿತಿ ಅಧ್ಯಕ್ಷ ಮಚ್ಚಂಡ ಅಶೋಕ್ ನುಡಿದರು.

ಮಡಿಕೇರಿ ಸೋಮವಾರಪೇಟೆ ರಸ್ತೆಯ ಸಂಪರ್ಕ ಸೇತುವೆಯಾಗಿದ್ದ ಕಬ್ಬಿಣದ ಸೇತುವೆಯನ್ನು ಬದಲಾಯಿಸುವ ಕೆಲಸ ನಡೆಯುತ್ತಿದ್ದು, ಮೆರವಣಿಗೆಯನ್ನು ಸಾಂಕೇತಿಕವಾಗಿ ಐಗೂರಿನಲ್ಲಿ ನಡೆಸಿ ನಂತರ ಕಾಜೂರು ಜಂಕ್ಷನ್ ನಿಂದ ಸಮ್ಮೇಳನ ನಡೆಯುವ ಸರಕಾರಿ ಪ್ರಾಥಮಿಕ ಶಾಲೆಯವರೆಗೆ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯನ್ನು ವಿವಿಧ ಕಲಾ ತಂಡಗಳು, ಡೊಳ್ಳು ಕುಣಿತ, ಕಳಸ ಹೊತ್ತ ಮಹಿಳೆಯರು, ಸ್ತ್ರೀಶಕ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು ಕನ್ನಡ ಅಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನೊಳಗೊಂಡ ಮೆರವಣಿಗೆ ಮೂಲಕ ಸಮ್ಮೇಳನದ ವೇದಿಕೆಗೆ ಕರೆದುಕೊಂಡು ಹೋಗಲಾಗುವುದು ಎಂದು ಮೆರವಣಿಗೆ ಸಮಿತಿ ಅಧ್ಯಕ್ಷ ಡಿ.ಎಸ್. ಚಂಗಪ್ಪ ಹೇಳಿದರು.

ಆಕರ್ಷಕ ವೇದಿಕೆ ಮತ್ತು 2,000 ಜನ ಕುಳಿತುಕೊಳ್ಳುವಂತಹ ಸಭಾಂಗಣವನ್ನುನಿರ್ಮಿಸಲಾಗುವುದು. ವೇದಿಕೆಯಲ್ಲಿ ಎಲ್ಇಡಿ ಪರದೆಯನ್ನು ಹಾಕಲಾಗುವುದು ಮತ್ತು ಸಮ್ಮೇಳನದಲ್ಲಿ ಪುಸ್ತಕ ಮಳಿಗೆ, ಜನಪದ ಪಾರಂಪರಿಕ ವಸ್ತುಗಳ ಮಳಿಗೆಗಳನ್ನು ರಚಿಸಲಾಗುವುದು ಎಂದು ಮೆರವಣಿಗೆ ಸಮಿತಿ ಅಧ್ಯಕ್ಷ ಸಿ.ಕೆ. ರೋಹಿತ್ ನುಡಿದರು.

ಸೋಮವಾರಪೇಟೆ ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗೆ ನಾಡಿಗೆ ಸೇವೆ ಸಲ್ಲಿಸಿ ಮರೆಯಾದ 9 ಹಿರಿಯರ ನೆನಪಿನ ದ್ವಾರಗಳನ್ನು ರಚಿಸಲಾಗುವುದು ಮತ್ತು ನಗರ ಅಲಂಕಾರ ಮತ್ತು ಮೆರವಣಿಗೆ ನಡೆಯುವ ಸ್ಥಳವನ್ನು ಸುಂದರವಾಗಿ ಸಜ್ಜುಗೊಳಿಸಲಾಗುವುದು ಎಂದು ಅಲಂಕಾರ ಸಮಿತಿ ಅಧ್ಯಕ್ಷ ಕೆ.ಪಿ. ದಿನೇಶ್ ನುಡಿದರು.

ಸ್ಮರಣ ಸಂಚಿಕೆ ಸಂಪಾದಕ ಎಸ್.ಎಂ. ಚಂಗಪ್ಪ ಅವರು ಮಾತನಾಡಿ, ಸ್ಮರಣ ಸಂಚಿಕೆಯಲ್ಲಿ ನಾಡಿನ ಹಿರಿಯರ, ಶಾಸಕರ ಸಂದೇಶಗಳನ್ನು ಅಳವಡಿಸಲಾಗುವುದು. ಸೋಮವಾರಪೇಟೆ ತಾಲೂಕಿನ ಐತಿಹ್ಯ ಮತ್ತು ಪ್ರವಾಸೋದ್ಯಮ ಸ್ಥಳಗಳ ಕುರಿತು ಲೇಖನಗಳನ್ನು ಮತ್ತು ಕಾರ್ಯಕ್ರಮದ ಫೋಟೋಗಳನ್ನು ಕೂಡ ಅಳವಡಿಸಲಾಗುವುದು ಎಂದರು.

ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಕೆ. ಉಮೇಶ್ ಸೋಮವಾರಪೇಟೆ ತಾಲೂಕಿನ ಎಲ್ಲ ಶಾಲೆ ಕಾಲೇಜುಗಳಿಗೆ ಮತ್ತು ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಆದರೆ ಐಗೂರು ಸುತ್ತು ಮುತ್ತಲ ಪ್ರದೇಶದ ವಿದ್ಯಾರ್ಥಿಗಳಿಗೆ ಮತ್ತು ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಐಗೂರು ಗ್ರಾಪಂ ಅಧ್ಯಕ್ಷ ಜಿ.ಕೆ. ವಿನೋದ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಆಗುತ್ತಿರುವ ಈ ಸಮ್ಮೇಳನ ನಮ್ಮೆಲ್ಲರ ಪ್ರತಿಷ್ಠೆಯಾಗಿದೆ. ಇದನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಪಂಚಾಯಿತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಮತ್ತು ಗ್ರಾಮಸ್ಥರು ಸಹ ತನು ಮನ ಧನ ಸಹಾಯ ನೀಡುವ ಮೂಲಕ ಸಮ್ಮೇಳನವನ್ನು ಯಶಸ್ವಿ ಮಾಡಿಕೊಡಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಸಮ್ಮೇಳನದ ಮಹಾ ಪೋಷಕ ಟಿ.ಪಿ. ರಮೇಶ್ ಮಾತನಾಡಿ, ಕಾರ್ಯಕ್ರಮ ನಡೆಯುವ ವೇದಿಕೆಗೆ ತಾಲೂಕಿನ ಹಿರಿಯ ಸಾಹಿತಿಯ ಹೆಸರನ್ನು ಇಡಬೇಕು. ನಂತರ ಸಭಾಂಗಣ, ಪುಸ್ತಕ ಮಳಿಗೆ, ಮಹಾದ್ವಾರಗಳಿಗೆ ಐಗೂರು ಸುತ್ತು ಮುತ್ತಲ ದಾನಿಗಳ, ಹಿರಿಯರ ಹೆಸರುಗಳನ್ನು ಇಡಬೇಕು. ಮೆರವಣಿಗೆ ಮತ್ತು ಊಟದ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಲೋಪ ಬರದಂತೆ ಮುಂಜಾಗ್ರತೆ ವಹಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕು ಎಂದು ವಿವಿಧ ಸಮಿತಿಗಳಲ್ಲಿ ಮನವಿ ಮಾಡಿದರು.

ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಹಾಗೂ ಸಮ್ಮೇಳನದ ಗೌರವಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಐಗೂರು ಸಾಹಿತ್ಯ ಸಮ್ಮೇಳನವು ಇಲ್ಲಿವರೆಗೆ ನಡೆದಂತಹ ಎಲ್ಲ ಸಮ್ಮೇಳನಗಳಿಗಿಂತಲೂ ಉತ್ತಮ ರೀತಿಯಲ್ಲಿ ನಡೆಯಬೇಕು. ಸಮ್ಮೇಳನದ ನೆನಪಿಗಾಗಿ ರಚಿಸುವ ಸ್ಮರಣ ಸಂಚಿಕೆಯಲ್ಲಿ ಇಲ್ಲಿ ರಚಿಸುವ 9 ದ್ವಾರಗಳಲ್ಲಿ ನೆನಪಿಸಿಕೊಳ್ಳುವ ಹಿರಿಯರ ಕುರಿತು ಲೇಖನಗಳನ್ನು ಅಳವಡಿಸಬೇಕು ಮತ್ತು ಸಮ್ಮೇಳನದಲ್ಲಿ ಸನ್ಮಾನಿಲಾಗುವ ಸಾಧಕರ ಪರಿಚಯವನ್ನು ಆ ಪುಸ್ತಕದಲ್ಲಿ ಅಳವಡಿಸುವ ಮೂಲಕ ಸಂಗ್ರಹ ಯೋಗ್ಯ ಕೃತಿಯನ್ನಾಗಿಸಬೇಕು ಎಂದರು.

ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷ ಎಸ್.ಡಿ. ವಿಜೇತ್, ಐಗೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸಮ್ಮೇಳನ ಸಮಿತಿ ಕಾರ್ಯದರ್ಶಿ ನಂಗಾರು ಕೀರ್ತಿ ಪ್ರಸಾದ್, ಮಾಜಿ ತಾಲೂಕು ಅಧ್ಯಕ್ಷ ಜೆ‌.ಸಿ. ಶೇಖರ್, ನಿಕಟಪೂರ್ವ ಅಧ್ಯಕ್ಷ ಜವರಪ್ಪ, ಗೌರವ ಕಾರ್ಯದರ್ಶಿ ವೀರರಾಜು ಉಪಸ್ಥಿತರಿದ್ದರು. ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್ ಸ್ವಾಗತಿಸಿದರು.