ನೂರಾರು ಕೋಟಿ ವ್ಯಯಿಸಿದರೂ ತಾಲೂಕಿನ 13 ಸಾವಿರ ಹೆಕ್ಟೇರ್ ರೈತರ ಜಮೀನಿಗೆ ನೀರು ಒದಗಿಸಬೇಕಾಗಿದ್ದ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ದುರದೃಷ್ಟವಶಾತ್ ರೈತರ ನೆರವಿಗೆ ಬರಲು ಸಾಧ್ಯವಾಗಿಲ್ಲ, ಅದೇ ಯೋಜನೆಯಡಿ ಇದೀಗ ಪೈಪಲೈನ್ ಮೂಲಕ ನೀರು ಕೊಡಲು ನಿರ್ಧರಿಸಿದ್ದು, ಟೆಂಡರ್ ಪ್ರಕ್ರಿಯೆ ಬಳಿಕ ಕಾಮಗಾರಿಗೆ ಚಾಲನೆ ನೀಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಬ್ಯಾಡಗಿ: ನೂರಾರು ಕೋಟಿ ವ್ಯಯಿಸಿದರೂ ತಾಲೂಕಿನ 13 ಸಾವಿರ ಹೆಕ್ಟೇರ್ ರೈತರ ಜಮೀನಿಗೆ ನೀರು ಒದಗಿಸಬೇಕಾಗಿದ್ದ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ದುರದೃಷ್ಟವಶಾತ್ ರೈತರ ನೆರವಿಗೆ ಬರಲು ಸಾಧ್ಯವಾಗಿಲ್ಲ, ಅದೇ ಯೋಜನೆಯಡಿ ಇದೀಗ ಪೈಪಲೈನ್ ಮೂಲಕ ನೀರು ಕೊಡಲು ನಿರ್ಧರಿಸಿದ್ದು, ಟೆಂಡರ್ ಪ್ರಕ್ರಿಯೆ ಬಳಿಕ ಕಾಮಗಾರಿಗೆ ಚಾಲನೆ ನೀಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ತಾಲೂಕಿನ ಹಿರೇಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಭೋಜನಾಲಯ, ಗ್ರಂಥಾಲಯ ನೂತನ ಕಟ್ಟಡ, ಘನತ್ಯಾಜ್ಯ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ನೀರಾವರಿ ಯೋಜನೆಗಳಿಲ್ಲದೇ ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ. ವರ್ಷಕ್ಕೆ ಎರಡೆರಡು ಬೆಳೆ ತೆಗೆಯಬೇಕಾಗಿದ್ದ ಕಡೆಗೆ ಮಳೆಯನ್ನಾಧರಿಸಿ ಒಂದೇ ಬೆಳೆಗೆ ಸೀಮಿತವಾಗಿದೆ. ರೈತರ ನೆರವಿಗೆ ಬಂದಿರುವ ರಾಜ್ಯ ಸರ್ಕಾರ ₹ 115 ಕೋಟಿ ವೆಚ್ಚದಲ್ಲಿ ಕಾಲುವೆ ಬದಲಾಗಿ ಪೈಪಲೈನ್ ಮೂಲಕ ನೀರು ಹರಿಸಲು ನಿರ್ಧರಿಸಿದ್ದು ಯೋಜನೆಯಡಿ ಕಾಮಗಾರಿಗೆ ₹ 50 ಕೋಟಿ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಹಂತಕ್ಕೆ ಬಂದಿದೆ ಎಂದರು.

ಹಿರೇಹಳ್ಳಿ ಗ್ರಾಮದ ಲಿಂ.ಗುಬ್ಬಿ ಅಜ್ಜಯ್ಯನವರ ಹೊಂಡದ ಅಭಿವೃದ್ಧಿಗೆ ಕಳೆದ 2013 ಶಾಸಕನಾಗಿದ್ದಾಗ ₹ 50 ಲಕ್ಷ ನೀಡಿದ್ದೆ, ಇದೀಗ ಮತ್ತೆ ₹ 70 ಲಕ್ಷ ಅನುದಾನ ಬಿಡುಗಡೆ ಮಾಡಿಸಿದ್ದೇನೆ, ಕಾಮಗಾರಿ ಪೂರ್ಣಗೊಳಿಸಲು ₹ 1 ಕೋಟಿ ಅಗತ್ಯವಿದ್ದು ಮಂಜೂರು ಮಾಡಿಸಲಾಗುವುದು, ಗ್ರಾಮದ ಗಜೇಶ್ವರ ದೇವಸ್ಥಾನದ ಗೋಪುರ ಮತ್ತು ಕಂಪೌಂಡ್ ನಿರ್ಮಿಸಲು ಕೂಡ ಶೀಘ್ರದಲ್ಲೇ ಅನುದಾನ ನೀಡುವುದಾಗಿ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡಿ, ತಾಲೂಕಿನ ಬಹುತೇಕ ಶಾಲೆಗಳಲ್ಲಿ ಕೊಠಡಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಬಿಸಲಹಳ್ಳಿ, ಕಾಕೋಳ, ಬ್ಯಾಡಗಿ ಸೇರಿದಂತೆ ಹಲವಡೆ ಕರ್ನಾಟಕ ಪಬ್ಲಿಕ ಶಾಲೆಗಳನ್ನು ಮಂಜೂರು ಮಾಡಿಸಿದ್ದು, ನರ್ಸರಿಯಿಂದ ಪಿಯುಸಿವರೆಗೂ ಕನ್ನಡ ಮತ್ತು ಇಂಗ್ಲೀಷ್ ಮಾದ್ಯಮಗಳಲ್ಲಿ ಶಿಕ್ಷಣ ಲಭ್ಯವಿದೆ ಎಂದರು.

ಈ ವೇಳೆ ಗ್ರಾ.ಪಂ.ಆದ್ಯಕ್ಷ ಶಿವನಗೌಡ ವೀರನಗೌಡ್ರ, ಸದಸ್ಯರಾದ ಮಲ್ಲನಗೌಡ ಚಿಕ್ಕಳ್ಳಿ, ಪುಟ್ಟವ್ವ ಲಕ್ಕಮ್ಮನವರ, ಶಾಂತವ್ವ ತೋಟದ, ದುರಗಮ್ಮ ಹರಿಜನ, ರೇಷ್ಮಾಭಾನು ರಾಣಿಬೆನ್ನೂರು, ಹಸನ್ ಪತ್ತೆಗೌಡ್ರ, ನೀಲಪ್ಪ ಹಿರೇಹಳ್ಳಿ, ರೇಣುಕಾ ಜಾಡರ, ಮಂಜುನಾಥ ಗೊಂದಿ, ಕೆಂಚವ್ವ ಮತ್ತೂರು, ಮಾರುತಿ ಅಚ್ಚಿಗೇರಿ, ವಸಂತ ಬೀರಣ್ಣನವರ, ಕೊಟ್ರಯ್ಯ ಹಿರೇಮಠ, ಬಿ.ಎಂ.ಗೌರಾಪುರ, ಎನ್.ಎಫ್‌. ಹರಿಜನ, ಗಣೇಶ ಚಿಕ್ಕಳ್ಳಿ, ಶಂಭಣ್ಣ ತಿಳವಳ್ಳಿ ಸೇರಿದಂತೆ ಇನ್ನಿತರರಿದ್ದರು.ಜಿಲ್ಲೆಗೆ ಮುಖ್ಯಮಂತ್ರಿಗಳು: ನಾಳೆ ಜ.7ರಂದು ಮೆಡಿಕಲ್‌ ಕಾಲೇಜು ಕಟ್ಟಡ ಹಾಗೂ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಶಾಸಕರು ಸೇರಿದಂತೆ ಮುಖಂಡರು ಹಾವೇರಿಗೆ ಆಗಮಿಸಲಿದ್ದು, ನೂತನ ಯೋಜನೆಗಳು ಜಿಲ್ಲೆಯ ಜನರಿಗೆ ಸಿಗಲಿವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.