ಕಾರವಾರ: ಆದಿಕವಿ ವಾಲ್ಮೀಕಿ ಮಹರ್ಷಿ ಅವರು ಬಡತನದಿಂದ ಜನಿಸಿದರೂ ಶಿಕ್ಷಣ ಮತ್ತು ಜ್ಞಾನದಿಂದ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಆದಿಕವಿ ಆಗುವ ಮೂಲಕ ಸಮಾಜಕ್ಕೆ ಸಂದೇಶ ಸಾರಿದ್ದಾರೆ. ಅವರ ಬದುಕು ಯುವಜನರಿಗೆ ಪ್ರೇರಣೆಯಾಗಿದ್ದು, ಅವರ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಹೇಳಿದರು.ಅವರು ಸೋಮವಾರ ದೈವಜ್ಞ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕಾರವಾರ ಇವರ ಆಶ್ರಯದಲ್ಲಿ ಆಯೋಜಿಸಲಾದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.ವಾಲ್ಮೀಕಿ ಅವರು ತಮ್ಮ ಬದುಕಿನ ಅನುಭವಗಳಿಂದ ಪರಿವರ್ತನೆ ಹೊಂದಿ, ತಪಸ್ಸು ಮತ್ತು ಜ್ಞಾನಾರ್ಜನೆಯ ಮೂಲಕ ಆದಿಕವಿಯಾಗಿ ರೂಪುಗೊಂಡರು. ತಾವು ಗಳಿಸಿದ ಜ್ಞಾನವನ್ನು ಸಮಾಜದ ಒಳಿತಿಗಾಗಿ ಧಾರೆ ಎರೆದರು ಎಂದರು.

ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ. ರಾಮಾಯಣವು ಕೇವಲ ಕಥೆಯಲ್ಲ. ಅದು ಸಮಾನತೆ, ನ್ಯಾಯ, ಪ್ರೀತಿ, ಮಾನವೀಯತೆ ಹಾಗೂ ಉತ್ತಮ ಆಡಳಿತದ ಮೌಲ್ಯಗಳನ್ನು ಸಾರುತ್ತದೆ. ಸಮಾಜ ಹೇಗಿರಬೇಕು, ಆಡಳಿತ ವ್ಯವಸ್ಥೆ ಜನಪರವಾಗಿರಲು ಅಗತ್ಯವಾದ ಮೌಲ್ಯಗಳನ್ನು ತಿಳಿಸುತ್ತದೆ ಎಂದರು.ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದ ಶಿವಾಜಿ ವಿದ್ಯಾಮಂದಿರದ ಮುಖ್ಯಾಧ್ಯಾಪಕ ಹಾಗೂ ಸಾಹಿತಿ ಡಾ. ಗಣೇಶ್ ಎಸ್. ಬಿಷ್ಟಣ್ಣನವರ, ಮಹರ್ಷಿ ವಾಲ್ಮೀಕಿಯ ಮೂಲ ಹೆಸರು ರತ್ನಾಕರ, ಉತ್ತಮ ಕುಟುಂಬದಲ್ಲಿ ಜನಿಸಿದ್ದ ಅವರು ಕಳ್ಳನೂ ಅಲ್ಲ ದರೋಡೆಕೋರನೂ ಅಲ್ಲ, ತನ್ನ ಉಡಾಫೆಯ ಗುಣಗಳಿಂದ ಸ್ನೇಹಿತರೊಂದಿಗೆ ಸೇರಿ ತಂಡ ಕಟ್ಟಿಕೊಂಡು ದಾರಿ ತಪ್ಪಿದ್ದರು. ನಾರದ ಮುನಿಗಳ ಮಾರ್ಗದರ್ಶನದಿಂದ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆಗೊಂಡರು ಎಂದರು.

ಸಂವಿಧಾನ ಪೀಠಿಕೆಯ ಪ್ರಮಾಣವಚನ ಸ್ವೀಕರಿಸಲಾಯಿತು. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ವೈ.ಕೆ. ಉಮೇಶ, ನಗರಸಭೆ ಪೌರಾಯುಕ್ತ ಜಗದೀಶ ಹುಲಗಜ್ಜಿ, ಡಿಡಿಪಿಐ ಲತಾ ನಾಯ್ಕ, ಪ.ಜಾತಿ ಮತ್ತು ಪಂಗಡಗಳ ವಿವಿಧ ಸಂಘಟನೆಗಳ ಮುಖಂಡರಾದ ದೀಪಕ್ ಕುಡಾಳಕರ, ನಾಗರಾಜ ತಳವಾರ, ಎಲಿಷಾ ಎಲಕಪಾಟಿ, ಕಿರಣ ನಾರಾಯಣ, ತುಳಸಿದಾಸ ಪಾವಸ್ಕರ್ ಮತ್ತಿತರರು ಇದ್ದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಿತು.