ಹಾವೇರಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎನಿಸಿರುವ ಮೆಡಿಕಲ್ ಕಾಲೇಜು ಕಟ್ಟಡ ಬುಧವಾರ ಲೋಕಾರ್ಪಣೆಗೊಳ್ಳಲಿದೆ. ಸಣ್ಣ ಪುಟ್ಟ ಅನಾರೋಗ್ಯದ ಸಂದರ್ಭದಲ್ಲೂ ಹುಬ್ಬಳ್ಳಿ, ದಾವಣಗೆರೆಗೆ ಹೋಗುತ್ತಿದ್ದ ಜಿಲ್ಲೆಯ ಜನರ ಅಲೆದಾಟ ಇನ್ನು ತಪ್ಪಲಿದೆ.
ಹಾವೇರಿ: ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎನಿಸಿರುವ ಮೆಡಿಕಲ್ ಕಾಲೇಜು ಕಟ್ಟಡ ಬುಧವಾರ ಲೋಕಾರ್ಪಣೆಗೊಳ್ಳಲಿದೆ. ಸಣ್ಣ ಪುಟ್ಟ ಅನಾರೋಗ್ಯದ ಸಂದರ್ಭದಲ್ಲೂ ಹುಬ್ಬಳ್ಳಿ, ದಾವಣಗೆರೆಗೆ ಹೋಗುತ್ತಿದ್ದ ಜಿಲ್ಲೆಯ ಜನರ ಅಲೆದಾಟ ಇನ್ನು ತಪ್ಪಲಿದೆ.
ಇಲ್ಲಿಯ ದೇವಗಿರಿ ಯಲ್ಲಾಪುರ ಬಳಿ ರಾಜ್ಯದಲ್ಲೇ ಮಾದರಿ ರೀತಿಯಲ್ಲಿ ಸುಮಾರು 500 ಕೋಟಿ ರು. ವೆಚ್ಚದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡ ನಿರ್ಮಾಣವಾಗಿದ್ದು, ಜ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆಗೊಳ್ಳುತ್ತಿದೆ. ಮೆಡಿಕಲ್ ಕಾಲೇಜು ಆರಂಭದಿಂದ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ನಿರೀಕ್ಷಿಸಲಾಗಿದೆ. ಪ್ರಥಮ ವರ್ಷದ ತರಗತಿಯಿಂದ 3ನೇ ವರ್ಷದ ತರಗತಿಗಳನ್ನು ಇದೇ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಎಲ್ಲ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ತರಗತಿ ಕೊಠಡಿಗಳು, ಲ್ಯಾಬ್, ವಸತಿ, ಲಾಂಡ್ರಿ, ಸಾರಿಗೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರುವ ಕಟ್ಟಡ ನಿರ್ಮಾಣವಾಗಿದೆ.ಇಂದು ಉದ್ಘಾಟನೆ: ಮೆಡಿಕಲ್ ಕಾಲೇಜು ಉದ್ಘಾಟನೆಗೆ ಈಗಾಗಲೇ ಸಿದ್ಧತೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸಂಪುಟದ ವಿವಿಧ ಸಚಿವರು, ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ, ಪ್ರಹ್ಲಾದ ಜೋಶಿ ಹಾಗೂ ಜಿಲ್ಲೆಯ ಸಂಸದ ಬಸವರಾಜ ಬೊಮ್ಮಾಯಿ, ಶಾಸಕರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಹಲವು ಸೌಲಭ್ಯ: ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸದ್ಯಕ್ಕೆ ವಾರ್ಷಿಕ 150 ರಂತೆ 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ತೃತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಶೇ.100 ರಷ್ಟಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. 150 ಇರುವ ಸೀಟನ್ನು 250ಕ್ಕೆ ಹೆಚ್ಚಿಸಿದರೂ ಮೂಲಸೌಲಭ್ಯದಲ್ಲಿ ಯಾವುದೇ ಕೊರತೆಯಾಗದ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪ್ರಸಕ್ತ ಸಾಲಿಗೆ 17 ಪಿಜಿ ಸೀಟುಗಳು ಕೂಡ ಮಂಜೂರಾಗಿದೆ. ನರ್ಸಿಂಗ್ ಕಾಲೇಜನ್ನು ಕೂಡ ಮೆಡಿಕಲ್ ಕಾಲೇಜು ಆವರಣದಲ್ಲೇ ಮಾಡಲಾಗಿದ್ದು, 40 ಬಿಎಸ್ಸಿ ನರ್ಸಿಂಗ್ ಹಾಗೂ 40 ಜಿಎನ್ಎಂ ನರ್ಸಿಂಗ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ಯಾರಾಮೆಡಿಕಲ್ ಮಂಡಳಿಯಡಿ 100 ಪ್ಯಾರಾಮೆಡಿಲ್ ಪ್ರವೇಶಾತಿ ಸೌಲಭ್ಯವಿದೆ. ಬರುವ ದಿನಗಳಲ್ಲಿ ಎಂಬಿಬಿಎಸ್ ಸೀಟುಗಳನ್ನು 200ಕ್ಕೆ, ನರ್ಸಿಂಗ್ ಸೀಟಗಳನ್ನು 80ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಮೆಡಿಕಲ್ ಕಾಲೇಜಿನಲ್ಲಿ ಅತ್ಯಾಧುನಿಕ ಸ್ಕಿಲ್ ಲ್ಯಾಬ್, ಪ್ರಿ-ಪ್ಯಾರಾ ಕ್ಲಿನಿಕಲ್ ವಿಭಾಗಗಳ ವಸ್ತು ಸಂಗ್ರಹಾಲಯಗಳು ಬೇರೆ ಕಾಲೇಜುಗಳಿಂದ ಭಿನ್ನವಾಗಿದ್ದು, ಇವು ಕೂಡ ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ. ಸಂಸ್ಥೆಯ ಆವರಣದಲ್ಲಿ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್(ಸಿಸಿಬಿ) ಆಸ್ಪತ್ರೆ ನಿರ್ಮಾಣವಾಗುತ್ತಿದೆ. ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲೇ ಪ್ರಥಮವಾಗಿ ಕನ್ನಡ ಭಾಷೆಯ ಅತ್ಯುತ್ತಮ ಪುಸ್ತಕಗಳ ಗ್ರಂಥಾಲಯ ಆರಂಭಿಸಲಾಗಿದೆ. ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಕಾಲೇಜಿನೊಂದಿಗೆ ಸಂಯೋಜನೆಗೊಂಡ ನಂತರ ರೋಗಿಗಳಿಗೆ ಉತ್ತಮ, ಆರೋಗ್ಯ ಸೇವೆ ಹಾಗೂ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ.
ಹಲವು ಕಾಮಗಾರಿ ಉದ್ಘಾಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ. ವೈದ್ಯಕೀಯ ಕಾಲೇಜ್ ಕಟ್ಟಡದ ಜತೆಗೆ ಅಂಗನವಾಡಿ ನೂತನ ಕಟ್ಟಡ, ಕರ್ಜಗಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನೂತನ ಶಾಲಾ ಕಟ್ಟಡ, ಕನವಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ, ಹಾವೇರಿಯ ಹೊಸ ಪ್ರವಾಸ ಮಂದಿರ, ನೆಲೋಗಲ್ ಹೊಸ ಪ್ರವಾಸ ಮಂದಿರ ಉದ್ಘಾಟನೆ ಹಾಗೂ ಹಾವೇರಿ ಬಾಲಕಿಯರ ಪ್ರಥಮ ದರ್ಜೆ ಮಹಾವಿದ್ಯಾಲಯ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಏಕಕಾಲಕ್ಕೆ ಆರಂಭವಾದ ರಾಜ್ಯದ ನಾಲ್ಕು ಮೆಡಿಕಲ್ ಕಾಲೇಜು ಕಟ್ಟಡಗಳ ಪೈಕಿ ಹಾವೇರಿ ಮೆಡಿಕಲ್ ಕಾಲೇಜು ಮಾದರಿ ರೀತಿಯಲ್ಲಿ ನಿರ್ಮಾಣವಾಗಿದೆ.ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 330 ಹಾಸಿಗೆಗಳಿಂದ 500 ಹಾಸಿಗೆಗೆ ಉನ್ನತೀಕರಿಸಲಾಗಿದೆ. ಆಸ್ಪತ್ರೆ ಉನ್ನತೀಕರಣ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 20 ಕೋಟಿ ರು. ವೆಚ್ಚ ಮಾಡಲಾಗಿದೆ. ಮೆಡಿಕಲ್ ಕಾಲೇಜು ಆರಂಭವಾದ ಮೇಲೆ ಜಿಲ್ಲಾಸ್ಪತ್ರೆಗೆ ಬರುವ ಒಳರೋಗಿಗಳು ಮತ್ತು ಹೊರರೋಗಿಗಳ ಸಂಖ್ಯೆಯಲ್ಲಿ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಹಾವೇರಿ ಜಿಲ್ಲೆಯ ಜನರಿಗೆ ಮೆಡಿಕಲ್ ಕಾಲೇಜಿನಲ್ಲಿ ಉತ್ಕೃಷ್ಟ ಮಟ್ಟದ ಆರೋಗ್ಯ ಸೇವೆ ಒದಗಲಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.