ಎಚ್ಚರಿಕೆ ಸ್ಥಿತಿಯಲ್ಲಿ ವಿಶ್ರಾಂತಿ ಪಡೆಯುವುದೇ ಧ್ಯಾನ

| Published : Dec 22 2024, 01:32 AM IST

ಸಾರಾಂಶ

ಧ್ಯಾನ ಎಂದರೆ ಕೇವಲ ಏಕಾಗ್ರತೆಯಲ್ಲ. ಎಚ್ಚರಿಕೆ ಸ್ಥಿತಿಯಲ್ಲಿ ವಿಶ್ರಾಂತಿ ಪಡೆಯುವುದೇ ಧ್ಯಾನ ಸ್ಥಿತಿ. ಇದರಿಂದ ಬಳಲಿದ ದೇಹ, ಮನಸ್ಸಿಗೆ, ತಂಪು, ನೆಮ್ಮದಿ ಶಾಂತಿ ನೀಡುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಶಿವಮೊಗ್ಗ ಜ್ಞಾನ ಕ್ಷೇತ್ರದ ಶ್ರೀ ಬ್ರಹ್ಮಪಾದ್ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಧ್ಯಾನ ಎಂದರೆ ಕೇವಲ ಏಕಾಗ್ರತೆಯಲ್ಲ. ಎಚ್ಚರಿಕೆ ಸ್ಥಿತಿಯಲ್ಲಿ ವಿಶ್ರಾಂತಿ ಪಡೆಯುವುದೇ ಧ್ಯಾನ ಸ್ಥಿತಿ. ಇದರಿಂದ ಬಳಲಿದ ದೇಹ, ಮನಸ್ಸಿಗೆ, ತಂಪು, ನೆಮ್ಮದಿ ಶಾಂತಿ ನೀಡುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಶಿವಮೊಗ್ಗ ಜ್ಞಾನ ಕ್ಷೇತ್ರದ ಶ್ರೀ ಬ್ರಹ್ಮಪಾದ್ ಸ್ವಾಮೀಜಿ ಹೇಳಿದರು.

ವಿಶ್ವಸಂಸ್ಥೆ ಧ್ಯಾನದ ಮಹತ್ವ ಅರಿತು ಅದನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಪ್ರತಿ ವರ್ಷ ಡಿ.21 ವಿಶ್ವ ಧ್ಯಾನ ದಿನಾಚರಣೆ ಆಚರಿಸಬೇಕೆಂದು ಘೋಷಿಸಿದ್ದು, ಈ ಹಿನ್ನಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿಯವರಿಗೆ ಸುದರ್ಶನ ಕ್ರಿಯೆ ಸಾಧನೆ ಸಿದ್ದಿಸಿದ ಸ್ಥಳವಾದ ಬಿಆರ್‌ಪಿ ಭದ್ರಾ ಜಲಾಶಯದ ಬಳಿ ಈಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಧ್ಯಾನ ದಿನಾಚರಣೆ ಸಮಾರಂಭದಲ್ಲಿ ಶ್ರೀಗಳು ಪಾಲ್ಗೊಂಡು ಮಾತನಾಡಿದರು.

ನಾವು ಪೂರ್ವ ತಯಾರಿ ಮಾಡಿಕೊಂಡು ಕ್ರಮ ಬದ್ದವಾಗಿ ಧ್ಯಾನ ಮಾಡಿದರೆ ಅದರಿಂದ ಹೆಚ್ಚಿನ ಪ್ರತಿಫಲ ದೊರೆಯುತ್ತದೆ. ಈ ಸ್ಥಳ ಇಂದು ಗುರೂಜಿಯವರ ಭಕ್ತರಿಗೆ ಅತ್ಯಂತ ಮಹತ್ವವಾದ ಸ್ಥಳವಾಗಿದೆ. ಕಾರಣ 42 ವರ್ಷಗಳ ಹಿಂದೆ ತಮ್ಮ 26ನೇ ವಯಸ್ಸಿನಲ್ಲಿ ಇದೇ ಸ್ಥಳದಲ್ಲಿ ಅವರಿಗೆ ಸುದರ್ಶನ ಕ್ರಿಯೆ ಸಾಧನೆ ಸಿದ್ದಿಸಿತ್ತು. ಅವರ ಸಾಧನೆ ಸಿದ್ದಿ ಇಂದು ವಿಶ್ವಕ್ಕೆ ಪರಿಚಯವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಜಿಲ್ಲಾ ಸಂಯೋಜನಾಧಿಕಾರಿ ಬಿ. ಮೂರ್ತಿ ಮಾತನಾಡಿ, ಇಂದು ವಿಶ್ವದಲ್ಲಿ ಶಾಂತಿಗೋಸ್ಕರ ಯುಧ್ಧಗಳು ನಡೆಯುತ್ತಿದೆ. ಇದಕ್ಕಾಗಿ ಕೋಟ್ಯಾಂತರ ರು. ವ್ಯಯಿಸಲಾಗುತ್ತಿದೆ. ಆದರೆ ಇದರಿಂದ ಶಾಂತಿ, ನೆಮ್ಮದಿ ಇಲ್ಲ. ಯಾವುದರಿಂದ ನಮಗೆ ಶಾಂತಿ, ನೆಮ್ಮದಿ ದೊರೆಯುತ್ತದೆಯೋ ಅದಕ್ಕೆ ಯಾವ ದೇಶ ಸಹ ಪ್ರೋತ್ಸಾಹ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನಮ್ಮಲ್ಲಿ ಶಾಂತಿ ಇದ್ದರೆ ಏನಾದರೂ ಸಾಧಿಸಲು ಸಾಧ್ಯ. ಇದಕ್ಕೆ ಧ್ಯಾನವೇ ಮೂಲವಾಗಿರುತ್ತದೆ. ಇದರಿಂದ ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಶಾಂತಿ ನೆಲೆಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದಕ್ಕೆ ಪ್ರಕೃತಿ ಸಹ ಸಹಕರಿಸುತ್ತದೆ. ಪ್ರತಿಯೊಬ್ಬರೂ ಪ್ರತಿ ದಿವಸ 15 ರಿಂದ 20 ನಿಮಿಷ ಧ್ಯಾನ ಮಾಡಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಯೋಗ ಶಿಕ್ಷಕಿ ಭಾಗ್ಯ ಮೂರ್ತಿ, ಪ್ರಾಣಾಯಾಮ, ಯೋಗ ಮತ್ತು ಧ್ಯಾನ ನಡೆಸಿಕೊಟ್ಟರು. ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಅಭಿವೃಧ್ಧಿ ಸದಸ್ಯರಾದ ಬಿಆರ್‌ಪಿ ನಾಗರಾಜ್, ಪ್ರಕಾಶ್, ಸಂದೀಪ್ ಹಾಗು ಇನ್ನಿತರ ಸೇವಾಕರ್ತರು ಪಾಲ್ಗೊಂಡಿದ್ದರು.