ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರೈತರ ಸಮಸ್ಯೆ ನಿವಾರಣೆ ಸಂಬಂಧ ರಾಜಿರಹಿತ ಹೋರಾಟ ಅಗತ್ಯವಿದೆ. ರೈತರಿಗೆ ಅನ್ಯಾಯವಾದರೆ ಸಿಡಿದೇಳುತ್ತಿದ್ದ ಎನ್.ಡಿ.ಸುಂದರೇಶ್ ಅವರನ್ನು ಅನುಸರಿಸುವುದು ಸೂಕ್ತ ಎಂದು ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹೇಳಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ರೈತನಾಯಕ ಎನ್.ಡಿ.ಸುಂದರೇಶ್‍ರವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ್, ಎಚ್.ಎಸ್.ರುದ್ರಪ್ಪನವರ ಸಮಕಾಲೀನರಾಗಿದ್ದ ಎನ್.ಡಿ.ಸುಂದರೇಶ್ ಸರಳ ವ್ಯಕ್ತಿತ್ವದವರು. ರೈತರ ಸಂಘಟನೆಗಾಗಿ ಹಳ್ಳಿ ಹಳ್ಳಿಗೆ ತಿರುಗುತ್ತಿದ್ದರು. ರೈತ ಬೆವರಿನಿಂದ ಕಟ್ಟಿದ ಕರ್ನಾಟಕ ರಾಜ್ಯ ರೈತ ಸಂಘ ಈಗ ಅನೇಕ ಬಣಗಳಾಗಿರುವುದು ನೋವಿನ ಸಂಗತಿ. ಸುಂದರೇಶ್‍ರವರ ಆಸೆಯಂತೆ ಎಲ್ಲರೂ ಒಂದಾಗಬೇಕು ಎಂದು ಮನವಿ ಮಾಡಿದರು.
ರೈತ ಮುಖಂಡ ಆರ್.ಬಿ.ನಿಜಲಿಂಗಪ್ಪ ಮಾತನಾಡಿ, ನರಗುಂದ-ನವಲಗುಂದದಲ್ಲಿ ತಹಸೀಲ್ದಾರ್ ಜೀಪಿಗೆ ಅಡ್ಡ ಮಲಗಿದ ರೈತರ ಮೇಲೆ ವಾಹನ ಹರಿದ ಪರಿಣಾಮ ಕೆಲವು ರೈತರು ಮೃತಪಟ್ಟಾಗ ಎನ್.ಡಿ.ಸುಂದರೇಶ್ ಅಲ್ಲಿ ಹೋರಾಟಕ್ಕೆ ಇಳಿದರು. ವಿಭಜನೆಯಾಗಿರುವ ರೈತ ಬಣಗಳೆಲ್ಲಾ ಒಂದಾಗಿ ಎನ್.ಡಿ.ಸುಂದರೇಶ್‍ರವರ ಹೋರಾಟದ ಹಾದಿಯಲ್ಲಿ ಸಾಗಬೇಕಿದೆ ಎಂದು ಹೇಳಿದರು.ಚಿಕ್ಕಬ್ಬಿಗೆರೆ ನಾಗರಾಜ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಮಾತನಾಡಿದರು. ಈ ವೇಳೆ ಮರ್ಲಹಳ್ಳಿ ರವಿಕುಮಾರ್, ನಾಗರಾಜ್ ಮುದ್ದಾಪುರ, ಎಂ.ಬಿ.ಪ್ರಶಾಂತ್‍ರೆಡ್ಡಿ, ಹೊನ್ನೂರು ಶ್ರೀನಿವಾಸ್, ಸಿದ್ದಬಸಣ್ಣ, ಎಂ.ಸಿ.ಚನ್ನಕೇಶವ, ಬಿ.ಸುರೇಶ್, ಅಜ್ಜಣ್ಣ, ಶಿವಣ್ಣ, ಅಂಬರೇಶ್, ಡಿ.ಟಿ.ಮಂಜಣ್ಣ ಹಿರೇಹಳ್ಳಿ, ಹಿರೇಹಳ್ಳಿ ತಿಪ್ಪೇಸ್ವಾಮಿ, ಕೆ.ಎಸ್.ಕೊಟ್ರಬಸಪ್ಪ, ಕೆ.ಎಂ.ಕಾಂತರಾಜು, ಎನ್.ತಿಪ್ಪೇಸ್ವಾಮಿ ಇದ್ದರು.