ಮೂಡುಬಿದಿರೆ: ಮೆಸ್ಕಾಂ ಜನಸಂಪರ್ಕ ಸಭೆ

| Published : Sep 07 2024, 01:37 AM IST

ಸಾರಾಂಶ

ಜಿಲ್ಲಾ ಗ್ರಾಹಕ ಒಕ್ಕೂಟದ ಕಾರ್ಯದರ್ಶಿ ರಾಯಿರಾಜ್ ಕುಮಾರ್, ಗ್ರಾಹಕ ಕಾನೂನುಗಳ ಕುರಿತು ಮಾಹಿತಿ ನೀಡಿದರು. ವಿದ್ಯುತ್ ಅದಾಲತ್‌ಗಳಲ್ಲಿ ದೂರು ಸಲ್ಲಿಸಿ ಪರಿಹಾರವಾಗದಿದ್ದರೆ ಒಂಬುಡ್ಸ್‌ಮೆನ್‌ಗೆ ದೂರು ನೀಡಬಹುದು ಎಂದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡುಬಿದಿರೆ ವ್ಯಾಪ್ತಿಯಲ್ಲಿ ಶೇ.೫೦ರಷ್ಟು ಹಳೆ ತಂತಿಗಳನ್ನು ತೆಗೆದು ಹೊಸ ತಂತಿಗಳನ್ನು ಅಳವಡಿಸಲಾಗಿದೆ. ಬಾಕಿ ಉಳಿದಿರುವುದನ್ನು ಹಂತಹಂತವಾಗಿ ಬದಲಾಯಿಸಲಾಗುವುದು. ಮೂಡುಬಿದಿರೆ ಮೆಸ್ಕಾಂ ಉಪವಿಭಾಗದ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಶಿರ್ತಾಡಿಯಲ್ಲಿ ಮೆಸ್ಕಾಂ ಉಪವಿಭಾಗವನ್ನು ತೆರೆಯಲಾಗುವುದು ಎಂದು ಮಂಗಳೂರು ವಿಭಾಗದ ಮೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೃಷ್ಣರಾಜ್ ಹೇಳಿದರು.

ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಮೆಸ್ಕಾಂ ಸಿಬ್ಬಂದಿ, ವಿದ್ಯುತ್ ತಂತಿಗಳಿಗೆ ಅಪಾಯಕಾರಿಯಾಗಿರುವ ಮರದ ಗೆಲ್ಲುಗಳನ್ನು ಕಡಿದು ಅಲ್ಲಿಯೇ ಎಸೆಯುವ ಬಗ್ಗೆ ದೂರುಗಳು ಬರುತ್ತಿದ್ದು, ಅವುಗಳನ್ನು ತೆರವುಗೊಳಿಸಲು ಸಿಬ್ಬಂದಿಗಳಿಗೆ ಸೂಚಿಸಲಾಗುವುದು ಎಂದ ಅವರು ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಸಾಮಾನ್ಯ ಸಮಸ್ಯೆಗಳಿಗೆ ಜನರು ದೂರು ನೀಡುವಂತಾಗಬಾರದು ಇದನ್ನು ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಮೆಸ್ಕಾಂ ಗ್ರಾಹಕರಿಗೆ ತ್ವರಿತ ಗತಿಯಲ್ಲಿ ಸೇವೆ ಸಲ್ಲಿಸಲು ಬದ್ಧವಾಗಿದ್ದರೂ ಕಂಬ ಅಳವಡಿಕೆ, ತಂತಿ ಎಳೆಯುವ ವೇಳೆ ಸಾರ್ವಜನಿಕರಿಂದ ಆಕ್ಷೇಪಗಳು ವ್ಯಕ್ತವಾಗುವುದರಿಂದ ಸಮಸ್ಯೆಯಾಗುತ್ತದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.ರಾಜೇಶ್ ಕಡಲಕೆರೆ, ಸಂತೋಷ್ ಶೆಟ್ಟಿ, ಆಲ್ವಿನ್ ಡಿಸೋಜ ಮತ್ತಿತರರು ಮೆಸ್ಕಾಂ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.ಜಿಲ್ಲಾ ಗ್ರಾಹಕ ಒಕ್ಕೂಟದ ಕಾರ್ಯದರ್ಶಿ ರಾಯಿರಾಜ್ ಕುಮಾರ್, ಗ್ರಾಹಕ ಕಾನೂನುಗಳ ಕುರಿತು ಮಾಹಿತಿ ನೀಡಿದರು. ವಿದ್ಯುತ್ ಅದಾಲತ್‌ಗಳಲ್ಲಿ ದೂರು ಸಲ್ಲಿಸಿ ಪರಿಹಾರವಾಗದಿದ್ದರೆ ಒಂಬುಡ್ಸ್‌ಮೆನ್‌ಗೆ ದೂರು ನೀಡಬಹುದು ಎಂದರು.ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ನಾಯಕ್, ಮೂಡುಬಿದಿರೆ ವಿಭಾಗದ ಮೆಸ್ಕಾಂ ಎಂಜಿನಿಯರ್ ಮೋಹನ್ ಉಪಸ್ಥಿತರಿದ್ದರು.