ಪೆರೇಸಂದ್ರ ಗ್ರಾಮದಲ್ಲಿನ ರಸ್ತೆ ವ್ಯವಸ್ಥೆ ಕಳೆದ 20 ವರ್ಷಗಳಿಂದ ಸಮರ್ಪಕವಾಗಿ ಅಭಿವೃದ್ಧಿಯಾಗಿರಲಿಲ್ಲ. ಈಗ ಹಂತ ಹಂತವಾಗಿ ಎಲ್ಲಾ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಪೇರೇಸಂದ್ರಕ್ಕೆ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವ ಯೋಜನೆಯಿದ್ದು, ಅದನ್ನು ರಾಷ್ಟ್ರೀಯ ಹೆದ್ದಾರಿಯ ಸಮೀಪ ನಿರ್ಮಿಸುವ ಆಲೋಚನೆಯಿದೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ಯೋಜನೆ ತರುವ ಕನಸು ನನ್ನದಾಗಿದ್ದು, ಅದಕ್ಕಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹಾಗೂ ಸಚವರೊಂದಿಗೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇನೆ. 2033ರ ವೇಳೆಗೆ ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ಬರುವ ವಿಶ್ವಾಸವಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿ ಸೋಮವಾರ 5 ಕೋಟಿ ರು.ಗಳ ವೆಚ್ಚದಲ್ಲಿ ಪೆರೇಸಂದ್ರ–ಗೌರಿಬಿದನೂರು ಸರಪಳಿ ರಸ್ತೆ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ನನ್ನ ಸ್ವಗ್ರಾಮ ಪೆರೇಸಂದ್ರ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಜನಸಂಖ್ಯೆಯೂ ಹೆಚ್ಚುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ಪೇರೇಸಂದ್ರವನ್ನು ತಾಲೂಕು ಕೇಂದ್ರವಾಗಿಸುವ ಗುರಿಯಿದೆ ಎಂದರು.
ಹಂತ ಹಂತವಾಗಿ ರಸ್ತೆ ಅಭಿವೃದ್ಧಿಪೆರೇಸಂದ್ರ ಗ್ರಾಮದಲ್ಲಿನ ರಸ್ತೆ ವ್ಯವಸ್ಥೆ ಕಳೆದ 20 ವರ್ಷಗಳಿಂದ ಸಮರ್ಪಕವಾಗಿ ಅಭಿವೃದ್ಧಿಯಾಗಿರಲಿಲ್ಲ. ಈಗ ಹಂತ ಹಂತವಾಗಿ ಎಲ್ಲಾ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಪೇರೇಸಂದ್ರಕ್ಕೆ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವ ಯೋಜನೆಯಿದ್ದು, ಅದನ್ನು ರಾಷ್ಟ್ರೀಯ ಹೆದ್ದಾರಿಯ ಸಮೀಪ ನಿರ್ಮಿಸುವ ಆಲೋಚನೆಯಿದೆ. ಹೆದ್ದಾರಿ ಅಗಲೀಕರನದ ನಂತರ ಹೈಟೆಕ್ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಪೇರೇಸಂದ್ರ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಅನೇಕ ರಸ್ತೆಗಳ ದುರಸ್ತಿಗೆ ಪಣ ತೊಟ್ಟಿದ್ದು, ಈಗಾಗಲೇ ಹಲವು ರಸ್ತೆ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ.ನನ್ನ ವಿರುದ್ಧ ರಾಜಕೀಯ ಮಾಡಿರುವ ಗ್ರಾಮಗಳಲ್ಲಿಯೂ ರಸ್ತೆಗಳನ್ನು ಸರಿಪಡಿಸಿದ್ದೇನೆ. ನನ್ನ ಶಕ್ತಿಮೀರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದರು.ಪರಿಶಿಷ್ಟರಿಗೆ ಸ್ಮಶಾನ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯದ ಜನರಿಗೆ ಸ್ಮಶಾನಕ್ಕೆ ಜಾಗದ ಕೊರತೆ ಇಪ್ಪತ್ತು ವರ್ಷಗಳಿಂದ ಇತ್ತು. ಪಂಚಾಯಿತಿಯಲ್ಲಿ ವಿರೋಧ ಪಕ್ಷ ಇದ್ದರೂ ಸಹ ಈ ಸಮುದಾಯಕ್ಕೆ ಸ್ಮಶಾನ ಜಾಗವನ್ನು ಮಂಜೂರು ಮಾಡಿಸಿದ್ದೇನೆ. ಗುಂಡ್ಲು ಮಂಡಿಕಲ್‌ನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯದ 40 ಮನೆಗಳಿಗೆ ಶೌಚಾಲಯಗಳಿಲ್ಲದಿದ್ದುದನ್ನು ಸರಿಪಡಿಸಿದ್ದು,ಶೀಘ್ರದಲ್ಲೇ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ಮುಷ್ಟೂರು ರಸ್ತೆ ಕಾಮಗಾರಿ ಕಳೆದ ಹತ್ತು ವರ್ಷಗಳಿಂದ ಸ್ಥಗಿತವಾಗಿತ್ತು. ಈಗ ₹10 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಕಂದವಾರ ರಸ್ತೆ ಅಭಿವೃದ್ಧಿಗೆ ₹8 ಕೋಟಿ ಮಂಜೂರು ಮಾಡಲಾಗಿದೆ. ಆದರೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ವಿಳಂಬವಾಗಿದೆ ಎಂದರು.ಎಂಆರ್‌ಐ, ಸಿಟಿ ಸ್ಕ್ಯಾನ್ ಸೌಲಭ್ಯ
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ಆಧುನಿಕ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಹೈಟೆಕ್ ಲ್ಯಾಬ್ ಸಹ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ. ಜಾತಿಗಳು ಬೇರೆ ಇರಬಹುದು, ಆದರೆ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಬೇಕು.ಈ ತತ್ವವನ್ನು ನಾನು ಸದಾ ಅನುಸರಿಸಿದ್ದೇನೆ. ಆದರೆ ಬಿಜೆಪಿ ನಾಯಕರು ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಬೀಜನಿಗಮದ ಅಧ್ಯಕ್ಷ ಎಂ.ಆಂಜಿನಪ್ಪ, ಮಾಜಿ ಶಾಸಕ ಶಿವಾನಂದ್, ಅನುಸೂಯಮ್ಮ,ನಗರಸಭೆ ಮಾಜಿ ಸದಸ್ಯ ಎಸ್.ಎಂ. ರಫೀಕ್,ಮಂಡಿಕಲ್–ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ರೆಡ್ಡಿ, ಟಿಎಪಿಸಿಎಂಎಸ್ ನಿರ್ದೇಶಕ ಬಿಸೇಗಾರಹಳ್ಳಿ ನಾಗೇಶ್ ರೆಡ್ಡಿ,ಜಿ.ಪಂ ಮಾಜಿ ಅಧ್ಯಕ್ಷ ಪುರಡಗಡ್ಡೆ ಮುನೇಗೌಡ, ಜಿಪಂ ಮಾಜಿ ಸದಸ್ಯ ಕೆ.ಎಂ.ಮುನೇಗೌಡ ಮತ್ತಿತರರು ಇದ್ದರು.