ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಕ್ಯಾತನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಊಟ ತಯಾರಕರ ಅಶುಚಿತ್ವ, ಶಿಕ್ಷಕರ ಮೇಲೆ ಹಲ್ಲೆ, ಹಾಗೂ ವಿದ್ಯಾರ್ಥಿಗಳಿಗೆ ಬೆದರಿಕೆಯ ಮಾತುಗಳನ್ನು ಖಂಡಿಸಿ, ೨೩ ವಿದ್ಯಾರ್ಥಿಗಳು ಶಾಲೆಗೆ ತೆರಳದೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಇದೇ ರೀತಿ ಗಲಾಟೆ ಮತ್ತು ತಾರತಮ್ಯ ನಡೆದರೆ ವಿದ್ಯಾರ್ಥಿಗಳ ಕೊರತೆಯಿಂದ ಶತಮಾನ ಕಂಡ ಶಾಲೆಯನ್ನು ಮುಚ್ಚಬೇಕಾದೀತು ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಹಳ್ಳಿಮೈಸೂರು ಹೋಬಳಿ ಕ್ಯಾತನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಹಾಗೂ ಬಿಸಿಊಟ ತಯಾರಕರ ನಡುವೆ ಗಲಾಟೆ ನಡೆದು ಬಿಸಿಊಟ ತಯಾರಕರು ಶಿಕ್ಷಕರ ಮೇಲೆ ಹಲ್ಲೆ ನಡೆಸಿ, ಪ್ರಕರಣ ದಾಖಲಾಗಿದೆ. ಶಿಕ್ಷಕರು ಹಾಗೂ ಬಿಸಿಊಟ ತಯಾರಕರ ನಡುವೆ ಸಮನ್ವಯ ಕೊರತೆಯಿಂದ ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತಿನಂತೆ ಬಿಸಿಊಟ ತಯಾರಕರು ತರಕಾರಿ, ಅಕ್ಕಿ, ಬೇಳೆಯನ್ನು ಸ್ವಚ್ಛಗೊಳಿಸದೇ ಹುಳು, ಕಲ್ಲು, ತಲೆ ಕೂದಲುಗಳಿಂದ ಕೂಡಿದ ಶುಚಿ ಇಲ್ಲದ ಅಡುಗೆಯನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದರು ಎಂಬ ದೂರು ಕೇಳಿ ಬಂದಿದೆ.
ಮುಖ್ಯ ಶಿಕ್ಷಕ ಕುಮಾರ್ ಮಾತನಾಡಿ, ಅಡುಗೆ ತಯಾರಕರ ಅಸಹಕಾರ, ಶಿಕ್ಷಕರ ಮೇಲೆ ಹಲ್ಲೆ ಕುರಿತು ಬಿಇಒಗೆ ತಿಳಿಸಿದ್ದೇವೆ ಮತ್ತು ಶಾಲೆಯಲ್ಲಿ ನಿರ್ಣಯ ಕೈಗೊಂಡು ಜೂನ್ ೧೨ ರಂದು ಗ್ರಾಮ ಪಂಚಾಯಿತಿಗೆ ಸಮಸ್ಯೆ ಕುರಿತು ವಿವರಿಸಿ, ಬೇರೆ ಅಡುಗೆಯವರನ್ನು ನೇಮಿಸುವಂತೆ ಕೋರಿದ್ದೆವು. ಆದರೆ ನಿನ್ನೆ ಬಿಇಒ ಉಪಸ್ಥಿತಿಯಲ್ಲಿ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಅಡುಗೆಯವರನ್ನು ಮುಂದುವರಿಸಲು ತೀರ್ಮಾನಿಸಿ ತೆರಳಿದ್ದಾರೆ ಎಂದರು. ಶಾಲೆಗೆ ವಿದ್ಯಾರ್ಥಿಗಳ ಗೈರು ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿ, ಶಿಕ್ಷಕರಿಗೆ ಗೌರವ ನೀಡದೇ, ಹೊಡೆಯುವ ಅಡುಗೆಯವರು ನಮ್ಮ ಮಕ್ಕಳಿಗೆ ನೀಡುವ ಆಹಾರದಲ್ಲಿ ಗುಣಮಟ್ಟವಿರಲು ಹೇಗೆ ಸಾಧ್ಯ, ನಿಮಗೇ ಭದ್ರತೆಯಿಲ್ಲದ ಶಾಲೆಯಲ್ಲಿ ಮಕ್ಕಳಿಗೆ ರಕ್ಷಣೆ ಹೇಗೆ ಸಾಧ್ಯ, ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಪೋಷಕರು ತಿಳಿಸಿರುವುದಾಗಿ ಮುಖ್ಯ ಶಿಕ್ಷಕರು ಬೇಸರದಿಂದ ನುಡಿದರು.ಶತಮಾನ ಕಂಡಿರುವ ನಮ್ಮೂರ ಶಾಲೆಯ ಸಮಸ್ಯೆಯ ನಿಮಾರಣೆಯಲ್ಲಿ ತಾಲೂಕು ಆಡಳಿತ ಅಗತ್ಯ ಕ್ರಮಕೈಗೊಂಡು ಶಾಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ಗ್ರಾಮದ ಯೋಗೇಶ್ ವಿನಂತಿಸಿದ್ದಾರೆ.