ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಗೈರುಹಾಜರಿ ತಡೆಯಲು ಮತ್ತು ಪೌಷ್ಟಿಕಾಂಶ ಹೆಚ್ಚಿಸಲು ಆರಂಭಿಸಲಾದ ಅಕ್ಷರ ದಾಸೋಹ (ಬಿಸಿಯೂಟ) 0ೋಜನೆಗೆ 25 ವರ್ಷಗಳು ತುಂಬಿವೆ. ಆದರೆ ನೌಕರರ ಸ್ಥಿತಿ ಮಾತ್ರ ಇಂದಿಗೂ ಶೋಚನೀಯವಾಗಿದೆ ಎಂದು ಬಿಸಿಯೂಟ ನೌಕರರು ಆಕ್ರೋಶ ವ್ಯಕ್ತಪಡಿಸಿದರು.ಶುಕ್ರವಾರ ನವನಗರದ ಜಿಲ್ಲಾಡಳಿತ ಭವನ ಎದುರು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಪತ್ರ ಸಲ್ಲಿಸಿದರು. ಜುಲೈ 10ರ ಬಿಸಿಯೂಟ ನೌಕರರ ಕರಾಳ ದಿನಾಚರಣೆ ಅಂಗವಾಗಿ ಇಂದು ಒಂದು ದಿನದ ಮುಷ್ಕರ ಹಮ್ಮಿಕೊಳ್ಳಲಾಗಿತ್ತು. 2008ರಿಂದಲೂ ಕೇಂದ್ರ ಸರ್ಕಾರ ಈ ಬಡ ಮಹಿಳೆಯರಿಗೆ ಸೂಕ್ತ ವೇತನ ಹೆಚ್ಚಳ ಮಾಡದೆ ಶೋಷಣೆ ಮಾಡುತ್ತಿದೆ ಹಾಗೂ ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟ ಯೋಜನೆಯನ್ನು ಹಸ್ತಾಂತರಿಸುವ ಮೂಲಕ ಯೋಜನೆಯನ್ನು ಬಲಹೀನಗೊಳಿಸಲಾಗುತ್ತಿದೆ ಎಂದು ನೌಕರರು ಆರೋಪಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ ತಕ್ಷಣವೇ ಬಿಸಿ0ುೂಟ ಕಾರ್ಯಕರ್ತೆಯರ ವೇತನವನ್ನು ₹ 7,000 ಕ್ಕೆ ಹೆಚ್ಚಿಸಬೇಕು ಮತ್ತು ತಮ್ಮ ಹಕ್ಕುಗಳ ಉಳಿವಿಗಾಗಿ ದೇಶಾದ್ಯಂತ ಹಮ್ಮಿಕೊಂಡಿರುವ ಈ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.ಬೇಡಿಕೆಗಳೇನು..?ಪ್ರಸ್ತುತ ಕೆಲಸ ಮಾಡುತ್ತಿರುವ 6 ಗಂಟೆಗಳ ಕೆಲಸದ ಅವಧಿಯ ಸುತ್ತೋಲೆಯನ್ನು ಅಧಿಕೃತವಾಗಿ ಹೊರಡಿಸಬೇಕು. ನೌಕರರೆಲ್ಲರಿಗೂ ಕಡ್ಡಾಯವಾಗಿ ಆರೋಗ್ಯ ವಿಮೆ ಜಾರಿಗೊಳಿಸಬೇಕು. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಪಿ.ಡಿ.ಒ ಗೆ ವರ್ಗಾವಣೆ ಮಾಡಿರುವುದನ್ನು ವಾಪಸ್ ಪಡೆದು, ಮೊದಲಿನಂತೆಯೇ ಮುಂದುವರಿಸಬೇಕು. ಕೆಪಿಎಸ್ ಶಾಲೆ, ಇಸ್ಕಾನ್, ಮಠ ಹಾಗೂ ಇನ್ನಿತರ ಸಂಸ್ಥೆಗಳಿಂದಾಗಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಮತ್ತು ಅಕ್ಷರ ದಾಸೋಹ ಯೋಜನೆಗೆ ಅನುದಾನ ಹೆಚ್ಚಿಸಬೇಕು. ನಿವೃತ್ತಿ ಹೊಂದಿದ ನೌಕರರಿಗೆ ಮಾಸಿಕ ₹ 10 ಸಾವಿರ ಪಿಂಚಣಿ ನೀಡಬೇಕು. ಎಲ್ಲಾ ಜಿಲ್ಲೆಗಳಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ತಕ್ಷಣವೇ ಇಡಿಗಂಟು ಹಣ ಬಿಡುಗಡೆ ಮಾಡಬೇಕು. ಅಡುಗೆ ಕೇಂದ್ರಗಳು ಸುಸಜ್ಜಿತವಾಗಿಲ್ಲದ ಕಡೆ ಉತ್ತಮ ಕೇಂದ್ರಗಳನ್ನು ನಿರ್ಮಿಸಬೇಕು ಹಾಗೂ ಕೀಟ ಬಾಧೆಯಿಲ್ಲದಂತೆ ಸೂಕ್ತ ವಾತಾವರಣ ನಿರ್ಮಿಸಬೇಕು. ಉತ್ತರ ಪ್ರದೇಶ ಮತ್ತು ಪಂಜಾಬ್ ಹೈಕೋರ್ಟ್‌ ತೀರ್ಪಿನಂತೆ ವರ್ಷದ 12 ತಿಂಗಳೂ ಕೆಲಸ ಮತ್ತು ಕನಿಷ್ಠ ಕೂಲಿ ಜಾರಿ ಮಾಡಬೇಕು ಎಂದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿ ಆಗ್ರಹಿಸಿದರು.ಧರಣಿಯಲ್ಲಿ ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿದ್ದಮ್ಮ ಕಲಗುಡಿ, ತೀರ್ಥ, ಕಸ್ತೂರಿ ಗೋನೂಜಿ, ಸುನಂದಾ ಮೋಪಗಾರ, ರೇಖಾ ಮ್ಯಾಗೇರಿ, ಜ್ಯೋತಿ ಖಾತೆ, ಶೈಲಾ ಅಂಗಡಿ ಅನೇಕರು ಭಾಗವಹಿಸಿದ್ದರು.