ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತೇರದಾಳ ಮತಕ್ಷೇತ್ರದಲ್ಲಿ ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ ಅಂಗವಾಗಿ ಇದುವರೆಗೆ ಶೇ.೮೮.೮೮ ರಷ್ಟು ಅಂದರೆ ೨೦೧೧೦೦ ಎನ್ಯುಮರೇಷನ್‌ ಅರ್ಜಿಗಳನ್ನು ಮನೆ ಮನೆಗೆ ವಿತರಣೆ ಮಾಡಲಾಗಿದೆ. ಇದುವರೆಗೆ ೧೧,೪೯೧ ಅಂದರೆ ಶೇ.೪.೮೨ ಡಿಜಿಟೈಸ್ ಕಾರ್ಯ ನಡೆದಿದೆ. ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಗೆ ರಾಜಕೀಯ ಪಕ್ಷಗಳ, ಸಾರ್ವಜನಿಕರ ಮತ್ತು ಬಿಎಲ್‌ಓಗಳ ಸಹಕಾರ ಮುಖ್ಯವಾಗಿದೆ ಎಂದು ರಬಕವಿ ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ ತಿಳಿಸಿದರು.

ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದರು. ತೇರದಾಳ ಕ್ಷೇತ್ರದಲ್ಲಿ ೨,೩೮,೪೦೫ ಹೆಸರುಗಳು ಮತದಾರ ಪಟ್ಟಿಯಲ್ಲಿದ್ದು, ಕ್ಷೇತ್ರದಲ್ಲಿ ೨೩೬ ಮತಗಟ್ಟೆಗಳಿದ್ದು, ಈಗಾಗಲೇ ಶೇ.೯೮ ರಷ್ಟು ಮ್ಯಾಪಿಂಗ್ ಕಾರ್ಯವನ್ನು ಮಾಡಲಾಗಿದೆ. ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಗಾಗಿ ತೇರದಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ರಬಕವಿ- ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ರಬಕವಿ ಬನಹಟ್ಟಿ ನಗರಸಭೆಯ ಕಚೇರಿಯಲ್ಲಿ, ರಾಂಪುರದ ಶ್ರೀರಾಮ ಮಂದಿರದ ಹತ್ತಿರ, ಹೊಸೂರಿನ ದರ್ಗಾ ಹತ್ತಿರ ಮತ್ತು ಬನಹಟ್ಟಿ ಗಾಂಧಿ ಚೌಕ ಬಳಿ, ಮಹಾಲಿಂಗಪುರದಲ್ಲಿ ಮಹಾಲಿಂಗಪುರ ಪುರಸಭೆ ಕಚೇರಿ, ಚಾವಡಿ ಮತ್ತು ಕೆಇಬಿ ಹತ್ತಿರ, ಅದರಂತೆ ತೇರದಾಳ ಪುರಸಭೆ ಕಚೇರಿ ಮತ್ತು ಚಾವಡಿ ಪ್ರದೇಶದಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅದೇ ರೀತಿಯಾಗಿ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ.ಅರ್ಜಿಗಳನ್ನು ಫಾರ್ಮ್‌ಗಳನ್ನು ತುಂಬುವಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ಈ ಸಹಾಯವಾಣಿ ಕೇಂದ್ರಗಳಿಗೆ ತೆರಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮತದಾರರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರಾಜಕೀಯ ಪಕ್ಷಗಳ ಮುಖಂಡರು ಕೂಡ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಮತದಾರರಲ್ಲಿ ಜಾಗೃತಿಯನ್ನು ಮೂಡಿಸಬೇಕು. ೧೮ ವರ್ಷ ಪೂರ್ಣಗೊಳಿಸಿದವರ ಅರ್ಹ ನಾಗರಿಕರನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದು, ನಕಲು, ಸ್ಥಳಾಂತರಗೊಂಡ, ಮೃತ ಹಾಗೂ ಅನರ್ಹರನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ್ ಗಿರೀಶ ಸ್ವಾದಿ ತಿಳಿಸಿದರು.ಸಭೆಯಲ್ಲಿ ಸುರೇಶ ಅಕ್ಕಿವಾಟ, ಶ್ರೀಶೈಲ ಬೀಳಗಿ, ವೆಂಕನಗೌಡ ಪಾಟೀಲ, ಅರ್ಜುನ ಹಲಗಿಗೌಡರ, ಎಂ.ಎಸ್.ಕಂಕಣವಾಡಿ, ಎಸ್.ಆರ್.ಹಳಿಂಗಳಿ, ನಿಜಾಮುದ್ದೀನ ಜಮಾದಾರ, ಪರಶುರಾಮ ಕಗ್ಗೋಡ ಸೇರಿದಂತೆ ಅನೇಕರು ಇದ್ದರು.