ಈ ಅವಕಾಶ ಬೇಸಿಗೆಯ ಆರಂಭದ ಮೂರು ತಿಂಗಳಿಗೆ ಮಾತ್ರ ನೀಡಿದ್ದು, ಮೂರು ತಿಂಗಳ ನಂತರ ಹಾಲು ಉತ್ಪಾದನೆ ನೋಡಿಕೊಂಡು ದರ ಹೆಚ್ಚಳದ ಬಗ್ಗೆ ಪರಿಶೀಲನೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜನವರಿ ಒಂದರಿಂದಲೇ ಒಂದು ಲೀಟರ್ ಹಾಲಿಗೆ ಒಂದು ರು. ಹೆಚ್ಚಿಸಿ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರಿಗೆ ಹೊಸ ವರ್ಷಕ್ಕೆ ಹೊಸ ಕೊಡುಗೆಯನ್ನುಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಿಮೂಲ್) ನೀಡಿದೆ ಎಂದು ಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಸಿ.ಶ್ರೀನಿವಾಸಗೌಡ ತಿಳಿಸಿದರು.

ನಗರ ಹೊರವಲಯದ ನಂದಿ ಕ್ರಾಸ್ ಬಳಿಯ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಅವಕಾಶ ಬೇಸಿಗೆಯ ಆರಂಭದ ಮೂರು ತಿಂಗಳಿಗೆ ಮಾತ್ರ ನೀಡಿದ್ದು, ಮೂರು ತಿಂಗಳ ನಂತರ ಹಾಲು ಉತ್ಪಾದನೆ ನೋಡಿಕೊಂಡು ದರ ಹೆಚ್ಚಳದ ಬಗ್ಗೆ ಪರಿಶೀಲನೆ ಮಾಡಲಾಗುವುದು. ಇದು ರಾಜ್ಯದಲ್ಲಿಯೇ 2026 ನೇ ಸಾಲಿನಲ್ಲಿ ಪ್ರಥಮವಾಗಿ ಬೆಲೆ ಏರಿಕೆ ಮಾಡಿದ ಕೀರ್ತಿ ನಮ್ಮ ಒಕ್ಕೂಟಕ್ಕೆ ಸಲ್ಲುತ್ತದೆ ಎಂದರು.

ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ಒಂದೂ ವರೆ ವರ್ಷದ ಹಿಂದೆ ಬೆರ್ಪಟ್ಟು 3.90 ಲಕ್ಷ ಲೀಟರ್ ಹಾಲು ಶೇಖರಣೆಯಿಂದ ಕಾರ್ಯರಂಭಗೊಂಡ ಒಕ್ಕೂಟ ಈಗ 5.0 ಲಕ್ಷ ಲೀಟರ್ ಹಾಲು ಪ್ರತಿದಿನ ಶೇಖರಣೆ ಮಾಡುತ್ತಿದೆ. ಈಗ ಚಳಿಗಾಳ ಪ್ರಾರಂಭವಾಗಿರುವುದರಿಂದ ಹಾಲು ಉತ್ಪಾದನೆ ಕಡಿಮೆ ಇದೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ಉತ್ಪಾದಕರ ಕಷ್ಟಕ್ಕೆ ಸ್ಪಂದಿಸಿ ಜಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಮತ್ತು ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ನೇತೃತ್ದಲ್ಲಿ ಸಮಾಲೋಚಿಸಿ ಒಕ್ಕೂಟ ಈ ತೀರ್ಮಾನ ತೆಗೆದುಕೊಂಡಿದೆ. ಇದು ರಾಜ್ಯದ 16 ಒಕ್ಕೂಟಗಳಲ್ಲೆ ಮೊದಲಾಗಿದೆ. ಪ್ರತಿ ಲೀ. ಹಾಲಿಗೆ 1 ರು. ದರ ಹೆಚ್ಚಳದಿಂದ 3 ತಿಂಗಳಿಗೆ 4.50 ಕೋಟಿ ರು. ಆರ್ಥಿಕ ಹೊರೆ ಆಗಲಿದೆ. ಜಿಲ್ಲೆಯ 40 ಸಾವಿರ ರೈತರಿಗೆ ಇದರ ಲಾಭ ಸಿಗಲಿದೆ ಎಂದು ತಿಳಿಸಿದರು.

ಚಿಮುಲ್‌ನಲ್ಲಿ ಈಗ ಸದ್ಯ ಹಾಲು ಮತ್ತು ಮೊಸರು ಪ್ಯಾಕಿಂಗ್ ಘಟಕ ಇಲ್ಲದಿರುವುದರಿಂದ ಕೋಲಾರ ಬೆಂಗಳೂರು ಡೇರಿಗಳಿಂದ ಸರಬರಾಜು ಮಾಡಿಕೊಳ್ಳುತ್ತಿರುವುದರಿಂದ 2.5 ಕೋಟಿ ವೆಚ್ಚವಾಗುತ್ತಿದ್ದು, ಘನ ಸರ್ಕಾರ ಲೋಕಲ್ ಸೆಲ್ ಘಟಕ ಸ್ಥಾಪನೆಗಾಗಿ 9.15 ಎಕರೆ ಜಮೀನು ಮುಂಜೂರು ಮಾಡಿದೆ. ಆ ಘಟಕ ನಿರ್ಮಾಣಕ್ಕೆ 30 ಕೋಟಿ ವೆಚ್ಚದ ಡಿಪಿಆರ್ ತಯಾರಿಸಲಾಗಿದೆ. ಲೋಕಲ್ ಸೆಲ್ ಪ್ಯಾಕಿಂಗ್ ಘಟಕ ತಯಾರಾದರೆ ಮೇಲೆ ನಮಗೆ ಪ್ರತಿತಿಂಗಳು ಒಂದು ಕೋಟಿ ಉಳಿತಾಯವಾಗುವ ನಿರೀಕ್ಷೆಯಲ್ಲಿದ್ದೇವೆ. ಸದ್ಯ ನಮ್ಮಲ್ಲಿ ತುಪ್ಪ, ಮೈಸೂರು ಪಾಕ್ ಮತ್ತು ದೂದ್ ಪೇಡಾಗೇ ಹೆಚ್ಚು ಬೇಡಿಕೆ ಇದೆ.

ಹಾಲು ಉತ್ಪಾದಕರಿಗೆ ಚಿಮುಲ್ ಪ್ರಸ್ತುತ ಪ್ರತಿ ಲೀ. ಹಾಲಿಗೆ 35 ರು. 40 ಪೈಸೆ ದರ ನೀಡುತ್ತಿತ್ತು. ಹೊಸ ವರ್ಷದ ಕೊಡುಗೆಯಾಗಿ ಲೀ.ಹಾಲಿಗೆ ಇನ್ಮುಂದೆ 36 ರು. 40 ಪೈಸೆ ನೀಡಲಾಗುವುದು. ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನ 5 ರು. ಸೇರಿ ರು. 41.40 ಪ್ರತಿ ಲೀಟರ್‌ಗೆ ನೀಡಲಾಗುತ್ತದೆ. ರಾಜ್ಯದಲ್ಲಿ ಅಧಿಕ ದರ ನೀಡುತ್ತಿರುವ ಮೂರನೇ ಜಿಲ್ಲೆಯ ನಮ್ಮದಾಗಿದೆ. ಈಗ ನಮ್ಮ ಜಿಲ್ಲೆಯಲ್ಲಿ ಒಟ್ಟು 996 ಹಾಲು ಉತ್ಪಾದಕರ ಸಹಕಾರ ಸಂಘಗಳು ಕೆಲಸ ಮಾಡುತ್ತಿದು ಅವುಗಳ ಪೈಕಿ 125 ಮಹಿಳಾ ಸಂಘಗಳು ಕೆಲಸ ಮಾಡುತ್ತಿವೆ ಅವುಗಳಲ್ಲಿ ಎಲ್ಲಾ ಸಂಘಗಳು ಗುಣಮಟ್ಟದ ಹಾಲು ಸರಬರಾಜು ಮಾಡುತ್ತಿದ್ದು, ಐದಾರು ಸಂಘಗಳು ನಷ್ಟದಲ್ಲಿ ನಡೆಯುತ್ತಿರಬಹುದು. ಚಿಮುಲ್‌ನಿಂದ ಕಾಶ್ಮೀರ, ಪಶ್ಚಿಮ ಬಂಗಾಳ, ಗೋವಾ ಹಾಗೂ ಸೇನಾ ಮತ್ತು ರಕ್ಷಣಾ ನಮ್ಮ ಹಾಲು ಸರಭರಾಜಾಗುತ್ತಿದೆ ಎಂದು ಹೇಳಿದರು.

ಸಿಕೆಬಿ-1 ಸುದ್ದಿಗಾರರೊಂದಿಗೆ ಚಿಮುಲ್ ಎಂಡಿ ಡಾ.ಎ.ಸಿ.ಶ್ರೀನಿವಾಸಗೌಡ ಮಾತನಾಡಿದರು.