ಚಿಕ್ಕಮಗಳೂರುಜೆಜೆಎಂ ಕಾಮಗಾರಿ ನಡೆಸುವ ಮೊದಲು ನೀರಿನ ಮೂಲ ಗುರುತಿಸಿಕೊಳ್ಳದೆ ಕಾಮಗಾರಿ ನಡೆಸಿದಂತಹ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸುವುದಾಗಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದರು.

- ಜಿಪಂ ಸಭಾಂಗಣದಲ್ಲಿ ಮೂಡಿಗೆರೆ ತಾಲೂಕಿನ ಜೆಜೆಎಂ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜೆಜೆಎಂ ಕಾಮಗಾರಿ ನಡೆಸುವ ಮೊದಲು ನೀರಿನ ಮೂಲ ಗುರುತಿಸಿಕೊಳ್ಳದೆ ಕಾಮಗಾರಿ ನಡೆಸಿದಂತಹ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸುವುದಾಗಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೂಡಿಗೆರೆ ತಾಲೂಕು ಜಲ ಜೀವನ್ ಮಿಷನ್ ಕಾಮಗಾರಿಗಳ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ನೀರಿನ ಮೂಲವಿಲ್ಲದೆ ಕಾಮಗಾರಿ ನಡೆಸಿದರೆ ಅದು ತಪ್ಪು. ಕಾಮಗಾರಿ ಮುಗಿದ ಬಳಿಕ ನೀರಿನ ಮೂಲವೇ ಇಲ್ಲ ಎಂದಾದಲ್ಲಿ ಮಾಡಿದ ಎಲ್ಲ ಕಾಮಗಾರಿಯೂ ವ್ಯರ್ಥವಾಗುತ್ತದೆ ಎಂಬುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಇದಕ್ಕೂ ಮೀರಿ ಇಂಥ ಕಾಮಗಾರಿ ನಡೆಸಿದ್ದೆಯಾದಲ್ಲಿ ಅಂತಹ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದರು.

ಜೆಜೆಎಂ ಕಾಮಗಾರಿ ನಡೆಸುವಾಗ ಗ್ರಾಪಂ ಹಾಗೂ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ರಸ್ತೆಗಳನ್ನು ಅಗೆಯ ಬೇಕು. ಯಾರ ಗಮನಕ್ಕೂ ತಾರದೆ ರಸ್ತೆಗೆ ಹಾನಿ ಮಾಡಿದ್ದೆಯಾದಲ್ಲಿ ಅಂತಹ ಗುತ್ತಿಗೆದಾರರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಜೆಜೆಎಂ ಕಾಮಗಾರಿ ಕುಂಠಿತಗೊಂಡಿದೆ. ಕೆಲ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಂಬರ್ಧ ಮಾಡಿದ್ದಾರೆ. ಇನ್ನು ಕೆಲವರು ತಮಗೆ ತೋಚಿದಂತೆ ಮಾಡಿದ್ದಾರೆ. ಹೀಗಾಗಿ ಗ್ರಾಪಂ ಪಿಡಿಒ, ಎಇಇ, ಇಒ ಹಾಗೂ ಸಿಇಒ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದೇನೆ. ಜೊತೆಗೆ ಒಂದು ತಿಂಗಳ ಒಳಗಾಗಿ ಮತ್ತೆ ಸಭೆ ಕರೆಯುವುದಾಗಿ ತಿಳಿಸಿದ್ದೇನೆ ಎಂದರು.

ಕಾಮಗಾರಿ ನಡೆಯುವಾಗ ಲೋಪ ದೋಷಗಳನ್ನು ಸರಿಪಡಿಸಬೇಕು. ಇದಲ್ಲದೆ ಯಾರು ಕಾಮಗಾರಿ ಮಾಡುತ್ತಿಲ್ಲವೋ ಅಂತಹ ಗುತ್ತಿಗೆದಾರರಿಗೆ ಮೂರು ಬಾರಿ ನೋಟೀಸ್ ನೀಡಿ ಕಪ್ಪು ಪಟ್ಟಿಗೆ ಸೇರಿಸಬೇಕು. ಜೊತೆಗೆ ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧವೂ ಎಫ್‌ಐಆರ್ ದಾಖಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಜಿಪಂ ಉಪ ಕಾರ್ಯದರ್ಶಿ ಗೌರವ್ ಕುಮಾರ್‌ ಶೆಟ್ಟಿ, ಎಚ್‌.ಸಿ. ಕಲ್ಮರುಡಪ್ಪ ಉಪಸ್ಥಿತರಿದ್ದರು.

2 ಕೆಸಿಕೆಎಂ 4ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಮೂಡಿಗೆರೆ ತಾಲೂಕಿಗೆ ಸಂಬಂಧಿಸಿದಂತೆ ಜೆಜೆಎಂ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಎಚ್.ಎಸ್.ಕೀರ್ತನಾ, ಗೌರವ್ ಕುಮಾರ್ ಶೆಟ್ಟಿ, ಎಚ್‌.ಸಿ. ಕಲ್ಮರುಡಪ್ಪ ಇದ್ದರು.