ದೇಶದಲ್ಲಿರುವ 80 ಲಕ್ಷ ಪಿಂಚಿಣಿದಾರರ ಪರವಾಗಿ ನ್ಯಾಷನಲ್‌ ಆಂದೋಲನ ಸಮಿತಿ ಹೋರಾಟ ನಡೆಸುತ್ತಿದ್ದು, ಇಂದಲ್ಲ, ನಾಳೆ ಕನಿಷ್ಠ ಪಿಂಚಿಣಿ ಮತ್ತು ಹೆಚ್ಚುವರಿ ಪಿಂಚಿಣಿ ಪಡೆಯುವುದು ನಿಶ್ಚಿತ ಎಂದು ಎನ್.ಎ.ಸಿ.ಯ ರಾಷ್ಟ್ರೀಯ ಮುಖ್ಯ ಸಂಯೋಜಕ ರಮಾಕಾಂತ್ ನರಗುಂದ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುದೇಶದಲ್ಲಿರುವ 80 ಲಕ್ಷ ಪಿಂಚಿಣಿದಾರರ ಪರವಾಗಿ ನ್ಯಾಷನಲ್‌ ಆಂದೋಲನ ಸಮಿತಿ ಹೋರಾಟ ನಡೆಸುತ್ತಿದ್ದು, ಇಂದಲ್ಲ, ನಾಳೆ ಕನಿಷ್ಠ ಪಿಂಚಿಣಿ ಮತ್ತು ಹೆಚ್ಚುವರಿ ಪಿಂಚಿಣಿ ಪಡೆಯುವುದು ನಿಶ್ಚಿತ ಎಂದು ಎನ್.ಎ.ಸಿ.ಯ ರಾಷ್ಟ್ರೀಯ ಮುಖ್ಯ ಸಂಯೋಜಕ ರಮಾಕಾಂತ್ ನರಗುಂದ ತಿಳಿಸಿದ್ದಾರೆ.ನಗರದ ಶ್ರೀ ಕೊಲ್ಲಾಪುರದಮ್ಮ ಸಮುದಾಯಭವನದಲ್ಲಿ ಕೆ.ಎಸ್.ಆರ್.ಟಿ.ಸಿ. ತುಮಕೂರು ವಿಭಾಗದ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಟ್ರಸ್ಟ್ ತುಮಕೂರು ವತಿಯಿಂದ ಆಯೋಜಿಸಿದ್ದ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.ದೇಶದ ಅಭಿವೃದ್ದಿಗಾಗಿ ವಿವಿಧ ನಿಗಮ, ಮಂಡಳಿಗಳಲ್ಲಿ ಕೆಲಸ ಮಾಡಿರುವ ನಾವುಗಳು, ಸಂಧ್ಯಾಕಾಲದಲ್ಲಿ ಗೌರವಯುತ ಜೀವನ ನಡೆಸುವ ಸಲುವಾಗಿ ಕನಿಷ್ಠ ಪಿಂಚಿಣಿ ಹಾಗೂ ಆರ್ಹರಿಗೆ ಹೆಚ್ಚುವರಿ ಪಿಂಚಿಣಿ ನೀಡಬೇಕು. ಇದು ನಮ್ಮನ್ನು ದುಡಿಸಿಕೊಂಡು ಹೊರ ಹಾಕಿರುವ ಸಂಸ್ಥೆಗಳು ಮತ್ತು ಸರಕಾರಗಳ ಕರ್ತವ್ಯವಾಗಿದೆ .ಹಲವಾರು ವರ್ಷಗಳ ನಮ್ಮ ಹೋರಾಟ ನಿರ್ಣಾಯಕ ಹಂತದಲ್ಲಿದ್ದು, 2026 ರ ಫೆಬ್ರವರಿ ಅಥವಾ ಮಾರ್ಚ್‌ ತಿಂಗಳಲ್ಲಿ ಕನಿಷ್ಠ ಮಾಸಿಕ 7500ರು. ಪಿಂಚಿಣಿ ವ್ಯವಸ್ಥೆಯನ್ನು ಸರಕಾರ ಜಾರಿಗೊಳಿಸಲಿದೆ ಎಂಬ ದೃಢ ನಂಬಿಕೆ ನಮಗಿದೆ. ಆಗ ಇದೇ ವೇದಿಕೆಯಲ್ಲಿ ಸಂಭ್ರಮ ಆಚರಿಸೋಣ ಎಂದರು.ಸರಕಾರಕ್ಕೆ ಈಗಾಗಲೇ ಕನಿಷ್ಠ ಪಿಂಚಿಣಿ ಮತ್ತು ಹೆಚ್ಚುವರಿ ಪಿಂಚಿಣಿ ಕುರಿತು ಸಾಕಷ್ಟು ಮನವಿ ಸಲ್ಲಿಸಿ, ಹೋರಾಟವನ್ನು ನಡೆಸಲಾಗಿದೆ. ಅಲ್ಲದೆ ಸುಪ್ರಿಂಕೋರ್ಟ್‌ ಕೂಡ ಕನಿಷ್ಠ ಪಿಂಚಿಣಿ ಹೆಚ್ಚಳಕ್ಕೆ ಆದೇಶ ಮಾಡಿದೆ .ರಾಷ್ಟ್ರೀಯ ಆಂದೋಲನ ಸಮಿತಿ ಸುಮಾರು 22 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದು, 80 ಲಕ್ಷ ಪಿಂಚಿಣಿದಾರರ ಪ್ರತಿನಿಧಿಯಾಗಿ ಸರಕಾರದೊಂದಿಗೆ ವ್ಯವಹರಿಸುತ್ತಿದೆ. ಪಿಂಚಿಣಿ ವಿಚಾರವಾಗಿಯೇ ನಿವೃತ್ತ ನೌಕರರ ಸಂಘ ಜನವರಿ 13 ರಂದು ರಾಷ್ಟ್ರವ್ಯಾಪ್ತಿ ಮುಷ್ಕರ ನಡೆಸುತ್ತಿದ್ದು, ಇವರಿಗೆ ನಮ್ಮ ಸಂಘ ಸಹ ಬೆಂಬಲ ಘೋಷಿಸಿ, ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ. ತಾವುಗಳು ಸಹ ಭಾಗವಹಿಸುವಂತೆ ಮನವಿ ಮಾಡಿದರು.ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ಕೆ.ಎಸ್.ಆರ್.ಟಿ.ಸಿ.ಯ ಎಲ್ಲಾ ಹೋರಾಟಗಳಿಗೆ ಮುಂದೆಯೂ ನಾವು ಎಲ್ಲಾರೀತಿಯ ಹೋರಾಟಕ್ಕೂ ಸಿದ್ದ ಎಂದರು. ಸಂಘದ ಉಪಾಧ್ಯಕ್ಷ ಆರ್.ಸುಬ್ಬಣ್ಣ, ಗಜೇಂದ್ರಕುಮಾರ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಸ್.ಆರ್.ಟಿ.ಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಮಾತನಾಡಿ, ತುಮಕೂರು ಜಿಲ್ಲಾ ಕೆ.ಎಸ್.ಆರ್.ಟಿ.ಸಿ ನೌಕರರ ಕ್ಷೇಮಾಭಿವೃದ್ದಿ ಟ್ರಸ್ಟ್ ಸಕ್ರಿಯವಾಗಿದೆ. ಸಂಸ್ಥೆಯ ಏಳಿಗೆಗಾಗಿ ಹಲವಾರು ನಿವೃತ್ತ ನೌಕರರ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದುಡಿದಿದ್ದಾರೆ. ಆದರ ಫಲವೇ ಇಂದು ನಾವು ಲಕ್ಸುರಿ ಬಸ್ಸುಗಳು, ಹತ್ತಾರು ಟ್ರಿಪ್ ಮಾಡಲು, ಒಳ್ಳೆಯ ಬಸ್ ನಿಲ್ದಾಣ ಹೊಂದಲು ಸಾಧ್ಯವಾಗಿದೆ. ಸಂಧ್ಯಾಕಾಲದಲ್ಲಿ ನಿಮ್ಮನ್ನುಗೌರವಯುತವಾಗಿ ನಡೆಸಿಕೊಳ್ಳಬೇಕು.ಈ ನಿಟ್ಟಿನಲ್ಲಿ ನಾವು ನಿಮ್ಮಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಲಿದ್ದೇವೆಎಂದು ಭರವಸೆ ನೀಡಿದರು.

ಅಧ್ಯಕ್ಷ ಭೀಮಾನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕುಲಕರ್ಣಿ, ದೊಡ್ಡೇಗೌಡ, ಡಿಟಿಓ ಮಂಜುನಾಥ್, ಡಿಎಂಇ ಅಶೀಫ್‌ವುಲ್ಲಾ ಷರೀಫ್,ಮುಖಂಡರಾದ ಕುಂಭಯ್ಯ ಹಾಗೂ ತುಮಕೂರು ವಿಭಾಗ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಟ್ರಸ್ಟ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.