ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾರು? ಅವರಿಗೆ ಆ ಅಧಿಕಾರ ಕೊಟ್ಟವರು ಯಾರು? ಹಾಗಿದ್ದರೆ, ರಾಜ್ಯದಲ್ಲಿರುವುದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಕನ್ನಡಪ್ರಭ ವಾರ್ತೆ ನವದೆಹಲಿ
ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾರು? ಅವರಿಗೆ ಆ ಅಧಿಕಾರ ಕೊಟ್ಟವರು ಯಾರು? ಹಾಗಿದ್ದರೆ, ರಾಜ್ಯದಲ್ಲಿರುವುದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.ಬುಧವಾರ ದೆಹಲಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಂಗಳವಾರ ಬಳ್ಳಾರಿಯಲ್ಲಿ ಡಿಸಿಎಂ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅದಕ್ಕೆ ಗೃಹ ಸಚಿವರು ಇಲ್ಲವೇ? ರಾಜ್ಯದಲ್ಲಿ ಇರುವ ಗೃಹ ಸಚಿವರು ಹೆಬ್ಬೆಟ್ಟು ಸಚಿವರಾ? ನನಗೆ ನೈಜ ಘಟನೆಗಳ ಬಗ್ಗೆ ಮಾಹಿತಿ ಕೊಡುವವರು ಇದ್ದಾರೆ. ಅದರ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕ ಮಾಧ್ಯಮಗಳಿಗೆ ವಿವರಿಸಿದ್ದೇನೆ. ಜನತೆಗೆ ಸತ್ಯ ತಿಳಿಯಬೇಕಲ್ಲವೇ? ಎಂದರು.
ಯಾವುದೇ ವಿಷಯವಾದರೂ ದಾಖಲೆ ಇಲ್ಲದೆ ನಾನು ಮಾತನಾಡಲ್ಲ. ಜನಾರ್ಧನ ರೆಡ್ಡಿ ಮನೆ ಮೇಲೆ ದಾಳಿ ನಡೆಸುತ್ತಿದ್ದ ಗುಂಪನ್ನು ಕೇವಲ ಐದು ನಿಮಿಷದಲ್ಲಿ ಚದುರಿಸಬಹುದಿತ್ತು. ಯಾಕೆ ಚದುರಿಸಲಿಲ್ಲ?. ಪೊಲೀಸರ ಕೈಯನ್ನು ಯಾರು ಕಟ್ಟಿ ಹಾಕಿದರು? ಖಾಸಗಿ ಗನ್ ಮ್ಯಾನ್ ಗಳು ಮನಸೋಇಚ್ಛೆ ಫೈರಿಂಗ್ ಮಾಡುತ್ತಿದ್ದರೂ ಪೊಲೀಸರು ಸುಮ್ಮನೆ ಇದ್ದದ್ದು ಯಾಕೆ? ಎಂದು ಪ್ರಶ್ನಿಸಿದರು.ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸರಕಾರ ಯತ್ನಿಸುತ್ತಿದೆ. ಕೇವಲ ಬ್ಯಾನರ್ ಕಟ್ಟುವ ವಿಚಾರಕ್ಕೆ ಬೀದಿಯಲ್ಲಿ ಗುಂಡು ಹಾರಿಸ್ತಾರಾ?. ಮರಣೋತ್ತರ ಪರೀಕ್ಷೆ ನಡೆದ ನಂತರ ಕೊಲೆಯಾದ ಕಾರ್ಯಕರ್ತನ ಮೃತದೇಹವನ್ನು ಸುಟ್ಟು ಹಾಕಿದ್ದು ಯಾಕೆ?. ಇದಕ್ಕೆಲ್ಲಾ ಸರಕಾರ ಉತ್ತರ ಕೊಡಬೇಕಲ್ಲವೇ? ಎಂದರು.ಪಕ್ಷದ ಶಾಸಕರೇ ಕೊಲೆ ಮಾಡಿದ್ರು ಯಾರೂ ಕೇಳುವಂತಿಲ್ಲ ಎಂಬ ಪರಿಸ್ಥಿತಿ ತಲೆದೋರಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡಿ. ಆಗ ಯಾರ ತಲೆ ಉರುಳುತ್ತೆ ಎಂಬುದು ಗೊತ್ತಾಗುತ್ತೆ ಎಂದರು.ವಿಜಯೇಂದ್ರ ಮೈತ್ರಿ ಹೇಳಿಕೆ ವಿಶೇಷ ಅರ್ಥ ಬೇಡ:
ರಾಜ್ಯದಲ್ಲಿ ಮುಂದಿನ ಬಾರಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೇಳಿಕೆಗೆ ವಿಶೇಷ ಅರ್ಥ ಬೇಡ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ವಿಜಯೇಂದ್ರ ಅವರ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಮೈತ್ರಿಯಲ್ಲಿ ಚುನಾವಣೆಗೆ ಹೋದರೂ ಬಿಜೆಪಿಗೆ ಹೆಚ್ಚು ಸ್ಥಾನ ಬರಲಿದೆ, ಬಿಜೆಪಿ 140 ಸೀಟ್ ಗೆಲ್ಲುವ ವಾತಾವರಣ ರಾಜ್ಯದಲ್ಲಿದೆ ಎನ್ನುವ ಅರ್ಥದಲ್ಲಿ ಮಾತನಾಡಿರಬಹುದು ಎಂದು ಸಮಜಾಯಿಸಿ ನೀಡಿದರು.