- ಸಾಕಾಣಿಕೆದಾರ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ₹25 ಲಕ್ಷ ಸಾಲ, ಸಹಾಯಧನ ಸೌಲಭ್ಯಕ್ಕೆ ಎಂ.ಪಿ.ಸಂಜಯ್
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕೋಳಿ ಸಾಕಾಣಿಕೆ ದರವನ್ನು ರಾಜ್ಯ ಸರ್ಕಾರ ಹೆಚ್ಚಿಸಿರುವುದು ನಮ್ಮ ಸುದೀರ್ಘ ಹೋರಾಟಕ್ಕೆ ದೊರೆತ ಜಯವಾಗಿದೆ. ಮಧ್ಯಂತರ ದರವಾಗಿ ಸರ್ಕಾರ ಪ್ರತಿ ಕೆಜಿಗೆ ₹10 ನಿಗದಿಪಡಿಸಲು ಆಯುಕ್ತರಿಗೆ ಆದೇಶ ಹೊರಡಿಸಿದೆ ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಎಂ.ಪಿ.ಸಂಜಯ್ ತಿಳಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8 ತಿಂಗಳಿನಿಂದ ಕೋಳಿ ಸಾಕಾಣಿಕೆ ದರವಾಗಿ ಪ್ರತಿ ಕೆಜಿಗೆ ಕನಿಷ್ಠ ₹20 ನಿಗದಿಪಡಿಸುವಂತೆ ಸಂಘದ ನೇತೃತ್ವದಲ್ಲಿ ನಿರಂತರ ಹೋರಾಟ, ಪ್ರತಿಭಟನೆ ನಡೆಸಿದ್ದ ಫಲವಾಗಿ ಸರ್ಕಾರ ಈಗ ಮಧ್ಯಂತರ ಆದೇಶ ಹೊರಡಿಸಿದೆ. ಸರ್ಕಾರದ ಈ ಕ್ರಮ ಮುಕ್ತಕಂಠದಿಂದ ಸಂಘ ಸ್ವಾಗತಿಸುತ್ತದೆ ಎಂದರು.
ಸಿಎಂ ಆಗಿದ್ದ ಸಿದ್ದರಾಮಯ್ಯ, ಪಶು ಸಂಗೋಪನಾ ಸಚಿವರಾಗಿದ್ದ ಕೆ.ವೆಂಕಟೇಶ, ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಕಂಪನಿಗಳಿಂದ ಸಿಗುವ ಸಾಕಾಣಿಕೆ ವೆಚ್ಚವನ್ನು ಕನಿಷ್ಠ ₹20ಕ್ಕೆ ನಿಗದಿಪಡಿಸುವಂತೆ ಹಲವಾರು ಸಲ ಮನವಿ ಸಲ್ಲಿಸಲಾಗಿತ್ತು. ಕಡಿಮೆ ಬಡ್ಡಿ ದರಕ್ಕೆ ಸಾಲ, ಸಹಾಯಧನ ನೀಡುವಂತೆಯೂ ಒತ್ತಾಯಿಸಿದ್ದೆವು. ಈಗ್ಗೆ ಕಂಪನಿ, ರೈತರು ಹಾಗೂ ಅಧಿಕಾರಿಗಳ ಮಧ್ಯೆ ಅನೇಕ ಸುತ್ತಿನ ಸಭೆ ನಡೆದಿದ್ದವು ಎಂದು ಅವರು ಹೇಳಿದರು.
ಅಧಿವೇಶನದಲ್ಲಿ ಕೆಜಿಎಫ್ ಶಾಸಕಿ ಡಾ.ರೂಪಕಲಾ ಶಶಿಧರ್ ಸಂಘದ ಮನವಿ ಮೇರೆಗೆ ರೈತರ ಸಮಸ್ಯೆ ಪ್ರಸ್ತಾಪಿಸಿ, ಸರ್ಕಾರದ ಗಮನ ಸೆಳೆದಿದ್ದರು. ಅದಕ್ಕೆ ಪಶು ಸಂಗೋಪನಾ ಸಚಿವರು, ಸಮಿತಿ ರಚಿಸಿ, ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರೈತರ ನಷ್ಟ ಪರಿಗಣಿಸಿ, ಸರ್ಕಾರ ಸದ್ಯಕ್ಕೆ ಮಧ್ಯಂತರ ಆದೇಶವಾಗಿ ಕನಿಷ್ಠ ಸಾಕಾಣಿಕೆ ವೆಚ್ಚವನ್ನು ₹10ಕ್ಕೆ ನಿಗದಪಡಿಸಿದ್ದು, ಇದನ್ನು ಜಾರಿಗೊಳಿಸುವ ಜವಾಬ್ದಾರಿ ಪಶು ಭವನದ ಆಯುಕ್ತರಿಗೆ ನೀಡಿದೆ ಎಂದು ತಿಳಿಸಿದರು.
ಕೋಳಿ ಸಾಕಾಣಿಕೆ ರೈತರ ಪರ ಧ್ವನಿ ಎತ್ತಿದ ಮಾಜಿ ಸಚಿವ ಕೆ.ವೆಂಕಟೇಶ, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ, ಇಲಾಖೆ ಆಯುಕ್ತರಾದ ಶಿಲ್ಪಾನಾಗ್, ಕುಕ್ಕುಟ ಮಹಾಮಂಡಳಿ ಅಧಿಕಾರಿಗಳಿಗೆ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿ ಸ್ವಾಮಿನಾಥನ್ ಆಯೋಗದ ವರದಿಯನ್ವಯ ಸಿ+2 ಸೂತ್ರದಡಿ ಶೇ.59ರಷ್ಟು ಲಾಭಾಂಶ ಸೇರಿಸಿ ವೈಜ್ಞಾನಿಕವಾಗಿ ಬೆಲೆ ನಿಗದಿಪಡಿಸಬೇಕು. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ₹25 ಲಕ್ಷ ಸಾಲ ಸೌಲಭ್ಯ, ಸಹಾಯಧನ ನೀಡಬೇಕು ಎಂದು ಎಂ.ಪಿ.ಸಂಜಯ್ ಒತ್ತಾಯಿಸಿದರು.ಸಂಘದ ಅಧ್ಯಕ್ಷ ಮಹಮದ್ ಸಾದಿಕ್‌ವುಲ್ಲಾ, ಕಾರ್ಯದರ್ಶಿ ಪರಶುರಾಮ, ಚನ್ನಕೇಶವ ಇತರರು ಇದ್ದರು.
- - -(ಟಾಪ್ ಕೋಟ್)
ದಾವಣಗೆರೆಯಲ್ಲಿ 7-8 ಸಾವಿರ ಸೇರಿದಂತೆ ರಾಜ್ಯದಲ್ಲಿ 25 ಸಾವಿರ ಜನ ಕೋಳಿ ಸಾಕಾಣಿಕೆದಾರರಿದ್ದಾರೆ. ಕಂಪನಿಗಳು ನೀಡುವ ಕೋಳಿಗಳನ್ನು 45 ದಿನದವರೆಗೆ ಸಾಕಬೇಕಾಗುತ್ತದೆ. ಸಾಕಾಣಿಕೆ ದರ ಕಡಿಮೆ ಇದ್ದ ಕಾರಣಕ್ಕೆ ಸರ್ಕಾರ ಹೆಚ್ಚಿಸುವಂತೆ ಸಂಘದ ನೇತೃತ್ವದಲ್ಲಿ ಹೋರಾಟ ನಡೆಸಿದ್ದು ಫಲ ಕೊಟ್ಟಿದೆ. ಆದರೆ, ಕಂಪನಿಗಳು ಈಗಲೂ ₹6.20 ಮಾತ್ರ ನೀಡುತ್ತಿದ್ದು, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.- ಎಂ.ಪಿ.ಸಂಜಯ್, ಖಜಾಂಚಿ.
- - --31ಕೆಡಿವಿಜಿ5:
ದಾವಣಗೆರೆಯಲ್ಲಿ ಭಾನುವಾರ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಎಂ.ಪಿ.ಸಂಜಯ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.