- ಕರ್ನಾಟಕ ರಾಜ್ಯ ಪ್ರವರ್ಗ-1 ಜಾತಿಗಳ ಒಕ್ಕೂಟದ ಶ್ರೀನಿವಾಸಗೆ ಸಚಿವ ಸ್ಥಾನಕ್ಕೆ ಮಂಜಮ್ಮ ಆಗ್ರಹ - - -
ಕನ್ನಡಪ್ರಭ ವಾರ್ತೆ ದಾವಣಗೆರೆಕರ್ನಾಟಕ ರಾಜ್ಯ ಪ್ರವರ್ಗ-1 ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಒಕ್ಕೂಟದ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಜಿ.ಮಂಜಮ್ಮ ಹನುಮಂತಪ್ಪ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದವ ಸಂಘದ ರಾಜ್ಯಾಧ್ಯಕ್ಷರೂ ಆಗಿರುವ ಡಿ.ಟಿ. ಶ್ರೀನಿವಾಸ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡಬೇಕು. ಪಕ್ಷಕ್ಕೆ ಬೆನ್ನೆಲುಬು ಆಗಿರುವ ಯಾದವ ಸಮುದಾಯದ ಯಾವುದೇ ನಾಯಕರಿಗೂ ಸಚಿವ ಸ್ಥಾನ ನೀಡಿಲ್ಲ ಎಂದರು.ಶ್ರೀನಿವಾಸ್‌ಗೆ ಸಂಪುಟದಲ್ಲಿ ಸ್ಥಾನ ನೀಡಿದಲ್ಲಿ ಯಾದವ ಸಮುದಾಯ ಮತ್ತು ಪ್ರವರ್ಗ-1ರ ಜಾತಿಗಳ ಒಕ್ಕೂಟಕ್ಕೆ ಸೂಕ್ತ ಪ್ರಾತಿನಿಧ್ಯವನ್ನು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ಸರ್ಕಾರವು ನೀಡಿದಂತಾಗುತ್ತದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಘೋಷಿತರಾದ ಡಿ.ಕೆ.ಶಿವಕುಮಾರ ತಾವು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಟಿ.ಶ್ರೀನಿವಾಸ ಅವಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಿ ಎಂದು ಅವರು ಆಗ್ರಹಿಸಿದರು.
ಪ್ರವರ್ಗ-1 ಜಾತಿಗಳ ಒಕ್ಕೂಟದಲ್ಲಿ ಬೆಸ್ತ, ಗೊಲ್ಲ, ಉಪ್ಪಾರ, ಹೆಳವ, ದೊಂಬಿದಾಸ, ಬುಡಬುಡಿಕೆ, ಜೋಗಿ ಹಾಗೂ 46 ಅಲೆಮಾರಿ, ಅರೆ ಅಲೆಮಾರಿ ಒಳಗೊಂಡ 365 ಜಾತಿಗಳ ಪರವಾಗಿ ಡಿ.ಟಿ.ಶ್ರೀನಿವಾಸ ಬಹಳ ಕಠಿಣವಾಗಿ ಕೆಲಸ ಮಾಡುತ್ತಿದ್ದಾರೆ. ವಿಧಾನ ಪರಿಷತ್‌ನಲ್ಲಿ ಪ್ರವರ್ಗ ಒಕ್ಕೂಟದ ಜಾತಿಗಳ ಧ್ವನಿಯಾಗಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಅಂತಹವರನ್ನು ಸಚಿವರಾಗಿ ಮಾಡಿದರೆ ಇನ್ನೂ ಹೆಚ್ಚಿನ ಕೆಲಸ ಕಾರ್ಯ, ಅಭಿವೃದ್ಧಿ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕೆಪಿಸಿಸಿ ಇತರೆ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರೂ ಆಗಿ ಡಿ.ಟಿ.ಶ್ರೀನಿವಾಸ ಕಾರ್ಯನಿರ್ವಹಿಸುತ್ತಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ ಎಂ. ಶಾಮನೂರು ಗೆಲುವಿನಲ್ಲೂ ಡಿ.ಟಿ.ಶ್ರೀನಿವಾಸ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಬೇಕು ಎಂದು ಮಂಜಮ್ಮ ಹನುಮಂತಪ್ಪ ಕಾಂಗ್ರೆಸ್ ಹೈಕಮಾಂಡ್, ಡಿ.ಕೆ.ಶಿವಕುಮಾರಗೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ನಲ್ಕುಂದ ಹಾಲೇಶ, ಭೋಜರಾಜ್, ಎಸ್.ಎಂ.ಸುರೇಶ, ಏಕಾಂತಪ್ಪ, ಉಮೇಶ ಇತರರು ಇದ್ದರು.- - -
-31ಕೆಡಿವಿಜಿ2: ದಾವಣಗೆರೆಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪ್ರವರ್ಗ-1 ಜಾತಿಗಳ ಒಕ್ಕೂಟದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಿ.ಮಂಜಮ್ಮ ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.