ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪ್ರತಿಯೊಂದು ಗ್ರಾಮಗಳು ಅಭಿವೃದ್ಧಿ ಆದರೆ ದೇಶ ಅಭಿವೃದ್ಧಿ ಆದಂತೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.

ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಮಾತನಾಡಿ, ಪ್ರತಿಯೊಂದು ಗ್ರಾಮಗಳು ಅಭಿವೃದ್ಧಿ ಹಾದರೆ ನಮ್ಮ ದೇಶ ಅಭಿವೃದ್ಧಿ ಆಗುತ್ತದೆ ಇದನ್ನು ಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ಜಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಕನಸನ್ನು ನನಸು ಮಾಡುವುದೇ ಅವರ ಮೂಲ ಉದ್ದೇಶವಾಗಿದೆ ಎಂದರು. ಹಾಸನ್ ಟು ಸೊಲ್ಲಾಪುರ್‌ ಎಕ್ಸ್‌ಪ್ರೆಸ್‌ ಚನ್ನರಾಯಪಟ್ಟಣ ರೈಲು ನಿಲ್ದಾಣದಲ್ಲಿ ನಿಲುಗಡೆ ಅವಕಾಶ ಇರಲಿಲ್ಲ, ಇದರಿಂದ ರೈಲ್ವೆ ಪ್ರಯಾಣಿಕರಿಗೆ ಬಹಳಷ್ಟು ತೊಂದರೆ ಉಂಟಾಗಿತ್ತು. ಈ ತೊಂದರೆಯನ್ನು ನೀಗಿಸುವ ಸಲುವಾಗಿ ಈ ರೈಲು ನಿಲುಗಡೆಗೆ ಚನ್ನರಾಯಪಟ್ಟಣದಲ್ಲಿ ಅವಕಾಶವನ್ನು ಕಲ್ಪಿಸಿ ಕೊಡುವಂತೆ ಮನವಿ ಮಾಡಿದ್ದರು ಎಂದರು. ಜೊತೆಗೆ 17 ಭೋಗಿಯನ್ನು ಒಳಗೊಂಡಂತೆ ಈ ರೈಲು ಸಂಚರಿಸುತ್ತಿತ್ತು, ಆದರೆ ಇಂದು 21 ಬೋಗಿಗಳನ್ನು ಒಳಗೊಂಡಂತೆ ಈ ರೈಲು ಸಂಚಾರಕ್ಕೆ ಸುಗಮವಾಗಿದೆ ಹಾಗೂ ಹೆಚ್ಚುವ ಫ್ಲಾಟ್ ಫಾರಂ ಅನ್ನು ನಿರ್ಮಾಣ ಮಾಡಲು ತಡವಾಗಿರುವ ಕಾರಣ ಈ ರೈಲು ನಿಲುಗಡೆಗೆ ತಡವಾಗಿತ್ತು. ಆದರೆ ಇಂದು ಎಲ್ಲಾ ಕೆಲಸ ಕಾರ್ಯಗಳು ಮುಕ್ತಾಯಗೊಂಡು ಇಂದು ಸಂಚಾರಕ್ಕೆ ಸುಗಮವಾಗಿದೆ. ಜೊತೆಗೆ ಈ ಭಾಗದ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಇನ್ನು ಹತ್ತು ಹಲವು ರೈಲುಗಳನ್ನು ಬಿಡುವ ಯೋಜನೆಯನ್ನು ಸಹ ಸದ್ಯದಲ್ಲೇ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಹಾಸನ್ ಟು ತಿರುಪತಿ ಬೆಂಗಳೂರು ಟು ಮುಂಬೈ ಪ್ರತ್ಯೇಕ ರೈಲು ಅನ್ನು ಬಿಡಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ. ಅದರಂತೆ ಇಂದು ಹಾಸನದಿಂದ ಸೊಲ್ಲಾಪುರ್ ಹೋಗುವ ಎಕ್ಸ್‌ಪ್ರೆಸ್‌ ರೈಲಿಗೆ ಚನ್ನರಾಯಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಇದರಲ್ಲಿ ಸ್ಥಳೀಯ ಶಾಸಕರು ಮತ್ತು ಲೋಕಸಭಾ ಸದಸ್ಯರ ಪಾತ್ರ ಬಹುಮುಖ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಸಿ ಎನ್ ಬಾಲಕೃಷ್ಣ ಮಾತನಾಡಿ ಪ್ರತಿನಿತ್ಯ ಬೆಳಗ್ಗೆ ಹಾಸನದಿಂದ ಯಶವಂತಪುರಕ್ಕೆ ಹೋಗುತ್ತಿರುವ ಯಶವಂತಪುರ ಇಂಟರ್‌ಸಿಟಿ ರೈಲು 10.30 ಕ್ಕೆ ಹೋಗುತ್ತಿದೆ. ಇದರಿಂದ ಸರ್ಕಾರಿ ನೌಕರರಿಗೆ ಮತ್ತು ಸಾರ್ವಜನಿಕರಿಗೆ ಹಾಗೂ ಇನ್ನಿತರ ಪ್ರಯಾಣಿಕರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಈ ರೈಲನ್ನು 9:30ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ತೆರಳುವಂತೆ ಅವಕಾಶವನ್ನು ಕಲ್ಪಿಸಿ ಕೊಡಬೇಕು ಹಾಗೂ ಬೆಟ್ಟದ ಕೊಪ್ಪಲು ಭಾಗದ ಸಾರ್ವಜನಿಕರು ತಿರುಗಾಡಲು ರೈಲ್ವೆ ಹಳಿಗಳನ್ನು ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದಕಾರಣ ಕೂಡಲೇ ಸೇತುವೆ ನಿರ್ಮಾಣ ಮಾಡಲು ಅವಕಾಶವನ್ನು ಕಲ್ಪಿಸಿ ಕೊಡಬೇಕು. ಜೊತೆಗೆ ಶ್ರವಣಬೆಳಗೊಳ ಕೆ ಆರ್‌ ಪೇಟೆ ಈ ಭಾಗದ ಸಾರ್ವಜನಿಕರು ಮುಂಬೈ ನಗರದಲ್ಲಿ ನೆಲೆಸಿದ್ದು, ಈ ಪ್ರಯಾಣಿಕರಿಗೆ ವಿಶೇಷ ಬೆಂಗಳೂರು ಟು ಮುಂಬೈ ಪ್ರತ್ಯೇಕ ರೈಲು ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಿ ಕೊಡಬೇಕು ಹಾಗೂ ಈ ಭಾಗದಲ್ಲಿ ಪ್ರೇಕ್ಷಣಿಕ ಸ್ಥಳಗಳಿದ್ದು, ಈ ಪ್ರೇಕ್ಷಣಿಕ ಸ್ಥಳಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹಾಸನ್ ಟು ತಿರುಪತಿ ವಿಶೇಷ ರೈಲು ಯೋಜನೆಯನ್ನು ಕೂಡ ರೂಪಿಸಲು ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಹಾಸನ್ ಟು ಸೊಲ್ಲಾಪುರ್‌ ರೈಲು ಈಗಾಗಲೇ ಚನ್ನರಾಯಪಟ್ಟಣದಲ್ಲಿ ನಿಲುಗಡೆಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದು ನಾನು ಭಾವಿಸಿದ್ದೆ. ಏಕೆಂದರೆ ಕಳೆದ ಐದು ತಿಂಗಳ ಹಿಂದೆಯೇ ಈ ರೈಲು ನಿಲುಗಡೆಗೆ ಸರ್ಕಾರದಿಂದ ಆದೇಶವನ್ನು ಸಹ ನೀಡಲಾಗಿತ್ತು. ಆದರೆ ಕೆಲವು ತಾಂತ್ರಿಕ ದೋಷಗಳಿಂದ ಈ ರೈಲು ನಿಲುಗಡೆಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿಲ್ಲ ಎಂಬುದು ಕೆಲವು ದಿನಗಳ ಹಿಂದೆ ನನಗೆ ಮಾಹಿತಿ ಬಂತು. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಈ ರೈಲನ್ನು ನಿಲುಗಡೆಗೆ ಅವಕಾಶ ಕಲ್ಪಿಸಿಕೊಡುವಂತೆ ತಿಳಿಸಲಾಯಿತು. ಅದರಂತೆ ನಮ್ಮ ರೈಲ್ವೆ ಸಚಿವರೊಂದಿಗೆ ಚರ್ಚಿಸಿ ಇದಕ್ಕೆ ಬೇಕಾದಂತಹ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಭೆಯಲ್ಲಿ ನಿಗದಿತ ದಿನಾಂಕವನ್ನು ನಿಗದಿ ಮಾಡಿ ಇಂದು ನಿಲುಗಡೆಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದರು.


ಇದೇ ಸಂದರ್ಭದಲ್ಲಿ ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ ಗೋಪಾಲಸ್ವಾಮಿ, ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮತ್ತು ತಾಲೂಕು ಬಿಜೆಪಿ ಮುಖಂಡ ಸಿ ಆರ್‌ ಚಿದಾನಂದ್, ರೈಲ್ವೆ ಅಧಿಕಾರಿಗಳು ಇನ್ನು ಮುಂತಾದವರು ಹಾಜರಿದ್ದರು.