ಸಾರಾಂಶ
ಕೊಪ್ಪಳ : ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮನೆಗೆ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿದ್ದು, ಇದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೇಟಿ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ತಾಲೂಕಿನ ಹಿಟ್ನಾಳ ಗ್ರಾಮದ ಶಾಸಕ ಹಿಟ್ನಾಳ ಮನೆಯಲ್ಲಿ ಉಭಯ ನಾಯಕರು ಮಾರುಕತೆ ನಡೆಸಿದ್ದಾರೆ. ಭೇಟಿಯ ಉದ್ದೇಶ ಏನು? ರಾಜಕೀಯ ಚರ್ಚೆಯೇ ಆಗಿರಬಹುದು? ಎಂಬ ಮಾತು ಕೇಳಿ ಬರುತ್ತಿವೆ.
ತಡರಾತ್ರಿ ಆಗಮಿಸಿದ್ದ ಸಚಿವ:
ಒಂದು ಗಂಟೆಗೂ ಹೆಚ್ಚು ಕಾಲ ಶಾಸಕ ರಾಘವೇಂದ್ರ ಹಿಟ್ನಾಳ್ ಜತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಸಿಎಂ ಸಿದ್ದರಾಮಯ್ಯ ಪರಮಾಪ್ತರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಹಿಟ್ನಾಳ ಸಚಿವ ಸ್ಥಾನದ ಆಕಾಂಕ್ಷಿ ಸಹ ಹೌದು. ಹಾಗೆ ಸಚಿವ ಸತೀಶ್ ಜಾರಕಿಹೋಳಿ ಸಿಎಂ ಸ್ಥಾನದ ಆಕಾಂಕ್ಷಿ ಸಹ ಆಗಿದ್ದಾರೆ. ಇವರಿಬ್ಬರ ಭೇಟಿ ಹಾಗೂ ಮಾತುಕತೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮುಂದಿನ ಸಿಎಂ ಜಾರಕಿಹೊಳಿ ಎಂದು ಜೈಕಾರ:
ಪಟ್ಟಣದಲ್ಲಿ ಕಾಂಗ್ರೆಸ್ ವತಿಯಿಂದ ಭಾನುವಾರ ನಡೆದ ಅಭಿನಂದನಾ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಆಗಮಿಸಿದ್ದರು. ಈ ಹಿನ್ನೆಲೆ ಮೆರವಣಿಗೆಯ ಮೊದಲು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಸಂದರ್ಭ ಕಾರ್ಯಕರ್ತರು ಹಾಗೂ ಸತೀಶ ಜಾರಕಿಹೊಳಿ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸತೀಶ ಜಾರಕಿಹೊಳಿ ಅವರಿಗೆ ಜಯವಾಗಲಿ ಎಂದು ಜೈಕಾರ ಕೂಗಿದರು.
ರಸ್ತೆ ಗುಂಡಿ ಮುಚ್ಚಿ ಹಾಕುವ ಕೆಲಸ:
ಕಳೆದ ಮೂರ್ನಾಲ್ಕು ತಿಂಗಳಿನಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಿದ್ದು, ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿದ್ದರೂ ಕ್ರಮ ಕೈಗೊಳ್ಳದ ಇಲಾಖೆಯ ಅಧಿಕಾರಿಗಳು ಭಾನುವಾರ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಆಗಮನದ ಹಿನ್ನೆಲೆ ಬೆಳಗ್ಗೆಯಿಂದಲೇ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಿ ಹಾಕುವ ಕೆಲಸವನ್ನು ಭರದಿಂದ ಮಾಡಿಸಿದರು.ಇದನ್ನು ಕಂಡ ಪಟ್ಟಣದ ನಿವಾಸಿಗಳು ನಮ್ಮ ಪಟ್ಟಣಕ್ಕೆ ಹೀಗೆ ದಿನಾಲು ಸಚಿವರು ಬರುತ್ತಿರಬೇಕು. ಅಂದಾಗ ಎಲ್ಲಾ ಕೆಲಸಗಳು ಸರಿಯಾಗಿ ನಡೆಯುತ್ತವೆ ಎಂದು ಮಾತನಾಡಿಕೊಂಡರು.