ಜೋಯಿಡಾ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಪ್ರವಾಸಕ್ಕೆ ತೆರಳಿದ್ದ 40 ವಿದ್ಯಾರ್ಥಿಗಳಿಗೆ ಗಾಯ

| Published : Dec 09 2024, 12:48 AM IST

ಜೋಯಿಡಾ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಪ್ರವಾಸಕ್ಕೆ ತೆರಳಿದ್ದ 40 ವಿದ್ಯಾರ್ಥಿಗಳಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಬಸ್ಸಿನಲ್ಲಿ ಸುಮಾರು 50 ವಿದ್ಯಾರ್ಥಿಗಳಿದ್ದರು. ಆ ಪೈಕಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯವಾಗಿವೆ.

ದಾಂಡೇಲಿ: ಜೋಯಿಡಾ ತಾಲೂಕಿನ ಗಣೇಶಗುಡಿಯ ಹತ್ತಿರ ಖಾಸಗಿ ಬಸ್ಸೊಂದು ಪಲ್ಟಿಯಾಗಿ 40ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆದಿದೆ.ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸೇಂಟ್ ಅಂತೋನಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮೂರು ಖಾಸಗಿ ಬಸ್ಸಿನಲ್ಲಿ ದಾಂಡೇಲಿ, ಜೋಯಿಡಾಕ್ಕೆ ಪ್ರವಾಸಕ್ಕಾಗಿ ಆಗಮಿಸಿದ್ದರು. ಮೌಳಂಗಿ ಹತ್ತಿರದ ಹೋಂ ಸ್ಟೇಯೊಂದರಲ್ಲಿ ತಂಗಿದ್ದ ಈ ತಂಡ ಭಾನುವಾರ ಬೆಳಗ್ಗೆ ಗಣೇಶಗುಡಿಗೆ ತೆರಳಿ ಅಲ್ಲಿ ಜಲಸಾಹಸ ಚಟುವಟಿಕೆ ನಡೆಸಿ ವಾಪಸ್‌ ಬರುತ್ತಿದ್ದಾಗ ಗಣೇಶಗುಡಿ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.ಬಸ್ಸಿನಲ್ಲಿ ಸುಮಾರು 50 ವಿದ್ಯಾರ್ಥಿಗಳಿದ್ದರು. ಆ ಪೈಕಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯವಾಗಿವೆ. ತಕ್ಷಣವೇ ಸ್ಥಳೀಯ ಗ್ರಾಪಂ ಅಧ್ಯಕ್ಷ ಅರುಣ್ ಭಗವತಿರಾಜ ಹಾಗೂ ಗ್ರಾಪಂ ಸದಸ್ಯರು, ಸ್ಥಳೀಯರು ಸೇರಿ ಬಸ್ಸಿನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಹೊರತೆಗೆದಿದ್ದಾರೆ. ಗಾಯಗೊಂಡವರನ್ನು ಎರಡು ಆ್ಯಂಬುಲೆನ್ಸ್ ಹಾಗೂ ಇನ್ನಿತರ ಖಾಸಗಿ ವಾಹನಗಳಲ್ಲಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆ ನೀಡಿದ ಬಳಿಕ ವಿದ್ಯಾರ್ಥಿಗಳನ್ನು ಖಾಸಗಿ ವಾಹನದ ಹೊಸದುರ್ಗಕ್ಕೆ ಕಳುಹಿಸಿಕೊಡಲಾಗಿದೆ.

ಶಾಸಕರ ಕಾರಿಗೆ ಹಿಂದಿನಿಂದ ಬೈಕ್‌ ಡಿಕ್ಕಿ: ಸವಾರನಿಗೆ ಗಂಭೀರ ಗಾಯ

ಹೊನ್ನಾವರ: ಶಾಸಕ ದಿನಕರ ಶೆಟ್ಟಿ ಅವರು ಪ್ರಯಾಣಿಸುತ್ತಿದ್ದ ಕಾರಿನ ಹಿಂಬದಿಗೆ ಬೈಕ್‌ ಡಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಕರ್ಕಿನಾಕ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ ನಡೆದಿದೆ.ಹಳದಿಪುರದ ಬಸ್ರಾಣಿ ನಿವಾಸಿ ನಾಗಪ್ಪ ಗೌಡ ಗಂಭೀರ ಗಾಯಗೊಂಡ ವ್ಯಕ್ತಿ. ಶಾಸಕರಿದ್ದ ಕಾರು ಚಾಲಕ ವಾಹನವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಾಗ ಬೈಕ್‌ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಶಾಸಕರೇ ಆತನನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಹೊನ್ನಾವರದ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಹೊನ್ನಾವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.