ಸಾರಾಂಶ
ಗದಗ: ಸತತ 23 ದಿನಗಳಿಂದ ನಡೆದ ರೈತರ ಅಹೋರಾತ್ರಿ ಧರಣಿ ಸ್ಥಳಕ್ಕೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಭೇಟಿ ನೀಡಿ ರೈತರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿ,ನೈಜ ಸಾಗುವಳಿದಾರರಿಗೆ ಹಕ್ಕುಪತ್ರ ಹಾಗೂ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.
ಉತ್ತರ ಕರ್ನಾಟಕ ಮಹಾಸಭಾದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.19 ರಂದು ಶಿರಹಟ್ಟಿ ಪಟ್ಟಣದ ಫಕೀರೇಶ್ವರ ಮಠದಿಂದ ಆರಂಭವಾದ ಬೃಹತ್ ಪ್ರತಿಭಟನಾ ರ್ಯಾಲಿಯೊಂದಿಗೆ ಪ್ರಾರಂಭವಾದ ಪಾದಯಾತ್ರೆಯ ಬಳಿಕ ಜಿಲ್ಲಾಡಳಿತ ಭವನದ ಎದುರು 23 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಯುತ್ತಿತ್ತು.ಉತ್ತರ ಕರ್ನಾಟಕ ಮಹಾಸಭಾದ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ತಲೆತಲಾಂತರಗಳಿಂದ ರೈತರು ಅರಣ್ಯ ಜಮೀನುಗಳನ್ನು ಉಪಜೀವನಕ್ಕಾಗಿ ಸಾಗುವಳಿ ಮಾಡಿಕೊಂಡು ಬಗರ್‌ಹುಕುಂ ಕೃಷಿ ಮಾಡುತ್ತಿದ್ದಾರೆ. ಆದರೆ ಸರ್ಕಾರ ಹಕ್ಕುಪತ್ರ ನೀಡದೆ ಕಿರುಕುಳ ನೀಡುತ್ತಿದೆ. ನಾಗಾವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕಾಗಿ ಸರ್ವೇ ನಂ.143/2ಬಿ/ಬಿ/1ಬಿ/2ರ 124 ಎಕರೆ ಮತ್ತು ಸರ್ವೇ ನಂ.179/ಬಿ ರ 128 ಎಕರೆ 35 ಗುಂಟೆ ಜಮೀನುಗಳನ್ನು ನಾಲ್ಕು ತಲೆಮಾರುಗಳಿಂದ ನೂರಾರು ಕುಟುಂಬಗಳು ಬಳಸಿಕೊಂಡು ಬಂದಿದ್ದರೂ ಯಾವುದೇ ಪರಿಹಾರ ನೀಡದೆ ಒಕ್ಕಲಿಬ್ಬಿಸಿರುವುದು ಖಂಡನೀಯ. ಈ ಎಲ್ಲ ಸಮಸ್ಯೆಗಳಿಗೆ ಸಚಿವರು ಹಿಂದೆಯೇ ಭರವಸೆ ನೀಡಿದಂತೆ ಈಗ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಸಚಿವರ ಭರವಸೆ:ರೈತರ ಬೇಡಿಕೆಗಳಿಗೆ ಸ್ಪಂದಿಸಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಈ ಹೋರಾಟ ಮೊದಲ ಬಾರಿಯದ್ದಲ್ಲ. ಹಿಂದೆಯೂ ನೀವು ಹೋರಾಟ ಮಾಡಿದಾಗ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಆದರೆ ಜಿಲ್ಲೆಯಲ್ಲಿ ಮೂರನೇ ಬಾರಿ ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ. ಎಡಿಸಿ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡಲು ಸೂಚಿಸಲಾಗಿತ್ತು, ಆದರೆ ವರದಿ ಇನ್ನೂ ಸಿಕ್ಕಿಲ್ಲ. ಈಗ ಜಿಲ್ಲಾಧಿಕಾರಿಗಳು, ಎಡಿಸಿ, ಎಸಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮಿತಿಯು ಪ್ರತಿಯೊಬ್ಬ ರೈತರ ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಪರಿಶೀಲಿಸಿ ಪರಿಹಾರ ಹಾಗೂ ಹಕ್ಕುಪತ್ರ ಕುರಿತು ಅ. 2 ರೊಳಗೆ ವರದಿ ಸಲ್ಲಿಸಬೇಕು. ಬಳಿಕ ರೈತರೊಂದಿಗೆ ಸಭೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಸೂಚಿಸಿದರು.ವಿಂಡ್ ಪವರ್ ಫ್ಯಾನ್ ಕಂಪನಿಗಳು ಜಿಲ್ಲೆಯಲ್ಲಿ ಜಮೀನು ಖರೀದಿಸುತ್ತಿದ್ದು, ಏಜೆಂಟರು ರೈತರಿಗೆ ಕಡಿಮೆ ಹಣ ನೀಡಿ ಮೋಸ ಮಾಡುವ ಘಟನೆಗಳು ನಡೆದಿವೆ. ಕೆಲವರಿಗೆ ಹೆಚ್ಚಾಗಿ ಹಣ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ರೈತರು ಜಾಗೃತರಾಗಿರಿ. ನಿಮ್ಮ ಜಮೀನಿನ ನಿಜವಾದ ಮೌಲ್ಯ ತಿಳಿಯಲು ಜಿಲ್ಲಾಧಿಕಾರಿಗಳ ಬಳಿ ಹೋಗಿ, ಮೋಸಕ್ಕೆ ಒಳಗಾಗಬೇಡಿ ಎಂದು ಸಚಿವರು ಎಚ್ಚರಿಕೆ ನೀಡಿದರು.
ಈ ವೇಳೆ ಡಿಸಿ,ಎಡಿಸಿ, ಎಸಿ, ಎಸ್‌ಪಿ, ಸಿದ್ದು ಪಾಟೀಲ, ಅಪ್ಪಣ್ಣ ಇನಾಮತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬರ್ಚಿ, ಬಿ.ಎಸ್. ಚಿಂಚಲಿ, ಪ್ರೋ. ಎನ್.ಟಿ. ಪೂಜಾರ, ಸುರೇಶ ಮಹಾರಾಜ, ಫಿರೋಜ್ ಸದಾಫ್, ಚಂಬಣ್ಣ ಚನ್ನಪಟ್ಟಣ, ನಾಮದೇವ ಸೇರಿದಂತೆ ಅನೇಕ ರೈತರು, ಮಹಿಳೆಯರು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.ರೈತರಿಗೆ ಉಚಿತ ಆರೋಗ್ಯ ತಪಾಸಣೆ:
23 ದಿನಗಳಿಂದ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರು ಮತ್ತು ಮಹಿಳೆಯರಿಗೆ ಬುಧವಾರ ಸಚಿವರ ಭೇಟಿಯ ನಂತರ ಡಿಜಿಎಂ ಆಯುರ್ವೇದಿಕ್ ಕಾಲೇಜಿನ ವೈದ್ಯರು ಉಚಿತ ಆರೋಗ್ಯ ತಪಾಸಣೆ ನಡೆಸಿದರು.