ಚಳ್ಳಕೆರೆ ನಗರದ ಬಾಪೂಜಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪೋಕ್ಸೋ ಕಾಯ್ದೆ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ನ್ಯಾಯಾಧೀಶರು ಪ್ರಶಂಸನಾ ಪತ್ರವನ್ನು ನೀಡಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕಳೆದ ಹಲವಾರು ವರ್ಷಗಳಿಂದ ಮಹಿಳಾ ಸಮುದಾಯಕ್ಕೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಜಾರಿಯಾದ ಪೋಕ್ಸೋ ಕಾಯ್ದೆ ಜಾರಿಯಲಿದ್ದರೂ ಸಹ ಅಪ್ರಾಪ್ತ ಬಾಲಕಿಯರು, ಯುವತಿಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನೋವಿನ ಸಂಗತಿ. ಇದನ್ನು ಸಂಪೂರ್ಣವಾಗಿ ಬೇರು ಸಹಿತ ಕಿತ್ತುಹಾಕಲು ಪೊಲೀಸ್, ನ್ಯಾಯಾಂಗ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಬೇಕಂದು ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಶಮೀರ್ ಪಿ.ನಂದ್ಯಾಲ್ ತಿಳಿಸಿದರು.ಶನಿವಾರ ಬಾಪೂಜಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪೋಕ್ಸೋ ಕಾಯ್ದೆ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ 210 ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಿ ಮಾತನಾಡಿದರು.
ವಿಶೇಷವಾಗಿ ವಿದ್ಯಾರ್ಥಿನಿಯರಲ್ಲಿ ಹೆಚ್ಚು ಜಾಗೃತಿ ಮೂಡಿಸಲು ಹಾಗೂ ಅವರು ಈ ವಿಚಾರದಲ್ಲಿ ಮತ್ತಷ್ಟು ಜಾಗೃತರಾಗುವ ದೃಷ್ಠಿಯಿಂದ ನ್ಯಾಯಾಂಗ ಇಲಾಖೆ, ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ತಾಲೂಕಿನಾದ್ಯಂತ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಈ ಪ್ರಬಂಧ ಸ್ಪರ್ಧೆ ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ತುಂಬಲಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಪೋಕ್ಸೋ ಕಾಯ್ದೆ ಮತ್ತು ಅದರ ಪರಿಣಾಮ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುವ ವಿಚಾರ ತಿಳಿದಾಗ ಒಂದು ರೀತಿ ಎಲ್ಲರಿಗೂ ಸಂತೋಷವೆನ್ನಿಸಿತು. ಇಂದಿಗೂ ಇಂತಹ ಪ್ರಕರಣಗಳಲ್ಲಿ ಶೋಷಣೆಗೆ ಒಳಗಾದವರು ದೈರ್ಯವಾಗಿ ಬಂದು ಮಾಹಿತಿ ನೀಡುತ್ತಿಲ್ಲ. ಇನ್ನೂ ಅವರಲ್ಲಿ ಆತಂಕ ಮನೆ ಮಾಡಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದು, ನಿರೀಕ್ಷೆಗೂ ಮೀರಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಭಾಗವಹಿಸಿದ 103 ಶಾಲೆಯ 210 ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಣೆ ಮಾಡಲಾಗಿದೆ. ಪ್ರಬಂಧ ಸ್ಪರ್ಧೆಯ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಪ್ರಥಮ, ದ್ವಿತೀಯ ಶ್ರೇಣಿ ಪಡೆದವರು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ ಎಂದರು.
ಜೆಎಂಎಫ್‌ಸಿ ನ್ಯಾಯಾಧೀಶೆ ಎಚ್.ಆರ್.ಹೇಮಾ ಮಾತನಾಡಿ, ಸರ್ಕಾರ ಕಾನೂನನ್ನು ರೂಪಿಸಿ ಅಪ್ರಾಪ್ತರನ್ನು ರಕ್ಷಿಸಲು ಮುಂದಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕಾನೂನು ಜಾರಿಯಾಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಅಪ್ರಾಪ್ತರಲ್ಲಿ ಅವಮಾನವಾಗುತ್ತದೆ ಎಂಬ ಆತಂಕ ದೂರವಾಗಿಲ್ಲ. ಇದರ ಪ್ರಯೋಜವನ್ನು ಪಡೆಯುವ ದುಷ್ಕರ್ಮಿಗಳು ಮತ್ತೆ ಕೃತ್ಯವೆಸಗುತ್ತಾರೆ. ಆದ್ದರಿಂದ ಈ ಕಾಯ್ದೆ ಪರಿಣಾಮವಾಗಿ ಜಾರಿಯಾದರೆ ಮಾತ್ರ ಅಪ್ರಾಪ್ತರು ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವೆಂದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಪಿಎಸ್‌ಐ ಈರೇಶ್, ಹೆಚ್ಚುತ್ತಿರುವ ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಗಟ್ಟಲು 2012ರಲ್ಲೇ ಈ ಕಾನೂನನ್ನು ಜಾರಿಗೆ ತಂದಿದೆ. ಹಲವಾರು ಪ್ರಕರಣಗಳಲ್ಲಿ ಈ ಕಾಯ್ದೆ ಪ್ರಕಾರ ತನಿಖೆ ನಡೆಸಿ ಶಿಕ್ಷೆಯನ್ನು ನೀಡಲಾಗಿದೆ. ಪೊಲೀಸ್ ದೂರವಾಣಿ ಸಂಖ್ಯೆ 112ನ್ನು ಇಂತಹ ಸಂದರ್ಭದಲ್ಲಿ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ವಕೀಲರಾದ ಕುರುಡಿಹಳ್ಳಿ ಶ್ರೀನಿವಾಸ್, ಓಂಕಾರಪ್ಪ, ಟಿ.ಬಿ.ಬೋರಯ್ಯ, ಜಿ.ಒ.ಸುಮಲತ, ಡಿ.ಶಿಲ್ಪ, ತೇಜಸ್ವಿನಿ, ನಾಗರತ್ನ, ಇಸಿಒ ಲಕ್ಷ್ಮಿ ಕಾಂತರೆಡ್ಡಿ, ಶಿವಪ್ಪ, ಸಿಆರ್‌ಪಿಗಳಾದ ಡಿ.ಮಹಂತೇಶ್, ಮೂಡ್ಲಪ್ಪ, ಕೆಂಚವೀರನಹಳ್ಳಿ ಎನ್.ಮಲ್ಲೇಶ್, ಸುರೇಶ್.ಸಿ.ವಿ.ತಿಪ್ಪೇಸ್ವಾಮಿ, ವಿಷ್ಣುವರ್ಧನ, ಈಶ್ವರಪ್ಪ ಮುಂತಾದವರು ಭಾಗವಹಿಸಿದ್ದರು.