ಫೈನಾನ್ಸ್‌ನಲ್ಲಿ ಹಣ ದುರುಪಯೋಗ: ಮೂವರ ಮೇಲೆ ಕೇಸ್‌

| Published : Jun 16 2024, 01:55 AM IST / Updated: Jun 16 2024, 07:05 AM IST

ಸಾರಾಂಶ

ಉಡುಪಿ ಜಿಲ್ಲೆಯ ಕುಮಧಾಪುರ ನಿವಾಸಿ ರಾಘವೇಂದ್ರ ರಾಜೀವ ಸ್ವಾಮಿ, ಭಟ್ಕಳ ಬೆಳ್ನಿ ನಿವಾಸಿ ಆನಂದ ಮಾದೇವ ನಾಯ್ಕ ಹಾಗೂ ಪಟ್ಟಣದ ಆಸರಕೇರಿ ನಿವಾಸಿ ರಾಘವೇಂದ್ರ ನಾಯ್ಕ ಆರೋಪಿಗಳಾಗಿದ್ದಾರೆ.

ಭಟ್ಕಳ: ಇಲ್ಲಿನ ಶ್ರೀರಾಮ್ ಫೈನಾನ್ಸ್ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೂವರು ನೌಕರರು ಶಾಖೆಯ ಸುಮಾರು ₹89 ಲಕ್ಷಕ್ಕೂ ಅಧಿಕ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪದ ಹಿನ್ನೆಲೆ ಮೂವರ ಮೇಲೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಮಧಾಪುರ ನಿವಾಸಿ ರಾಘವೇಂದ್ರ ರಾಜೀವ ಸ್ವಾಮಿ, ಭಟ್ಕಳ ಬೆಳ್ನಿ ನಿವಾಸಿ ಆನಂದ ಮಾದೇವ ನಾಯ್ಕ ಹಾಗೂ ಪಟ್ಟಣದ ಆಸರಕೇರಿ ನಿವಾಸಿ ರಾಘವೇಂದ್ರ ನಾಯ್ಕ ಆರೋಪಿಗಳಾಗಿದ್ದಾರೆ. 

ಆರೋಪಿತರು ಶಾಖೆಯಲ್ಲಿ ಕೆಲಸ ಮಾಡುವ ಅವಧಿಯಲ್ಲಿ ಫೈನಾನ್ಸಿನಲ್ಲಿ ಸಾಲ ಪಡೆದ ಕೆಲವು ಸಾಲಗಾರರಿಗೆ ಸಂಬಂಧಿಸಿದ ವಾಹನಗಳ ಸಾಲವನ್ನು ಪೂರ್ತಿಯಾಗಿ ಚುಕ್ತಾಗೊಳಿಸಿ ಕಂಪನಿಯ ಹೈಪೋತಿಕೇಶನ್ ಸರ್ಟಿಫಿಕೇಟ್‌ ತಯಾರು ಮಾಡಿ ಕಂಪನಿಯ ಶೀಲ್ ಅನ್ನು ಬಳಸಿ ಅದಕ್ಕೆ ಮುಖ್ಯ ಕಚೇರಿಯಿಂದ ಸಹಿ ಪಡೆಯದೆ ಅವರೇ ಅದಕ್ಕೆ ನಕಲಿ ಸಹಿ ಮಾಡಿ ಆರ್‌ಟಿಒದಲ್ಲಿ ನೀಡಿ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಲು ಅನುಕೂಲ ಮಾಡಿಕೊಟ್ಟಿರುವುದು ಮತ್ತು ಶಾಖೆಯಲ್ಲಿ ಪಡೆದ ಸಾಲ ಮರುಪಾವತಿ ಮಾಡದೇ ಇರುವ ಗ್ರಾಹಕರ ವಾಹನಗಳನ್ನು ಮೇಲಾಧಿಕಾರಿಗಳ ಅನುಮೋದನೆಯನ್ನು ಪಡೆಯದೇ ತಮ್ಮ ವಶಕ್ಕೆ ಪಡೆದುಕೊಂಡು ಈ ವಾಹನವನ್ನು ಶಾಖೆಯ ನಿಯಮಾವಳಿಗಳನ್ನು ಪಾಲಿಸದೇ ಮಾರಾಟ ಮಾಡಿ ಬಂದ ಹಣವನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದಾರೆ.ಇಲ್ಲಿಯ ತನಕ ಮೂವರು ಸೇರಿ ₹89.79 ಲಕ್ಷ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಶ್ರೀರಾಮ್ ಫೈನಾನ್ಸ್ ನವೀನ ಪೂಜಾರಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಆನಂದ ಮಾದೇವ ನಾಯ್ಕ ಹಾಗೂ ರಾಘವೇಂದ್ರ ನಾಯ್ಕ ಅವರನ್ನು ಬಂಧಿಸಿರುವ ಪೊಲೀಸರು, ಇನ್ನೊಬ್ಬ ಆರೋಪಿಗಾಗಿ ಪತ್ತೆ ಕಾರ್ಯ ನಡೆಸಿದ್ದು, ತನಿಖೆ ಮುಂದುವರಿದಿದೆ.

ವಾಯವ್ಯ ಸಾರಿಗೆ ಡಿಸಿ, ಡಿಪೋ ಮ್ಯಾನೇಜರ್‌ಗಳಿಗೆ ದಂಡ

ಕಾರವಾರ: ಹಿರಿಯ ನಾಗರಿಕರ ರಿಯಾಯಿತಿ ನೀಡದೇ ನಿರ್ವಾಹಕರು ಸೇವಾ ನ್ಯೂನತೆ ಎಸಗಿರುವ ಪ್ರಕರಣದಲ್ಲಿ ನಿರ್ವಾಹಕರಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಿ, ಕಿರಿಯ ನೌಕರರ ಬಗ್ಗೆ ನಿರ್ಲಕ್ಷ್ಯ ತೋರಿದ ಎನ್‌ಡಬ್ಲ್ಯುಕೆಆರ್‌ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕುಮಟಾ ಹಾಗೂ ದಾಂಡೇಲಿ ಡಿಪೋ ಮ್ಯಾನೇಜರ್‌ಗಳಿಗೆ ₹3 ಸಾವಿರ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ದಾಂಡೇಲಿಯ ದಾಮೋದರ ಎಂಬವರು ತಮಗೆ ಹಿರಿಯ ನಾಗರಿಕರ ರಿಯಾಯಿತಿ ಟಿಕೆಟ್ ನೀಡಲಿಲ್ಲವೆಂದು ನಿರ್ವಾಹಕರು ಸೇರಿದಂತೆ ಎನ್‌ಡಬ್ಲ್ಯುಕೆಆರ್‌ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕುಮಟಾ ಹಾಗೂ ದಾಂಡೇಲಿ ಡಿಪೋ ಮ್ಯಾನೇಜರ್ ವಿರುದ್ಧ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. ಈ ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಡಾ. ಮಂಜುನಾಥ ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ ಆದೇಶ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮುಂಚೆ ವಿಚಾರಣೆ ನಡೆಸಿದ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಇರುವುದರಿಂದ ಮತ್ತು ತಮ್ಮ ಕೆಳಗಿನ ನೌಕರರ ಬಗೆಗೆ ನಿರ್ಲಕ್ಷ್ಯ ತೋರಿರುವುದನ್ನು ಗಮನಿಸಿದ ಆಯೋಗವು ಪ್ರಕರಣದ ನಿರ್ವಾಹಕರಿಗೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಅವರನ್ನು ಪ್ರಕರಣದಿಂದ ವಜಾಗೊಳಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕುಮಟಾ ಹಾಗೂ ದಾಂಡೇಲಿ ಡಿಪೋ ಮ್ಯಾನೇಜರ್‌ಗಳ ವಿರುದ್ಧ ಆದೇಶಿಸಿ ದೂರುದಾರರಿಗೆ ಸಿಗಬೇಕಾದ ಹಿರಿಯ ನಾಗರಿಕರ ರಿಯಾಯಿತಿಯ ಹತ್ತು ಪಟ್ಟು ಮೊತ್ತ ಪಾವತಿಸುವುದರೊಂದಿಗೆ ಪ್ರಕರಣದ ಖರ್ಚು- ವೆಚ್ಚವಾಗಿ ₹3 ಸಾವಿರ ಈ ಎಲ್ಲ ಅಧಿಕಾರಿಗಳು ಜಂಟಿಯಾಗಿ ಮತ್ತು ವೈಯಕ್ತಿಕವಾಗಿ ಪಾವತಿಸುವಂತೆ ಆಯೋಗ ತನ್ನ ಆದೇಶದಲ್ಲಿ ಹೇಳಿದೆ.

ದೂರುದಾರರ ಪರ ನ್ಯಾಯವಾದಿ ದರ್ಶನ ಗೌಡ ವಕಾಲತ್ತು ನಡೆಸಿದ್ದರು.