ಶಾಸಕ ನಾರಾ ಭರತ್ ರೆಡ್ಡಿ ಅವರ ಜನ್ಮದಿನ ಅಂಗವಾಗಿ ನಗರದಲ್ಲಿ ವಿವಿಧ ಸಮಾಜಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.

ಬಳ್ಳಾರಿ: ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಜನ್ಮದಿನ ಅಂಗವಾಗಿ ನಗರದಲ್ಲಿ ವಿವಿಧ ಸಮಾಜಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.ತಾಳೂರು ರಸ್ತೆಯ ನಾಗಪ್ಪಕಟ್ಟೆ ಪ್ರದೇಶದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ಭರತ್‌ ರೆಡ್ಡಿ, ಬಳ್ಳಾರಿ ಸಮಗ್ರ ಅಭಿವೃದ್ಧಿಯ ಗುರಿಯಾಗಿರಿಸಿಕೊಂಡು ನಾನಾ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಪಾರದರ್ಶಕ ಆಡಳಿತ ನೀಡುವುದು, ನಗರ ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ನಮ್ಮ ಆದ್ಯತೆಯಾಗಿದೆ. ನಗರಕ್ಕೆ ನಿರಂತರ ನೀರು ಪೂರೈಕೆ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ತುಂಗಭದ್ರಾ ನದಿಯಿಂದ ನಗರಕ್ಕೆ ನೀರು ಪೂರೈಸುವ ಯೋಜನೆಯನ್ನು ₹11,200 ಕೋಟಿ ವೆಚ್ಚದಲ್ಲಿ ರೂಪಿಸಲಾಗಿದೆ.

ನಗರದ ರಸ್ತೆ ಅಗಲೀಕರಣ, ಸುಂದರೀಕರಣಕ್ಕಾಗಿ ಗಮನ ನೀಡಲಾಗಿದೆ. ಬಳ್ಳಾರಿಯ ಜನಸಂಖ್ಯೆ ದಿನದಿನಕ್ಕೆ ಹೆಚ್ಚಾಗುತ್ತಿದ್ದು ನಗರದ ನಿವಾಸಿಗಳ ಅನುಕೂಲಕ್ಕಾಗಿ ಅನೇಕ ಯೋಜನೆ ರೂಪಿಸಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಸ್ಥಳೀಯ ಮುಖಂಡರಾದ ಪೂಜಾರಿ ಗಾದೆಪ್ಪ, ಸೋಮಶೇಖರ್, ಪೋಲಕ್ ರೆಡ್ಡಿ ಮತ್ತಿತರರಿದ್ದರು. ಶಾಸಕ ಭರತ್ ರೆಡ್ಡಿಯವರ ಜನ್ಮದಿನ ಹಿನ್ನೆಲೆಯಲ್ಲಿ ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಮೇಯರ್ ರಾಜೇಶ್ವರಿ ಅವರು ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು, ಶಾಸಕ ಭರತ್ ರೆಡ್ಡಿ ಬಳ್ಳಾರಿ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಶಾಸಕರಾಗಿ ಜನಸೇವೆಗೆ ಮುಂದಾಗಿದ್ದಾರೆ. ಬಳ್ಳಾರಿ ಈ ಹಿಂದೆ ಎಂದೂ ಕಾಣದ ಅಭಿವೃದ್ಧಿ ಕಾಣುತ್ತಿದೆ ಎಂದು ಹೇಳಿದರು. ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾದ ಧರ್ಮಶ್ರೀ, ಸಲ್ಮಾ, ಕಾಲೇಜು ಉಪನ್ಯಾಸಕರು ಹಾಗೂ ಸಿಬ್ಬಂದಿ ಹಾಜರಿದ್ದರು. ಶಾಸಕ ಭರತ್ ರೆಡ್ಡಿ ಜನ್ಮದಿನ ಅಂಗವಾಗಿ ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾದಲ್ಲಿ ಅನ್ನದಾನ ಹಮ್ಮಿಕೊಳ್ಳಲಾಗಿತ್ತು. ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಮುಖಂಡ ಹಾಗೂ ಕಾಂಗ್ರೆಸ್ ಯುವ ಮುಖಂಡ ಚಾನಾಳ್ ಶೇಖರ್ ಅವರು ಚಾಲನೆ ನೀಡಿದರು.

ಶಾಸಕರ ಜನ್ಮದಿನ ಅಂಗವಾಗಿ ಕೆಪಿಸಿಸಿ ಮಾಧ್ಯಮ ವಕ್ತಾರ ಹಾಗೂ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ವೆಂಕಟೇಶ್ ಹೆಗಡೆ ಅವರು ನಗರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು. ಬಾಪೂಜಿ ನಗರದಲ್ಲಿನ ವೆಂಕಟೇಶ್ ಹೆಗಡೆ ನಿವಾಸದಿಂದ ಶುರುಗೊಂಡ ರ್ಯಾಲಿ ನಗರದ ಪ್ರಮುಖ ಬೀದಿಗಳ ಮೂಲಕ ಗಾಂಧಿನಗರದಲ್ಲಿರುವ ಶಾಸಕರ ಕಚೇರಿ ತಲುಪಿತು. ಬಳಿಕ ವೆಂಕಟೇಶ್ ಹೆಗಡೆ ಹಾಗೂ ಬೆಂಬಲಿಗರು ಶಾಸಕರಿಗೆ ಜನ್ಮದಿನದ ಶುಭ ಹಾರೈಸಿದರು. ಎಸ್ಪಿ ಡಾ.ಶೋಭಾರಾಣಿ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಎ.ಮಾನಯ್ಯ, ಸೇರಿದಂತೆ ಅನೇಕ ನಾಯಕರು ಶಾಸಕರಿಗೆ ಶುಭ ಹಾರೈಸಿದರು.

1 ಲಕ್ಷಕ್ಕೂ ಅಧಿಕ ಕಿಚನ್‌ಸೆಟ್ ವಿತರಣೆ: ನಗರ ಶಾಸಕ ನಾರಾ ಭರತ್ ರೆಡ್ಡಿ ಜನ್ಮದಿನ ಅಂಗವಾಗಿ ನಗರದ ನಿವಾಸಿಗಳಿಗೆ ಕಿಚನ್‌ಸೆಟ್‌ ವಿತರಣೆ ಮಾಡಲಾಯಿತು.

ಈ ಹಿಂದೆ ಪ್ರತಿ ಮನೆಗೂ ಕುಕ್ಕರ್ ನೀಡಲಾಗಿತ್ತು. ಈ ಬಾರಿ ಕಿಚನ್‌ಸೆಟ್ ನೀಡಲಾಗುತ್ತಿದೆ. ನಗರದ 1 ಲಕ್ಷ 10 ಸಾವಿರ ಜನರಿಗೆ ಕಿಚನ್ ಸೆಟ್‌ ವಿತರಣೆ ಮಾಡಲಾಗುತ್ತಿದೆ. ನಾನೇ ಮನೆ ಮನೆಗೆ ತೆರಳಿ ಕಿಚನ್‌ಸೆಟ್ ಹಂಚುವೆ. ಜನರ ಆಶೀರ್ವಾದಿಂದ ಪ್ರತಿವರ್ಷವೂ ಜನರಿಗೆ ಉಡುಗೊರೆ ನೀಡಲಾಗುವುದು ಎಂದು ಶಾಸಕ ಭರತ್ ರೆಡ್ಡಿ ತಿಳಿಸಿದರು. ರಾಯಲ್ ವೃತ್ತ ಹಾಗೂ ವಾಲ್ಮೀಕಿ ವೃತ್ತವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಶೀಘ್ರವೇ ಉದ್ಘಾಟಿಸಲಾಗುವುದು. ನಗರದ ಎಲ್ಲ ಕಡೆ ಉತ್ತಮ ರಸ್ತೆಗಳನ್ನು ನಿರ್ಮಿಸಲು ಕ್ರಮ ವಹಿಸಲಾಗಿದ್ದು, ಇನ್ನಾರು ತಿಂಗಳಲ್ಲಿ ಅತ್ಯುತ್ತಮ ರಸ್ತೆಗಳಾಗಲಿವೆ ಎಂದು ಭರತ್ ರೆಡ್ಡಿ ತಿಳಿಸಿದರು.