ಬಳ್ಳಾರಿಯಲ್ಲಿ ಸಮಾಜಮುಖಿ ನಡಿಗೆ; ಗುಡಾನಗರ ಅಲೆಮಾರಿಗಳ ಭೇಟಿ ಮಾಡಿದ ಸದಸ್ಯರು

| Published : Oct 26 2025, 02:00 AM IST

ಬಳ್ಳಾರಿಯಲ್ಲಿ ಸಮಾಜಮುಖಿ ನಡಿಗೆ; ಗುಡಾನಗರ ಅಲೆಮಾರಿಗಳ ಭೇಟಿ ಮಾಡಿದ ಸದಸ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಸಂಸ್ಕೃತಿಯನ್ನು ಬೇರೆ ಬೇರೆ ಆಯಾಮಗಳಲ್ಲಿ ವೀಕ್ಷಿಸುವುದು ಒಂದು ವಿಶೇಷ ಅನುಭವವಾಗಿದೆ.

ಬಳ್ಳಾರಿ: ನಡೆದು ನೋಡು ಕರ್ನಾಟಕ ಎಂಬ ಧ್ಯೇಯದೊಂದಿಗೆ ಸಮಾಜಮುಖಿ ಮಾಸ ಪತ್ರಿಕೆ ಕ್ರಿಯಾಶೀಲ ಮನಸುಗಳೊಂದಿಗೆ ಕಳೆದ ಎಂಟು ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ ಸಮಾಜಮುಖಿ ನಡಿಗೆಗೆ ಬಳ್ಳಾರಿಯಲ್ಲಿ ಶುಕ್ರವಾರ ಚಾಲನೆ ಸಿಕ್ಕಿತು.

ಇಲ್ಲಿನ ರಾಘವ ಕಲಾ ಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಮಾಜಮುಖಿ ನಡಿಗೆಯ ಆಯೋಜಕಿ ಶುಭಾ ಅರಸ್ ಅವರು ರಾಘವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇದೊಂದು ವಿಭಿನ್ನ ಪ್ರವಾಸವಾಗಿದೆ. ಕರ್ನಾಟಕದ ಸಂಸ್ಕೃತಿಯನ್ನು ಬೇರೆ ಬೇರೆ ಆಯಾಮಗಳಲ್ಲಿ ವೀಕ್ಷಿಸುವುದು ಒಂದು ವಿಶೇಷ ಅನುಭವವಾಗಿದೆ. ಕರ್ನಾಟಕವನ್ನು ಬಹುತ್ವದ ನೆಲೆಯಲಿ ಅಂದರೆ ಸಾಂಸ್ಕೃತಿಕ, ಐತಿಹಾಸಿಕ, ಪ್ರಾಕೃತಿಕ ಕಲೆ ವಾಸ್ತುಶಿಲ್ಪ ಚಿತ್ರಕಲೆ, ವಿವಿಧ ಬುಡಕಟ್ಟು ಜನರ ಸಂಸ್ಕೃತಿ ಇವುಗಳ ಜೊತೆಗೆ, ಸ್ಥಳೀಯ ಕಲೆ ಪ್ರಾದೇಶಿಕ ಮಹತ್ವ, ಭಾಷಾ ಸೊಗಡು ಇವುಗಳನ್ನು ತಿಳಿಯುವುದು ಸಮಾಜಮುಖಿ ನಡಿಗೆಯ ಉದ್ದೇಶವಾಗಿದೆ. ಸಾಹಿತ್ಯ, ಸಾಂಸ್ಕೃತಿಕ ಹಿರಿಮೆಗೆ ಹೆಸರಾಗಿರುವ ಬಳ್ಳಾರಿಯಲ್ಲಿ ಸಮಾಜಮುಖಿ ನಡಿಗೆ ಆಯೋಜನೆ ಮಾಡಿರುವುದು ನಮಗೂ ಹೆಚ್ಚು ಖುಷಿ ನೀಡಿದೆ ಎಂದರಲ್ಲದೆ, ನಡಿಗೆ ಯಶಸ್ವಿಯಾಗಲಿ ಎಂದು ಹಾರೈಸಿದರು. ಬಳ್ಳಾರಿ ರಾಘವರ ಕುರಿತು ಲೇಖಕ ಎ.ಎಂ.ಪಿ ವೀರೇಶಸ್ವಾಮಿ ಮಾಹಿತಿ ನೀಡಿದರು. ವೈದ್ಯ ಡಾ.ಅರವಿಂದ ಪಟೇಲ್, ಲೇಖಕರಾದ ಜಾಜಿ ದೇವೇಂದ್ರಪ್ಪ, ಅಜಯ್ ಬಣಕಾರ, ಸಮಾಜಮುಖಿ ಬಳಗದ ಎಸ್.ಮಂಜುನಾಥ, ಮರುಳಸಿದ್ದ ಹಾಗೂ ಸಮಾಜಮುಖಿ ನಡಿಗೆ ತಂಡದ ಸದಸ್ಯರು ಹಾಜರಿದ್ದರು. ರಾಘವ ಕಲಾಮಂದಿರದಿಂದ ಸಾಂಸ್ಕೃತಿಕ ಸಮುಚ್ಚಯದವರಗೆ ನಡಿಗೆ ಪ್ರಾರಂಭವಾಯಿತು.

ಮೊದಲ ದಿನ ಬಳ್ಳಾರಿಯ ಬ್ರೂಸ್‌ಫೂಟ್ ಮ್ಯೂಸಿಯಂ, ಬಳಿಕ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ, ನಿಟ್ಟೂರು ಪ್ರದೇಶಗಳನ್ನು ವೀಕ್ಷಿಸಿದ ಬಳಿಕ ಬಳ್ಳಾರಿ ಹೊರ ವಲಯದ ಹವಾಂಭಾವಿಯಲ್ಲಿನ ಪುರಾತನ ಬಾವಿ ವೀಕ್ಷಣೆ, ಬಳಿಕ ಸೋಮಸಮುದ್ರ ಗ್ರಾಮದಲ್ಲಿ 300ಕ್ಕೂ ಹೆಚ್ಚು ಎಮ್ಮೆಗಳನ್ನು ಸಾಕಿರುವ ಪಾಲಾಕ್ಷಗೌಡ ಅವರನ್ನು ಬೇಟಿ ಮಾಡಿ ಹೈನುಗಾರಿಕೆ ಕುರಿತು ಮಾಹಿತಿ ಪಡೆದುಕೊಂಡ ಸದಸ್ಯರು, ಶನಿವಾರ ಮಿಂಚೇರಿ ಬೆಟ್ಟ, ಅಲೆಮಾರಿಗಳು ವಾಸಿಸುತ್ತಿರುವ ಗುಡಾರನಗರ, ವೆಲ್ಲಿಂಗ್ಟನ್ ಹೌಸ್, ಬಳಿಕ ವಿಮಾನ ನಿಲ್ದಾಣ ಬಳಿಯ ಟರ್ಕಿ ಗೋರಿಗಳನ್ನು ವೀಕ್ಷಿಸಿದರು. ಭಾನುವಾರ ಸಂಗನಕಲ್ಲು ಐತಿಹಾಸಿಕ ಗುಡ್ಡ, ಬಳ್ಳಾರಿ ಕೋಟೆಯನ್ನು ವೀಕ್ಷಣೆ ಮಾಡಲಿದ್ದೇವೆ. ನಡಿಗೆಯಲ್ಲಿ ರಾಜ್ಯದ ನಾನಾ ಭಾಗಗಳ 65 ಜನರಿದ್ದೇವೆ. ಬಳ್ಳಾರಿ ನಡಿಗೆ ವಿಶೇಷ ಅನುಭವ ನೀಡಿತು. ನಡಿಗೆಯಲ್ಲಿ ಭಾಗವಹಿಸಿರುವ ಸಮಾಜಮುಖಿ ಬಳಗದ ಸದಸ್ಯರು ಬಳ್ಳಾರಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು. ಬಳ್ಳಾರಿ ಹೊರ ವಲಯದ ಜ್ಞಾನಾಮೃತ ಕಾಲೇಜಿನ ಹಾಸ್ಟೆಲ್‌ನಲ್ಲಿ ಬಳಗದ ಸದಸ್ಯರಿಗೆ

ವಸತಿ ವ್ಯವಸ್ಥೆ ಮಾಡಿದ್ದು, ನಿತ್ಯ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಾನುವಾರ ಮಧ್ಯಾಹ್ನದ ಬಳಿಕ ನಡಿಗೆ ಪೂರ್ಣಗೊಳ್ಳಲಿದೆ ಎಂದು ನಡಿಗೆಯಲ್ಲಿ ಭಾಗವಹಿಸಿರುವ ಲೇಖಕ ಜಾಜಿ ದೇವೇಂದ್ರಪ್ಪ ಕನ್ನಡಪ್ರಭಕ್ಕೆ ತಿಳಿಸಿದರು.