ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾಗಲೆಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ನಡೆಸುತ್ತಿದ್ದು, ಈ ಭಾಗದ ಶಾಸಕರಿಗೆ ಈ ಬಗ್ಗೆ ಗಂಭೀರತೆಯೇ ಇಲ್ಲ. ಪ್ರತಿ ಬುಧವಾರ, ಗುರುವಾರ ಉತ್ತರ ಕರ್ನಾಟಕದ ಸಮ್ಯಸ್ಯೆಗಳ ಬಗ್ಗೆ ಮಾತನಾಡಲು ನಿಗದಿ ಮಾಡಿದರೂ ಯಾವೊಬ್ಬ ಶಾಸಕರು ಈ ಬಗ್ಗೆ ಮಾತನಾಡುವುದಿಲ್ಲ.

ಧಾರವಾಡ:

ಡಿಸೆಂಬರ್‌ 8ಕ್ಕೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿ ಮಾಡಿದ್ದು, ಈ ಬಾರಿಯಾದರೂ ಉತ್ತರ ಕರ್ನಾಟಕ ಭಾಗದ ಶಾಸಕರು ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಿ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಖ್ಯಮಂತ್ರಿಗಳೊಂದಿಗೆ ಚಳಗಾಲದ ಅಧಿವೇಶನ ಬಗ್ಗೆ ಮಾತನಾಡಿದ್ದು ಅವರು ಒಪ್ಪಿಗೆ ಸೂಚಿಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸಿದ್ಧತೆ ಮಾಡಿಕೊಳ್ಳಲಾಗುವುದು. ಬೇಸರದ ಸಂಗತಿ ಏನೆಂದರೆ, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾಗಲೆಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ನಡೆಸುತ್ತಿದ್ದು, ಈ ಭಾಗದ ಶಾಸಕರಿಗೆ ಈ ಬಗ್ಗೆ ಗಂಭೀರತೆಯೇ ಇಲ್ಲ. ಪ್ರತಿ ಬುಧವಾರ, ಗುರುವಾರ ಉತ್ತರ ಕರ್ನಾಟಕದ ಸಮ್ಯಸ್ಯೆಗಳ ಬಗ್ಗೆ ಮಾತನಾಡಲು ನಿಗದಿ ಮಾಡಿದರೂ ಯಾವೊಬ್ಬ ಶಾಸಕರು ಈ ಬಗ್ಗೆ ಮಾತನಾಡುವುದಿಲ್ಲ. ಪ್ರಶ್ನೆ ಕೇಳಿದ ಶಾಸಕರೇ ಒಂದೇ ನಿಮಿಷದಲ್ಲಿ ಸದನ ಬಿಟ್ಟು ಹೋಗಿರುತ್ತಾರೆ. ಈ ಬಾರಿ ಈ ಭಾಗದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ಆಗದಂತೆ ನೋಡಿಕ್ಕೊಳ್ಳುತ್ತೇನೆ ಎಂದು ಹೊರಟ್ಟಿ ಹೇಳಿದರು.

ಎಲ್ಲಿಯ ವರೆಗೆ ದುಡ್ಡು ಕೊಟ್ಟು ಮತ ಹಾಕಿಸಿಕ್ಕೊಳ್ಳುವರು ಹಾಗೂ ದುಡ್ಡು ಪಡೆದು ಮತ ನೀಡುವವರು ಇರುತ್ತಾರೆಯೋ ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿ ಬಗ್ಗೆ ಪ್ರಶ್ನಿಸುವುದೇ ತಪ್ಪೆನಿಸುತ್ತದೆ. ಆದ್ದರಿಂದ ಕಾಲವೇ ಇದನ್ನೆಲ್ಲ ಸುಧಾರಿಸಬೇಕಿದೆ ಎಂದು ಹೊರಟ್ಟಿ ಕಳವಳ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಹೊರಟ್ಟಿ, ನವೆಂಬರ್ ಕ್ರಾಂತಿನೋ, ಡಿಸೆಂಬರ ಕ್ರಾಂತಿನೋ? ಇಂತಹ ನಡವಳಿಕೆಗಳು ನಮಗಂತೂ ಸರಿ ಅನಿಸುತ್ತಿಲ್ಲ. ನಿತ್ಯವೂ ಮಾಧ್ಯಮಗಳಲ್ಲಿ ಗುರುತರ ಸಮಸ್ಯೆಗಳ ಬದಲು ಇಂತಹ ರಾಜಕೀಯ ಸುದ್ದಿಗಳ ಚರ್ಚೆ ನಡೆದಿರುವುದು ಖೇದಕರ ಎಂದರು.

ಪ್ರತಾಪ ಸಿಂಹ, ಪ್ರದೀಪ ಈಶ್ವರ ಪರಿಸ್ಪರ ನಿಂದನೆ ವಿಚಾರವಾಗಿ ಮಾತನಾಡಿದ ಹೊರಟ್ಟಿ, ಮನುಷ್ಯತ್ವ ಇದ್ದವರು ಅವಹೇಳನಕಾರಿ ಮಾತುಗಳನ್ನು ಮಾತನಾಡುತ್ತಾರಾ? ಶಾಸಕರಾದವರು ಮಾದರಿಯಾಗಬೇಕು. ಸಾರ್ವಜನಿಕವಾಗಿ ಏನು ಮಾತನಾಡಬೇಕು ಎಂಬುದನ್ನು ಮತ್ತೊಬ್ಬರು ಹೇಳಬೇಕಾ? ಇವರೆಲ್ಲ ಸೌಜನ್ಯದ ಶಾಸಕರಾ? ಎಂದು ಹೊರಟ್ಟಿ ಪ್ರಶ್ನಿಸಿದರು.