ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಮಾತನಾಡಿ ಅವರು, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸಕಟ್ಟಡವನ್ನು 3.20 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆಸ್ಪತ್ರೆ ಹೊಸ ಕಟ್ಟಡದಲ್ಲಿ ವೈದ್ಯರು, ರೋಗಿಗಳಿಗೆ ಅನುಕೂಲವಾಗುವಂತೆ ಹಲವು ಸೌಲಭ್ಯ ಒದಗಿಸಿಕೊಡಲಾಗುತ್ತಿದೆ. ಆಡಳಿತ ಕಚೇರಿ, ಚಿಕಿತ್ಸೆ ಕಟ್ಟಡ, ಔಷಧಗಳ ಶೇಖರಣಾ ಕೊಠಡಿ ಸೇರಿದಂತೆ ಹಲವರು ಪ್ರತ್ಯೇಕ ಕೊಠಡಿಗಳು ಬರುವುದರಿಂದ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಮಾಡುವುದಷ್ಟೆ ಅಲ್ಲ ಅಲ್ಲಿಗೆ ಬೇಕಾದ ವೈದ್ಯರು, ನರ್ಸ್, ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬ ವಿಚಾರವಾಗಿ ವಿಧಾನಸಭೆ ಕಲಾಪದಲ್ಲಿಯೇ ಚರ್ಚಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇಲ್ಲವಾದರೆ ಆರೋಗ್ಯ ಸಮಸ್ಯೆಯಲ್ಲಿ ಅಲ್ಪಮಟ್ಟಿಗೆ ಸುಧಾರಣೆ ಕಾಣಬಹುದಾಗಿದೆ ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ಮತ್ತು ಹೆರಿಗೆ ವಿಭಾಗವನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡಲು ಪ್ರಯತ್ನ ನಡೆಸಲಾಗಿದೆ. ಪ್ರತ್ಯೇಕ ಆಸ್ಪತ್ರೆ ನಿರ್ಮಾಣವಾಗಬೇಕಾದರೆ ಇಂತಿಷ್ಟು ಹೆರಿಗೆ ನಡೆಯಬೇಕು ಎಂಬ ನಿಯಮವಿದೆ. ಅದಕ್ಕಾಗಿ ಆಶಾ ಕಾರ್ಯಕರ್ತೆಯರ ಸಹಕಾರದಿಂದ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಉಪವಿಭಾಗೀಯ ಆಸ್ಪತ್ರೆಯನ್ನು 150 ಬೆಡ್‌ಗೆ ಏರಿಕೆ ಮಾಡಲು ಕ್ರಮವಹಿಸಿದೆ. ಆಸ್ಪತ್ರೆಯಲ್ಲಿ ಹಲವು ವಿಭಾದ ವೈದ್ಯರನ್ನು ಸಹ ಹೆಚ್ಚಳ ಮಾಡಲು ಕ್ರಮವಹಿಸಲಾಗಿದೆ ಎಂದರು.


ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ವೈದ್ಯ ಡಾ.ಮಣಿ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಮಂಜುನಾಥ್, ಗುತ್ತಿಗೆದಾರ ಎಂ.ಪಿ.ಚೇತನ್‌ಕುಮಾರ್, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಬಿ.ಟಿ.ಶಿವಣ್ಣ, ಚಲುವರಾಜು, ಡಿ.ಕೆ.ಕೃಷ್ಣೇಗೌಡ, ಸಿದ್ದೇಗೌಡ, ಪಿಡಿಒ ರಘು, ಮಹದೇವು, ಮರಿದೇವು, ರಾಮಣ್ಣ ಸೇರಿದಂತೆ ಹಲವರು ಇದ್ದರು.