ಮಡಿಕೇರಿ: ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಹಾಗೂ ಮಾನವ ಸಂಘರ್ಷವನ್ನು ತಡೆಯಲು ವಿಫಲವಾದ ಹಾಗೂ ರೈತರನ್ನು ಕಡೆಗಣಿಸಿರುವ ರಾಜ್ಯ ಸರ್ಕಾರದ ಧೋರಣೆಯ ವಿರುದ್ಧ ಸೋಮವಾರ ಬಿಜೆಪಿಯಿಂದ ಬೃಹತ್ ಜನಾಕ್ರೋಶ ವಾಹನ ಜಾಥಾ ಹಾಗೂ ಪ್ರತಿಭಟನಾ ಸಭೆ ಮಡಿಕೇರಿ ನಗರದಲ್ಲಿ ನಡೆಯಿತು.ಜಿಲ್ಲೆಯ ಭಾಗಮಂಡಲ, ಸೋಮವಾರಪೇಟೆ, ಕುಟ್ಟ, ಸಿದ್ದಾಪುರ, ತೊರೆನೂರು ವ್ಯಾಪ್ತಿಯಿಂದ ನೂರಾರು ವಾಹನಗಳ ಮೂಲಕ ಕಾರ್ಯಕರ್ತರು, ರೈತರೊಂದಿಗೆ ವಾಹನ ಜಾಥಾ ಮೂಲಕ ಆಗಮಿಸಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡರು.

ಸಂಸದ ಯದುವೀರ್ ಒಡೆಯರ್, ಜಿಲ್ಲೆಯ ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್‌ಸಿ ಸುಜಾಕುಶಾಲಪ್ಪ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು, ರೈತರು ಪಾಲ್ಗೊಂಡಿದ್ದರು.ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ವಾಟ್ಸಪ್ ಗ್ರೂಪ್‌ಗಳಲ್ಲಿ ನೋಡಿದರೆ ಕೊಡಗು ಸಿಂಗಾಪುರ ಆಗಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಕೊಡಗು ರಸ್ತೆಗಳಲ್ಲಿ ತೆರಳಿದರೆ ತಿಳಿಯುತ್ತದೆ ಸಿಂಗಾಪುರದ ಅವಸ್ಥೆ ಎಂದು ಟೀಕಿಸಿದರು.

ಮೂರು ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶಾಸಕರು ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಅಂದು ಬಿಜೆಪಿ ಸರ್ಕಾರವಿದ್ದ ಸಂದರ್ಭ 120 ಕೋಟಿ ಹಣ ನೀಡಿದ್ದೆವು. ಆ ಹಣದಲ್ಲಿ ಎಷ್ಟು ಕೆಲಸವಾಗಿದೆ. ಆ ನಂತರ 2023-2024 ರಲ್ಲಿ ಬಂದ ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ 120 ಕೋಟಿ ಅನುದಾನ ಘೋಷಣೆ ಮಾಡಿತ್ತು. ಇದರಲ್ಲಿ ಎಷ್ಟು ರೈಲ್ವೆ ಬ್ಯಾರಿಕೇಡ್ ಹಾಕಿದ್ದೀರಿ? ಆನೆ ಕಂದಕ ನಿರ್ಮಾಣ ಎಷ್ಟು ಮಾಡಿದ್ದೀರಾ? ಎಷ್ಟು ಆನೆ ಕಂದಯ ದುರಸ್ತಿ ಮಾಡಿದ್ದೀರಾ ಎಂದು ಪ್ರಶ್ನಿಸಿದರು.ಇಂದು ಚುನಾವಣಾ ಪ್ರಣಾಳಿಕೆಯಲ್ಲಿನ ಘೋಷಣೆ ಘೋಷಣೆಯಾಗೇ ಉಳಿದಿದೆ. ಕಾಂಗ್ರೆಸ್ ಜನತೆಗೆ ಮೋಸ ಮಾಡುತ್ತಾ ಅಧಿಕಾರ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು. ಆನೆ ಮಾನವ ಸಂಘರ್ಷ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಅಥವಾ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ಅನುದಾನ ಘೋಷಣೆಯಾದರೂ ಕೂಡ ಅದನ್ನು ಅನುಷ್ಠಾನ ತರುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ಅದನ್ನು ಮಾಡುತ್ತಿಲ್ಲ ಎಂದು ದೂರಿದರು.

ನಿಯಂತ್ರಣಕ್ಕೆ ಬೇಕಾದ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಇಲ್ಲದಿದ್ದರೆ ಕೊಡಗು ಜಿಲ್ಲೆಯಲ್ಲಿ ಜನತೆಯೇ ಕಾನೂನು ಕ್ರಮ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಬಿಜೆಪಿ ಜನಪರ ಹೋರಾಟ ಮುಂದುವರಿಯುತ್ತದೆ ಎಂದರು.

ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಸಿ ಮತ್ತು ಡಿ ಲ್ಯಾಂಡ್‌ನ್ನು ಅರಣ್ಯಕ್ಕೆ ವರ್ಗಾವಣೆ ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಇದು ಪರಿಸರವಾದಿಗಳ ಕುಮ್ಮಕ್ಕಿನಿಂದ ಇದಾಗಿದೆ. ಸೋಮವಾರಪೇಟೆ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಗೆ ಬಂದ ಹಿನ್ನೆಲೆ 5000 ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿಗೆ ತಳ್ಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


ಬಿಜೆಪಿ ಜಿಲ್ಲಾಧ್ಯಕ್ಷ ನಾಂಪಡ ರವಿಕಾಳಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ರೈತರು ಹಾಗೂ ಕಾರ್ಮಿಕರು ಕಾಡಾನೆ ದಾಳಿಗೆ ತುತ್ತಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ ರೈತರಿಗೆ ರಾಜ್ಯ ಸರ್ಕಾರ ನಾಮಕಾವಸ್ತೆಗೆ ಸಣ್ಣ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಆನೆ ಹಾವಳಿ ನಿಯಂತ್ರಣಕ್ಕೆ ಮುಂದಾಗದಿದ್ದಲ್ಲಿ ವಿಧಾನಸೌದಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಇನ್ನಾದರೂ ಎಚ್ಚೆತ್ತುಕೊಂಡು ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಇದಕ್ಕೆ ಪ್ರತ್ಯೇಕವಾಗಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.ಎಂಎಲ್‌ಸಿ ಸುಜಾಕುಶಾಲಪ್ಪ ಮಾತನಾಡಿ, ಆನೆ ಮಾನವ ಸಂಘರ್ಷಕ್ಕೆ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಿದ್ದೇವೆ. ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ನೀಡುತ್ತಾರೆಯೇ ಹೊರತು ಶಾಶ್ವತ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಮುಂದಿನ ದಿನಗಳಲ್ಲಿ 5 ಮಲೆನಾಡು ಪ್ರದೇಶ(ಆನೆ ದಾಳಿಹೆಚ್ಚಿರುವ ಪ್ರದೇಶ) ವ್ಯಾಪ್ತಿಯಲ್ಲಿ ರೈತರನ್ನು ಸಂಘಟನೆ ಮಾಡಿ ಬಿಜೆಪಿಯಿಂದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿ.ಕೆ.ಲೋಕೇಶ್, ಮಹೇಶ್ ಜೈನಿ, ಚಲನ್ ಕುಮಾರ್, ವಕ್ತಾರ ಅರುಣ್ ಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ರಾಬಿನ್ ದೇವಯ್ಯ, ಬಿ.ಬಿ.ಭಾರತೀಶ್, ಮಾಜಿ ಎಂಎಲ್‌ಸಿ ಎಚ್.ಜಿ.ಮೇದಪ್ಪ, ಅಪ್ಪಚೆಟ್ಟೋಳಂಡ ಮನುಮುತ್ತಪ್ಪ, ಮುಖಂಡರಾದ ಡಾ.ನವೀನ್ ಕುಮಾರ್ ಇದ್ದರು.

ಕೇಂದ್ರ ಅನುದಾನ ಬಳಸದ ರಾಜ್ಯ: ಯದುವೀರ್: ವನ್ಯಜೀವಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ರು.350 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಆದರೆ ಈ ಹಣವನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.

ಕರ್ನಾಟಕಕ್ಕೆ ಕೇಂದ್ರದಿಂದ ಯಾವುದೇ ಅನುದಾನ ಬಂದಿಲ್ಲ ಎಂಬುದು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದ ಯದುವೀರ್, ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಕೊಡಗಿನ ಸಮಸ್ಯೆಯ ತೀವ್ರತೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.