ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯ ಮಾನ- ಮರ್ಯಾದೆ ಇಡೀ ರಾಜ್ಯದಲ್ಲಿ ಹರಾಜಾಗುತ್ತಿದೆ. ಶನಿವಾರ ನಡೆದ ಕೆಂಪೇಗೌಡ ಜಯಂತಿಯಲ್ಲಿ ಇಷ್ಟೊಂದು ಗೊಂದಲ ಉಂಟಾಗಲು ಮುಖ್ಯ ಕಾರಣ ಶಾಸಕ ಪ್ರದೀಪ್ ಈಶ್ವರ್. ಕೆಂಪೇಗೌಡ ಜಯಂತಿಗೆ ಸಮುದಾಯದವರನ್ನೇ ಒಳಗೆ ಬಿಡದೆ ಗೇಟ್ ಹಾಕಿಸಿದ್ದು, ಗಲಾಟೆಗೆ ಪ್ರಚೋದನೆ ನೀಡಿದ್ದೇ ಪ್ರದೀಪ್ ಈಶ್ವರ್, ಇದೆಲ್ಲಾ ವೀಡಿಯೋ ರೆಕಾರ್ಡ ಆಗಿದೆ. ಪೊಲೀಸರು, ಜಿಲ್ಲಾಡಳಿತ ಶಾಸಕರು, ಸರ್ಕಾರದ ಕೈಗೊಂಬೆಯಾಗಿ ವರ್ತಿಸಬಾರದು. ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಎ1 ಆರೋಪಿಯನ್ನಾಗಿ ಪ್ರದೀಪ್ ಈಶ್ವರ್ ಹೆಸರಿರಬೇಕು, ಇಲ್ಲಾಂದ್ರೆ ಜಾತ್ಯತೀತವಾಗಿ, ಪಕ್ಷಾತೀತವಾಗಿ ಬೃಹತ್ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಸದ ಡಾ ಕೆ.ಸುಧಾಕರ್ ಎಚ್ವರಿಕೆ ನೀಡಿದರು.ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕೆಂಪೇಗೌಡ ಜಯಂತಿಯಲ್ಲಿ ನಡೆದ ಗಲಭೆಯ ಕುರಿತು ಹಮ್ಮಿಕೊಳ್ಳಲಾಗಿದ್ದ ಬಿಜೆಪಿ- ಜೆಡಿಎಸ್ ಮುಖಂಡರ ಜಂಟಿ ಸಭೆಯಲ್ಲಿ ಮಾತನಾಡಿ, ಕೆಂಪೇಗೌಡ ಜಯಂತಿ ವೇಳೆ ನಡೆದ ಗದ್ದಲ- ಗೊಂದಲ ಹಾಗೂ ಗಲಾಟೆಗೆ ಮುಖ್ಯವಾಗಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ಆತನ ಪ್ರಚೋದನೆಯೇ ಇದಕ್ಕೆಲ್ಲಾ ಕಾರಣವಾಗಿದ್ದರೂ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ರೈತರ ಮಕ್ಕಳು, ಸಮುದಾಯದ ಮಕ್ಕಳನ್ನು ಬಂಧಿಸಿ ಜೈಲಿಗೆ ಕಳಿಸುತ್ತಿರುವುದನ್ನು ಖಂಡಿಸಿದರು.
ನಾವು ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಶಾಂತಿ, ಸುವ್ಯವಸ್ಥೆ ಕೆಡುವುದಕ್ಕೆ ಅವಕಾಶಕೊಡಬಾರದು. ಇಲ್ಲಿ ಒಕ್ಕಲಿಗರು ಮತ್ತು ಬಲಜಿಗರು ಅಣ್ಣ- ತಮ್ಮಂದಿರಂತೆ ಇದ್ದೇವೆ. ಯಾವುದೇ ಕಾರಣಕ್ಕೂ ಇಬ್ಬರ ಮಧ್ಯೆ ಸಾಮರಸ್ಯ ಕದಡುವುದಕ್ಕೆ ಬಿಡುವುದಿಲ್ಲ. ಸಭೆಯಲ್ಲಿ ಒಕ್ಕಲಿಗ ಮತ್ತು ಬಲಿಜಿಗ ಪ್ರಮುಖ ಮುಖಂಡರುಗಳನ್ನು ಕರೆಸಲಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಪೊಲೀಸ್ ವ್ಯವಸ್ಥೆ ವಿರುದ್ಧ ಹೋರಾಡಲು ತೀರ್ಮಾನ ತಗೆದುಕೊಳ್ಳಲಾಗಿದೆ ಎಂದರು.ಇಲ್ಲಿನ ಶಾಸಕ ಪ್ರದೀಪ್ ಈಶ್ಬರ್ ಎಡಬಿಡಂಗಿ , ಆತನ ಕೋತಿ ಚೇಷ್ಟೆಯಿಂದಲೇ ಇಷ್ಟೊಂದು ಗಲಾಟೆಗೆ ಕಾರಣವಾಗಿದೆ. ನಿನ್ನೆ ಪ್ರೋಟೋಕಾಲ್ ಬಿಟ್ಟು ಕಾಂಗ್ರೆಸ್ ಪುಡಾರಿಗಳನ್ನೆಲ್ಲಾ ಯಾಕೆ ವೇದಿಕೆ ಮೇಲೆ ಬಿಟ್ಟಿದ್ದರು. ಕೆಂಪೇಗೌಡ ಜಯಂತಿಗೆ ಬಂದವರನ್ನೇ ಕನ್ನಡ ಭವನದ ಒಳಗೆ ಬಿಡದೆ ಅಡ್ಡ ಹಾಕಿದ್ದು ಯಾಕೆ. ಸಮಾರಂಭ ನಂತರ ನಡೆದ ಎಲ್ಲಾ ಪ್ರಕ್ರಿಯೆಗಳು ಶಾಸಕ ಪ್ರದೀಪ್ ಈಶ್ವರ್ ಮಾಡಿದ ತಂಟೆಗಳೆ ಆಗಿವೆ. ಒಳಗಡೆ ಸಮಾರಂಭದಲ್ಲಿ ಬೆಕ್ಕಿನಂತೆ ಕೂತಿದ್ದ ಪ್ರದೀಪ್ ಹೊರಗಡೆ ಉತ್ತರಕುಮಾರನ ಪೌರುಷ ತೋರಿಸೋದು ಎಷ್ಟು ಸರಿ. ಇದಕ್ಕೆಲ್ಲಾ ಜಿಲ್ಲಾಡಳಿತ ಯಾಕೆ ಅನುಮತಿ ನೀಡಿದ್ದು. ಇಷ್ಟೆಲ್ಲಾ ಗಲಾಟೆಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವೇ ಕಾರಣ ಎಂದು ಆರೋಪಿಸಿದರು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಕೆವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ, ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಮುಖಂಡರಾದ ಆವುಲ ಕೊಂಡರಾಯಪ್ಪ, ಚಿಕ್ಕಗರಿಗರೆಡ್ಡಿ, ಜಿ.ಆರ್.ಶ್ರೀನಿವಾಸ್ ಇತರೆ ಪ್ರಮುಖ ಮುಖಂಡರು, ಮತ್ತಿತರರು ಇದ್ದರು.