ಚಿತ್ರದುರ್ಗದ ಎಸ್.ಜಿ ಕಲ್ಯಾಣ ಮಂಟಪದಲ್ಲಿ ನಡೆದ ಮರ್ಚೆಂಟ್ಸ್ ಬ್ಯಾಂಕಿನ ಸರ್ವ ಸದಸ್ಯರ ಸಭೆಯನ್ನು ಬ್ಯಾಂಕಿನ ಅಧ್ಯಕ್ಷ ರಘುರಾಮರೆಡ್ಡಿ ಉದ್ಗಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗದ ಪ್ರತಿಷ್ಠಿತ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕು ಈ ಸಾಲಿಗೆ ಅಮೃತ ಮಹೋತ್ಸವ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಈ ವರ್ಷದ ಅಂತ್ಯಕ್ಕೆ ಬ್ಯಾಂಕಿನ ಅಮೃತ ಮಹೋತ್ಸವವನ್ನು ನಗರದಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಬ್ಯಾಂಕಿನ ನೂತನ ಅಧ್ಯಕ್ಷ ರಘುರಾಮರೆಡ್ಡಿ ಘೋಷಿಸಿದರು.

ನಗರದ ಎಸ್.ಜಿ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕಿನ 75 ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ನುಡಿಗಳನ್ನಾಡಿದ ಅವರು ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಎಸ್.ಆರ್. ಲಕ್ಷ್ಮಿಕಾಂತರೆಡ್ಡಿ ಅವರ ಮಹಾದಾಸೆಯಂತೆ ಆಡಳಿತ ಮಂಡಳಿಯ ಸರ್ವಾನುಮತದ ತೀರ್ಮಾನದಂತೆ ಬ್ಯಾಂಕಿನ ಸದಸ್ಯರ ಅಂತ್ಯ ಸಂಸ್ಕಾರ ನಿಧಿಯನ್ನು ಹಾಲಿ ಇರುವ ರು 15 ಸಾವಿರದಿಂದ ರು 25 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ ಎಂದರು. ದಶಕಗಳಿಂದ ಶೇರುದಾರರಿಗೆ ವಿತರಣೆ ಮಾಡಿಕೊಂಡು ಬರುತ್ತಿದ್ದ ಬ್ಯಾಂಕಿನ ಲಾಭಾಂಶವನ್ನು ಈ ವರ್ಷವೂ ಶೇ. 25 ರಷ್ಟು ವಿತರಣೆ ಮಾಡಲಾಗುತ್ತಿದೆ ಎಂದರು.

ನಿಕಟಪೂರ್ವ ಅಧ್ಯಕ್ಷರ ಮಹಾದಾಸೆಯಂತೆ ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳುವ ಬಡ, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಾಯಿದೆ ಸಾಲದ ಬಡ್ಡಿ ದರವನ್ನು ಶೇ. 13 ರಿಂದ 10 ಕ್ಕೆ ಇಳಿಸುವುದಾಗಿಯೂ, ಎಲ್ಲಾ ರೀತಿಯ ಸಾಲಗಳ ಮೇಲೆ ಈಗಿರುವ ಬಡ್ಡಿ ದರವನ್ನು ಶೇ. 0.5೦ ರಷ್ಟು ಬಡ್ಡಿ ಕಡಿಮೆ ಮಾಡಲಾಗುವುದು ಎಂದು ರಘುರಾಮರೆಡ್ಡಿ ಹೇಳಿದರು.

ಬ್ಯಾಂಕು 2025-26 ನೇ ಸಾಲಿನಲ್ಲಿ ಬ್ಯಾಂಕಿನ ತೆರಿಗೆ ಮತ್ತು ಅವಕಾಶಗಳ ಮುಂಚಿನ ವರಮಾನವು ರು 5.57 ಕೋಟಿಗಳಿದ್ದು, ಈ ಪೈಕಿ ತೆರಿಗೆ ಮತ್ತು ಅವಕಾಶಗಳಿಗೆ ರು.1.71 ಕೋಟಿ ಪಾವತಿಸಿದ ನಂತರ ನಿವ್ವಳ ವರಮಾನವು ರು 3.86 ಕೋಟಿಗಳಾಗಿರುತ್ತದೆ. ಬ್ಯಾಂಕಿನ ನಿವ್ವಳ ಅನುತ್ಪಾದಕ ಸಾಲ ಶೂನ್ಯ ಪ್ರಮಾಣದಲ್ಲಿದೆ ಎಂದರು.

42 ವರ್ಷಗಳ ಕಾಲ ಬ್ಯಾಂಕಿನ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಮೂರೂವರೆ ದಶಕಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಹಾಲಿ ನಿರ್ದೇಶಕರಾಗಿರುವ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಸ್.ಆರ್. ಲಕ್ಷ್ಮಿಕಾಂತರೆಡ್ಡಿ ಅವರನ್ನು ಆಡಳಿತ ಮಂಡಳಿ ಹಾಗೂ ಸದಸ್ಯರ ಪರವಾಗಿ ಸನ್ಮಾನಿಸಲಾಯಿತು. ಲಕ್ಷ್ಮಿಕಾಂತರೆಡ್ಡಿ ಅವರು ಬ್ಯಾಂಕಿಗೆ ಸಲ್ಲಿಸಿರುವ ಸೇವೆ ಹಾಗೂ ಸಾಧನೆಯ ಸಂಕ್ಷಿಪ್ತ ಪರಿಚಯವನ್ನು ಬ್ಯಾಂಕಿನ ನಿರ್ದೇಶಕ ಶ. ಮಂಜುನಾಥ ವಾಚನ ಮಾಡಿದರು.

ಬ್ಯಾಂಕಿನ ನಿರ್ದೇಶಕ ಪಿ.ಎಲ್.ಸುರೇಶ್ ರಾಜು ಸ್ವಾಗತಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಎಲ್.ಈ. ಶ್ರೀನಿವಾಸ್ ಬಾಬು ಲಿಂಗಂ ಮಾಜಿ ಸಚಿವ ಡಿ. ಸುಧಾಕರ್, ವಿಶ್ರಾಂತ ಪತ್ರಕರ್ತ ಜಿ.ಎಸ್. ಉಜ್ಜನಪ್ಪ ಸೇರಿದಂತೆ ಕಳೆದ ಸಾಲಿನಲ್ಲಿ ಸ್ವರ್ಗಸ್ಥರಾದ ಸದಸ್ಯರ ಹೆಸರು ವಾಚನ ಮಾಡುವ ಮೂಲಕ ಒಂದು ನಿಮಿಷ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬ್ಯಾಂಕಿನ ಹಿರಿಯ ಸದಸ್ಯರು, ಸದಸ್ಯರ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರ ಎಸ್ಎಸ್ ಎಲ್ ಸಿ, ಪಿಯುಸಿ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್. ಮಲ್ಲಿಕಾರ್ಜುನ ಇದ್ದರು.